ಐರೆನ್ ಲೆಗ್ to ಅಭಿನಯ ಚಕ್ರವರ್ತಿ, 28 ವರ್ಷಗಳ ಸಿನಿಪಯಣ ಮೆಲುಕು ಹಾಕಿದ ಕಿಚ್ಚ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ ಕಳೆದಿದೆ. 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ದಿಗ್ಗಜ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿದ್ದಾರೆ. ಇವತ್ತಿಗೂ ಫಿಟ್ ಅಂಡ್ ಫೈನ್ ಆಗಿ ಹೊಸ ನಟಿರಿಗೂ ಪೈಪೋಟಿ ಕೊಡುತ್ತಿದ್ದಾರೆ.
"ಈ ಅದ್ಭುತ ಮನರಂಜನಾ ಕ್ಷೇತ್ರದಲ್ಲಿ 28 ಸುಂದರ ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಸಾಟಿಯಿಲ್ಲದ ಉಡುಗೊರೆಗಾಗಿ ದೇವರಿಗೆ ನನ್ನ ಧನ್ಯವಾದ. ನನ್ನ ಪೋಷಕರು, ಕುಟುಂಬ, ಎಲ್ಲಾ ಅಮೂಲ್ಯ ತಂತ್ರಜ್ಞರು, ಬರಹಗಾರರು, ನಿರ್ಮಾಪಕರು, ನನ್ನ ಸಹ-ನಟರು, ಮಾಧ್ಯಮ, ಮನರಂಜನಾ ಚಾನೆಲ್‌ಗಳು, ವಿತರಕರು, ಪ್ರದರ್ಶಕರು, ಒಕ್ಕೂಟದ ಇಡೀ ಕುಟುಂಬ ಹೀಗೆ ಈ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದ"

"ಯಾವಾಗಲೂ ನನ್ನನ್ನು ಬೇಷರತ್ತಾಗಿ ಪ್ರೀತಿಸುತ್ತಿರುವುದಕ್ಕಾಗಿ, ನನ್ನ ಜೀವನದಲ್ಲಿ ನನ್ನ ಅತ್ಯಂತ ಅಮೂಲ್ಯವಾದ ಗಳಿಕೆಯಾಗಿರುವ ಅಭಿಮಾನಿಗಳ ರೂಪದಲ್ಲಿರುವ ನನ್ನ ಎಲ್ಲಾ ಸ್ನೇಹಿತರಿಗೆ ಪ್ರೀತಿಯಿಂದ ದೊಡ್ಡ ಅಪ್ಪುಗೆ. ಈ ಪಯಣ ರೋಲರ್-ಕೋಸ್ಟರ್ ರೈಡ್ ಆಗಿದೆ. ನಾನು ಅದರ ಪ್ರತಿ ಗಳಿಗೆಯನ್ನು ಆನಂದಿಸಿದೆ. ನಾನು ದೋಷರಹಿತನಲ್ಲ, ಪರಿಪೂರ್ಣನಲ್ಲ, ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ ಮತ್ತು ಅವಕಾಶಗಳು ಬಂದಾಗ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಸುದೀಪ್ ಪತ್ರ ಬರೆದಿದ್ದಾರೆ.

