ಸನಾತನ ಧರ್ಮ ವಿವಾದ: ಮನುಷ್ಯರನ್ನು ಮನುಷ್ಯರಾಗಿ ಕಾಣುವ ಮನುಷ್ಯ ಧರ್ಮದವರಾಗುವ ಎಂದ ನಟ ಕಿಶೋರ್
"ದಾರಿ ತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ, ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ... ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ.. ವಿಶ್ವಮಾನವರಾಗುವ.." ಇದು ನಟ ಕಿಶೋರ್ ಸನಾತನ ಧರ್ಮ ವಿವಾದಕ್ಕೆ ನೀಡಿರುವ ಪ್ರತಿಕ್ರಿಯೆ.
ಕಳೆದ ನಾಲ್ಕು ದಿನಗಳಿಂದ ಸನಾತನ ಧರ್ಮ ವಿವಾದ ಹೆಚ್ಚು ಚರ್ಚೆಯಲ್ಲಿದೆ. ನಟ ರಾಜಕಾರಣಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಅದು ನಿರ್ಮೂಲನೆಯಾಗಬೇಕು ಎಂದು ಹೇಳಿಕೆ ನೀಡಿದ್ದರು. ಅಂದಿನಿಂದ ರಾಜಕೀಯ ನಾಯಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆ ವಿಷಯಕ್ಕೆ ನಟ ಕಿಶೋರ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನಾವು ಹಿಂದೂಗಳಲ್ಲವೇ..? ಇದಾವುದು ಹೊಸ ಧರ್ಮ..?
"ಇಷ್ಟೂ ದಿನ ಹಿಂದೂ ಹಿಂದೂ ಎಂದು ಅರಚುತಿದ್ದವರೆಲ್ಲ ಯಾಕೋ ಆ ಪದ ಬಿಟ್ಟೇ ಬಿಟ್ಟರೆನಿಸುತ್ತಿಲ್ಲವೇ..? ಹಾಗಾದರೆ ನಾವು ಹಿಂದೂಗಳಲ್ಲವೇ..? ಇದಾವುದು ಹೊಸ ಧರ್ಮ..? ಸನಾತನ..?. ಕೆಲಸ ಮಾಡಲು ಯೋಗ್ಯತೆಯಿಲ್ಲದೆ ಈ ಪದಗಳ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವವರನ್ನು ಇದರ ಸಂಪೂರ್ಣ ನಿಖರ ಅರ್ಥ ಹೇಳಲು ಕೇಳಿಬಿಡಿ ಸಾಕು" ಎಂದು ಹೇಳಿದ್ದಾರೆ.
"ವಾಟ್ಸಾಪ್ ವಿಶ್ವವಿದ್ಯಾಲಯದಿಂದ ಹೊರಬಂದು, ಹಿಂದೂ ಪದದ ನಿಜ ಅರ್ಥ, ಮೂಲ, ಅದರ ಹಿಂದಿನ ದ್ವೇಷದ ರಾಜಕೀಯ ಪ್ರಚಲಿತವಾಗುತ್ತಿದ್ದಂತೆ ಅದನ್ನು ಬಿಟ್ಟು ಸನಾತನ ಪದ ಹಿಡಿದ ದ್ವೇಷದ ವರ್ತಕರು ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿದ್ದೇ ಈ ಅನವಶ್ಯಕ ಚರ್ಚೆಗೆ ಕಾರಣ" ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ರಾಜಕೀಯಗೊಳಿಸುತ್ತಿರುವುದನ್ನು ಖಂಡಿಸಿದ್ದಾರೆ.

"ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ, ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು, ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟ" ಎಂದು ತಿಳಿಸಿದ್ದಾರೆ.
"ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ.. ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ" ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
"ಈ ದಾರಿತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ, ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ. ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ.. ವಿಶ್ವಮಾನವರಾಗುವ" ಎಂದು ಸಂದೇಶ ನೀಡಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿದ್ದೇನು?
ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಅದು ನಿರ್ಮೂಲನೆಯಾಗಬೇಕು. ಸನಾತನ ಧರ್ಮ ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ ಅವುಗಳನ್ನು ನಿರ್ಮೂಲನೆ ಮಾಡಿದಂತೆ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಇದು ದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಇಷ್ಟು ಟೀಕೆ, ದೂರಗಳು ದಾಖಲಾದ ಬಳಿಕವು ನಟ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ತಾವು ತಮ್ಮ ಹೇಳಿಕೆಗೆ ಬದ್ಧನಾಗಿದ್ದು, ಕಾನೂನು ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಇನ್ನು. ಅಯೋಧ್ಯೆಯ ಪರಮಹಂಸ ಆಚಾರ್ಯ ಎಂಬುವವರು ಉದಯನಿಧಿ ತಲೆ ಕಡಿದರೆ ಹತ್ತು ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೂ ನಟ ವ್ಯಂಗ್ಯವಾಡಿದ್ದಾರೆ.


Click it and Unblock the Notifications











