'ಕೆಜಿಎಫ್ 2', 'ವಿಕ್ರಾಂತ್ ರೋಣ' ಸಿನಿಮಾಗಳ ಬಗ್ಗೆ ನಟ ಕಾರ್ತಿಕೇಯ ಮಾತು
ಕಾರ್ತಿಕೇಯ ಗುಮ್ಮಕೊಂಡ ತೆಲುಗು ಚಿತ್ರರಂಗದ ಜನಪ್ರಿಯ ಯುವನಟ. 'ಆರ್‌ಎಕ್ಸ್ 100' ಸಿನಿಮಾ ಮೂಲಕ ಕರ್ನಾಟಕದಲ್ಲಿಯೂ ಜನಪ್ರಿಯತೆ ಗಳಿಸಿರುವ ಕಾರ್ತಿಕೇಯ ನಿನ್ನೆಯಷ್ಟೆ ಬೆಂಗಳೂರಿಗೆ ಆಗಮಿಸಿದ್ದರು.
ಕಾರ್ತಿಕೇಯ ಗುಮ್ಮಕೊಂಡ ತಮಿಳಿನ 'ವಲಿಮೈ' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅಜಿತ್ ನಾಯಕನಾಗಿರುವ ಈ ಸಿನಿಮಾದಲ್ಲಿ ಕಾರ್ತಿಕೇಯ ಗುಮ್ಮಕೊಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕಾರ್ತಿಕೇಯ, ಕರ್ನಾಟಕ, ಬೆಂಗಳೂರು ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಜೊತೆಗೆ ಕನ್ನಡದ 'ಕೆಜಿಎಫ್', 'ಕೆಜಿಎಫ್ 2', 'ವಿಕ್ರಾಂತ್ ರೋಣ' ಸಿನಿಮಾಗಳ ಬಗ್ಗೆ ಮಾತನಾಡಿದರು.

''ನನಗೆ ಬೆಂಗಳೂರಿನಲ್ಲಿ ಸಾಕಷ್ಟು ಗೆಳೆಯರಿದ್ದಾರೆ. ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಕರ್ನಾಟಕದವರ ಆತಿಥ್ಯ ಸದಾ ಆಪ್ತವಾಗಿರುತ್ತದೆ. ನನ್ನ 'ಆರ್‌ಎಕ್ಸ್ 100' ಸಿನಿಮಾವನ್ನು ಕರ್ನಾಟಕದ ಜನ ಇಲ್ಲಿಯೂ ಸೂಪರ್ ಹಿಟ್ ಮಾಡಿದ್ದಾರೆ ಅದಕ್ಕೆ ನಾನು ಋಣಿ'' ಎಂದಿದ್ದಾರೆ ಕಾರ್ತಿಕೇಯ.
''ಕನ್ನಡದಲ್ಲಿಯೂ ಬಿಡುಗಡೆ ಆಗುತ್ತಿರುವ ನಾನು ನಟಿಸಿರುವ ಮೊದಲ ಸಿನಿಮಾ 'ವಲಿಮೈ'. ನಾನು ಮುಂದಿನ ಬಾರಿ ಬೆಂಗಳೂರಿಗೆ ಬರುವ ವೇಳೆಗೆ ನನ್ನ ಪೂರ್ಣ ಭಾಷ ಕನ್ನಡದಲ್ಲಿರಲಿದೆ. ಅಷ್ಟರಲ್ಲಿ ನಾನು ಕನ್ನಡ ಭಾಷೆ ಕಲಿಯಲಿದ್ದೇನೆ. ಈ ವರ್ಷ ನಾನು ತಮಿಳು ಭಾಷೆ ಕಲಿತಿದ್ದೇನೆ. ಮುಂದಿನ ಬಾರಿ ಕನ್ನಡ ಭಾಷೆ ಕಲಿಯಲಿದ್ದೇನೆ'' ಎಂದು ಕಾರ್ತಿಕೇಯ ಹೇಳಿದರು.
''ಕೆಲ ವರ್ಷಗಳಿಂದ ಈಚೆಗೆ ಕನ್ನಡ ಸಿನಿಮಾಗಳು ಗಮನ ಸೆಳೆಯುತ್ತಿವೆ. 'ಕೆಜಿಎಫ್', 'ಕೆಜಿಎಫ್ 2', 'ವಿಕ್ರಾಂತ್ ರೋಣ' ಇತರೆ ಕರ್ನಾಟಕದ ಪ್ಯಾನ್ ಇಂಡಿಯಾ ಸಿನಿಮಾಗಳು ಇತರೆ ರಾಜ್ಯಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿವೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಎಂಬ ಗಡಿಗಳು ಅಳಿಸಿ ಹೋಗುತ್ತಿವೆ. ಇದು ನನ್ನಂಥಹಾ ನಟರಿಗೆ ಬಹಳ ಒಳ್ಳೆಯದು. ನಾವು ಎಲ್ಲ ಭಾಷೆಗಳಲ್ಲಿಯೂ ನಟಿಸಲು, ಎಲ್ಲ ಭಾಷೆಗಳ ಜನರನ್ನೂ ತಲುಪಲು ಇದರಿಂದ ಸಾಧ್ಯವಾಗುತ್ತದೆ'' ಎಂದಿದ್ದಾರೆ ಕಾರ್ತಿಕೇಯ.
'ವಲಿಮೈ' ಸಿನಿಮಾದಲ್ಲಿ ಅಜಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಸಿನಿಮಾವು ಫೆಬ್ರವರಿ 25 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಹುಮಾ ಖುರೇಷಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕೇಯ ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಬಾಲಿವುಡ್‌ನ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ.


Click it and Unblock the Notifications