"ಕೆಲವು ವರ್ಷಗಳ ಹಿಂದೆ 'ಬ್ರಹ್ಮ' ಚಿತ್ರಕ್ಕಾಗಿ ಕ್ಯಾಮರಾ ಎದುರಿಸಲು ನಾನು ಕಂಠೀರವ ಸ್ಟುಡಿಯೋಗೆ ಹೋಗಿದ್ದೆ. ಇದೀಗ 28 ವರ್ಷಗಳು ಕಳೆದಿದೆ. ನಿಜಕ್ಕೂ ಅದ್ಭುತ. ಈ ಅಮೂಲ್ಯ ಉಡುಗೊರೆಗಾಗಿ ನಾನು ಪ್ರತಿಯೊಬ್ಬರಿಗೂ ಪ್ರೀತಿ, ಗೌರವ ಮತ್ತು ಕೃತಜ್ಞತೆಗಳು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
1996ರಲ್ಲಿ 'ಬ್ರಹ್ಮ' ಚಿತ್ರದ ಮೂಲಕ ಸುದೀಪ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಆದರೆ ಕಾರಣಾಂತರಗಳಿಂದ ಮೊದಲ ಸಿನಿಮಾ ನಿಂತು ಹೋಗಿತ್ತು. ಬಳಿಕ 'ತಾಯವ್ವ' ಸಿನಿಮಾದಲ್ಲಿ ನಟಿಸಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. 'ಸ್ಪರ್ಶ' ಚಿತ್ರದಲ್ಲಿ ಗಮನ ಸೆಳೆದರು. 'ಹುಚ್ಚ' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಮದ ಸುದೀಪ್ ಮೋಡಿ ಮಾಡಿದರು.
ಆರಂಭದಲ್ಲಿ ಸುದೀಪ್ ನಟಿಸಿದ ಒಂದಷ್ಟು ಸಿನಿಮಾಗಳು ನಿಂತು ಹೋಗಿದ್ದವು. ಒಂದಷ್ಟು ಸಿನಿಮಾಗಳು ಸದ್ದು ಮಾಡಲಿಲ್ಲ. ಆಗ ಕೆಲವರು ಐರೆನ್ ಲೆಗ್ ಎಂದು ಹಣೆಪಟ್ಟೆ ಕಟ್ಟಿಬಿಟ್ಟಿದ್ದರು. ಸುದೀಪ್ ಎಲ್ಲಾ ಅವಮಾನ ಎದುರಿಸಿ ಬಳಿಕ ಹಂತ ಹಂತವಾಗಿ ಮೇಲೇರುತ್ತಾ ಬಂದರು. ಅಭಿನಯ ಚಕ್ರವರ್ತಿ ಬಿರುದು ಪಡೆದುಕೊಂಡರು. ಕನ್ನಡ ಮಾತ್ರವಲ್ಲದೇ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ನಟಿಸಿ ಗಮನ ಸೆಳೆದರು. ಖ್ಯಾತ ಫಿಲ್ಮ್ ಮೇಕರ್ಸ್ ಜೊತೆ ಕೆಲಸ ಮಾಡಿದರು. ಬಾಲಿವುಡ್ ಸಿನಿಮಾದಲ್ಲೂ ಮಿಂಚಿದರು.
ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಸುದೀಪ್ ತಮ್ಮ ಪ್ರತಿಭೆ ಒರೆಗೆ ಹಚ್ಚಿದರು. 'ಮೈ ಆಟೋಗ್ರಾಫ್', 'ಶಾಂತಿ ನಿವಾಸ', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ', 'ಮಾಣಿಕ್ಯ' ಹೀಗೆ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟರು. ನಿರ್ಮಾಪಕರಾಗಿಯೂ ಒಂದಷ್ಟು ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಮಾತ್ರವಲ್ಲದೇ ಗಾಯಕರಾಗಿ, ನಿರೂಪಕರಾಗಿಯೂ ಸುದೀಪ್ ಸದ್ದು ಮಾಡಿದರು.
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕಾರ್ಯಕ್ರವನ್ನು 10 ವರ್ಷಗಳಿಂದ ನಿರೂಪಣೆ ಮಾಡುತ್ತಾ ಬರ್ತಿದ್ದಾರೆ. ಸಲ್ಮಾನ್ ಖಾನ್‌ಗಿಂತ ಸುದೀಪ್ ನಿರೂಪಣೆ ಸೂಪರ್ ಎಂದು ವೀಕ್ಷಕರಿಗೆ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಸುದೀಪ್ ಗೆದ್ದಿದ್ದರು. ಸದ್ಯ 'ಮ್ಯಾಕ್ಸ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











