'ನಾವು ಡಂಗೂರ ಹೊಡೆದು ಕೆಲಸ ಮಾಡಲ್ಲ' ಸಮಾಜಸೇವೆ ಪ್ರಶ್ನಿಸಿದವರ ವಿರುದ್ಧ ಜಗ್ಗೇಶ್ ಗರಂ
ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಕಿಲ್ಲರ್ ವೈರಸ್ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದೆ. ಕೊರೊನ ಭೀತಿಯಿಂದ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದೆ. ಇದರಿಂದ ಅಸಾಹಯಕರು, ಕೂಲಿಕಾರ್ಮಿಕರು, ಅಸಹಾಯಕರು ಸೇರಿದಂತೆ ಅನೇಕರು ಊಟ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಸಮಯದಲ್ಲಿ ಬಡವರಿಗೆ ಸಹಾಯ ಮಾಡಲು ಅನೇಕರು ಮುಂದೆ ಬಂದಿದ್ದಾರೆ. ಈಗಾಗಲೆ ಸಾಕಷ್ಟು ಸೆಲಬ್ರಿಟಿಗಳು ಸಿಎಂ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡುತ್ತಿದ್ದಾರೆ. ಆದರೆ ಕನ್ನಡ ಸ್ಟಾರ್ ಕಲಾವಿದರು ಯಾಕೆ ಮುಂದೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಸಹ ಎದ್ದಿತ್ತು. ಆದರೀಗ ಅನೇಕ ಕನ್ನಡ ಕಲಾವಿದರು ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಆದರೆ ಹೀಗೆ ಪ್ರಶ್ನೆ ಮಾಡುವವರ ವಿರುದ್ಧ ನಟ ಜಗ್ಗೇಶ್ ಗರಂ ಆಗಿದ್ದಾರೆ. ಮುಂದೆ ಓದಿ..

ದೇವರು ಮೆಚ್ಚುವ ಕೆಲಸ ಮಾಡುತ್ತೇವೆ
"ನಾವು ಮಾಡುವ ಸಹಾಯ ಇನ್ನೊಬ್ಬರಿಗೆ ಗೊತ್ತಾಗಬೇಕಾಗಿಲ್ಲ. ಡಂಗೂರ ಸಾರುತ್ತ ಕೆಲಸ ಮಾಡುವವರು ನಾವಲ್ಲ, ನಮ್ಮ ಕೆಲಸ ನೋಡಿ ಮೆಚ್ಚಲು ದೇವರಿದ್ದಾನೆ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಬಡವರಿಗೆ ಸಹಾಯ ಮಾಡುತ್ತಿರುವ ಜಗ್ಗೇಶ್ ಟೀಂನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಜಗ್ಗೇಶ್ ಟ್ವೀಟ್ ನಲ್ಲಿ ಏನಿದೆ?
"ನಾವು ಡಂಗೂರ ಹೊಡೆದು ಜನರಿಗೆ ಕಾಣುವಂತೆ ಕೆಲ್ಸಮಾಡೊಲ್ಲಾ. ನಮ್ಮ ಒಳಗೆ ಒಬ್ಬನಿದ್ದಾನೆ ಅವನ ಹೆಸರು ದೇವರು ಅಂತ. ಅವನ ಮೆಚ್ಚಿಸಲು ಕೆಲಸಮಾಡುತ್ತೇವೆ. ನಿಮಗೆ ವಾಕರಿಕೆ ಆಗದಿದ್ದರೆ ಹೇಳಿ ದಿನ ತಮಟೆಯ ಹೊಡೆದು ನಮ್ಮಕಾರ್ಯ ಅನುಮಾನ ಇದ್ದವರಿಗೆ ತೋರಿಸುತ್ತೇವೆ. Dont waste yours and ours time. ಸಾಧ್ಯವಾದರೆ ಸಹಾಯ ಮಾಡಿ.ಇಲ್ಲಾ ಸುಮ್ಮನಿರಿ" ಎಂದು ಹೇಳಿದ್ದಾರೆ.
1997 ರಿಂದ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿದ್ದೇವೆ
"ನಮ್ಮ ಸಂಘದ ಕಾರ್ಯ ತಮಟೆ ಬಾರಿಸದೆ ಸಮಾಜ ಸೇವೆ ಮಾಡುವುದು. freeambulance, ತಂಗುದಾಣ, ಅನ್ನದಾನ, gogreen, ಮರ ನೆಡುವುದು, ಅಶಕ್ತರಿಗೆ ಸಹಾಯ ಮಾಡೋದು, ಅಶಕ್ತ ಕಲಾವಿದರಿಗೆ ಧನಸಹಾಯ ಅನೇಕ ಮಕ್ಕಳಿಗೆ ವಾರ್ಷಿಕ ಫೀಸ್ ಕಟ್ಟೋದು. ಇದು 1997 ರಿಂದ ರಾಯರ ದಯೆಯಿಂದ ಪ್ರಚಾರವಿಲ್ಲದೆ ನಡೆಯುತ್ತಿದೆ. ಮುಂದೆಯು ನಡೆಯುತ್ತದೆ." ಎಂದು ಜಗ್ಗೇಶ್ ತಾವು ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ವಿವರಿಸಿ ಟ್ವೀಟ್ ಮಾಡಿದ್ದಾರೆ.
ಬಿಟ್ಟಿ ಸಲಹೆ ಕೊಡೋರಿಗೆ ಜಗ್ಗೇಶ್ ಕಿವಿ ಮಾತು
ಸಹಾಯ ಮಾಡಿ ಎಂದವರಿಗೆ ಜಗ್ಗೇಶ್ ನೀಡಿರುವ ಪ್ರತಿಕ್ರಿಯೆ ಇದು. "ಅನ್ಯ ಭಾಷೆ ನಟ ನಟಿ ಕರ್ನಾಟಕದಲ್ಲಿ ದುಡ್ಡು ಮಾಡಿ ಅವರ ರಾಜ್ಯಕ್ಕೆ ನೀಡುತ್ತಿದ್ದಾರೆ. ಕರ್ನಾಟಕಕ್ಕೆ ಅಲ್ಲಾ. ಬೆರಳೆಣಿಸುವ ನಮ್ಮ ರಂಗದವರು ಕೈಲಾಗಿದ್ದು ಮಾಡುತ್ತಿದ್ದೇವೆ. ಅನೇಕ ನಮ್ಮ ನಟನಟಿಯರು ಪಾಪ ಅವರ ಜೀವನಕ್ಕೆ ನರಳುತ್ತಿದ್ದಾರೆ. ಇಂಥ ಬಿಟ್ಟಿ ಸಲಹೆ socialmedia ದಲ್ಲಿ ನಿಲ್ಲಿಸಿ. ಸಾಧ್ಯವಾದರೆ ನೀವುಮಾಡಿ jiosimಲ್ಲಿ ಹೇಳುವುದು ಸುಲಭ" ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











