'ಎಲ್ಲಿಗೆ ಪಯಣ' ಎಂದ ಕಾಶೀನಾಥ್ ಪುತ್ರನಿಗೆ 'ದಾರಿ' ತೋರಿಸಿದ ಉಪೇಂದ್ರ
'ಎಲ್ಲಿಗೆ ಪಯಣ ಯಾವುದೋ ದಾರಿ..' ಡಾ.ರಾಜ್ ಕುಮಾರ್ ನಟನೆಯ 'ಸಿಪಾಯಿ ರಾಮು' ಸಿನಿಮಾದ ಜನಪ್ರಿಯ ಹಾಡು. ಈ ಹಾಡಿನ ಸಾಲು ಈಗ ಒಂದು ಸಿನಿಮಾದ ಶೀರ್ಷಿಕೆಯಾಗಿದೆ. ಈ ಸಿನಿಮಾದಲ್ಲಿ ನಟ, ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ನಟಿಸುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಚಿತ್ರರಂಗಕ್ಕೆ ಬಂದಾಗ ಅವರಿಗೆ ಮೊದಲು ಅವಕಾಶ ನೀಡಿದ್ದು, ಕಾಶೀನಾಥ್. ಅವರ ಗರಡಿಯಲ್ಲೇ ಬೆಳೆದ ಉಪ್ಪಿ, ಮುಂದೆ ದೊಡ್ಡ ನಿರ್ದೇಶಕ, ನಟ ಎಲ್ಲವೂ ಆದರು. ಇದೀಗ ಉಪೇಂದ್ರಗೆ ತಮ್ಮ ಗುರು ಕಾಶಿನಾಥ್ ಋಣ ತೀರಿಸುವ ಸಮಯ ಬಂದಿದೆ.

ಕಾಶೀನಾಥ್ ಪುತ್ರ ಅಭಿಮನ್ಯು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 7 ವರ್ಷಗಳ ನಂತರ 'ಎಲ್ಲಿಗೆ ಪಯಣ ಯಾವುದೋ ದಾರಿ..' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಲಾಂಚ್ ಮಾಡುವ ಮೂಲಕ ಅಭಿಮನ್ಯುಗೆ ಉಪೇಂದ್ರ ಸಾಥ್ ನೀಡಿದ್ದಾರೆ. ಆಗ ಉಪ್ಪಿ ಹೆಜ್ಜೆಯಲ್ಲಿ ಕಾಶೀನಾಥ್ ಜೊತೆಗೆ ಇರುತ್ತಿದ್ದರು, ಇದೀಗ ಕಾಶೀನಾಥ್ ಮಗನ ಪ್ರಯತ್ನಕ್ಕೆ ಉಪೇಂದ್ರ ಬೆಂಬಲ ನೀಡಿದ್ದಾರೆ.
ಸದ್ಯ, ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್ ತುಂಬ ಚೆನ್ನಾಗಿದೆ. ಚಿತ್ರತಂಡದ ಕ್ರಿಯೇಟಿವಿಟಿ ಇಷ್ಟ ಆಗುತ್ತಿದೆ. ಅಂದಹಾಗೆ, ಈ ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ದೇವಕಿ' ಸಿನಿಮಾದಲ್ಲಿ ಇವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ದರ್ಶನ ಆರ್ಟ್ ಬ್ಯಾನರ್ ನಲ್ಲಿ ನಂದೀಶ್ ಗೌಡ ಮತ್ತು ಜಿತಿನ್ ಜಿ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನಡೆದಿದೆ. ಟೈಟಲ್ ಲಾಂಚ್, ಟೀಸರ್ ಲಾಂಚ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ನಂತರ ಸಿನಿಮಾ ಮುಹೂರ್ತ ನಡೆಯಲಿದೆ. ಮಡಕೇರಿಯಲ್ಲಿ ಸಿನಿಮಾದ ಫೋಟೋ ಶೂಟ್ ಮಾಡಲಿದ್ದಾರೆ. ಹೀರೋಯಿನ್ ಹಾಗೂ ಇತರ ಪಾತ್ರಗಳಿಗೆ ಆಡಿಷನ್ಸ್ ಮಾಡಲಾಗುತ್ತಿದೆ.


Click it and Unblock the Notifications











