2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಾಯಿಸ್ತೀನಿ, ಈ ವಿಡಿಯೋ ಹಾಕ್ತಿರೋ ಇಲ್ವೋ ಗೊತ್ತಿಲ್ಲ- ಕಿಶೋರ್
ಬಿಜೆಪಿ, ಆರೆಸ್ಸೆಸ್, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ನಟ ಕಿಶೋರ್ ಟೀಕಿಸುತ್ತಿರುತ್ತಾರೆ. ಇದೀಗ ಪ್ರಧಾನಿ ಮೋದಿಯಿಂದಲೇ ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿದೆ ಎನ್ನುವ ಅರ್ಥದಲ್ಲಿ ಕಿಶೋರ್ ಮಾತನಾಡಿದ್ದಾರೆ. ನನಗೆ ಮತ್ತೆ ಹಿಂದಕ್ಕೆ ಹೋಗಿ ಏನಾದರೂ ಬದಲಿಸುವ ಅವಕಾಶ ಸಿಕ್ಕರೆ 2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಿಸಿಬಿಡುತ್ತೇನೆ ಎಂದಿದ್ದಾರೆ.
'ಮೆಲ್ಲಿಸೈ' ಎಂಬ ತಮಿಳು ಚಿತ್ರದಲ್ಲಿ ನಟ ಕಿಶೋರ್ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. IndiaGlitz Tamil ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶಾಲೆಯ ಪೀಟಿ ಮಾಸ್ಟರ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ "ನಮ್ಮ ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ" ಎನ್ನುವ ಡೈಲಾಗ್ ಇದೆ.

ಇದೇ ರೀತಿ ನಿಮಗೆ ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಸಿಕ್ಕರೆ ಏನು ಮಾಡ್ತಿರಾ ಸರ್ ಎಂದು ನಟ ಕಿಶೋರ್ ಅವರಿಗೆ ಪ್ರಶ್ನೆ ಎದುರಾಗಿದೆ. ನಾನು ಹೇಳುವುದನ್ನು ನೀವು ಹಾಕ್ತಿರೋ ಇಲ್ವೋ ಗೊತ್ತಿಲ್ಲ, ಆದ್ರೂ ಹೇಳ್ತೀನಿ ಎಂದು ಕಿಶೋರ್ ಮಾತು ಆರಂಭಿಸಿದ್ದಾರೆ. "2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಿಸಿಬಿಡ್ತೀನಿ" ಎಂದು ಕಿಶೋರ್ ಹೇಳಿದ್ದಾರೆ. ಸಾಧ್ಯನಾ? ಈ ವಿಡಿಯೋ ಹಾಕೋಕೆ, ಹಾಕಿ ಎಂದಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.
ಖಂಡಿತ ಪ್ರಧಾನಿ ಬದಲಾಗಿದ್ದರೆ ಭಾರತ ದೇಶವೇ ಬದಲಾಗಿರುತ್ತಿತ್ತು. ಈಗ ಎಷ್ಟು ದ್ವೇಷ ಇದೆ. ಅಯ್ಯೋ ನಿಜಕ್ಕೂ ಭಯಂಕರವಾಗಿದೆ. ಇದನ್ನು ಬದಲಿಸಲು ದಶಕಗಳೇ ಬೇಕು, ಬಹಳ ಭಯಾನಕ ಜನ. ಪ್ರೀತಿ ಇಲ್ಲದಿದ್ದರೆ ಜನ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಕಿಶೋರ್ ಹೇಳಿದ್ದಾರೆ. "ಒಬ್ಬರನ್ನೊಬ್ಬರು ದ್ವೇಷಿಸಿದರೆ ಹೇಗೆ ಒಟ್ಟಿಗೆ ಬಾಳಲು ಸಾಧ್ಯ. ಆ ದ್ವೇಷವನ್ನು ಬಂಡವಾಳವಾಗಿ ಮಾಡಿಕೊಂಡು ಒಬ್ರು ಅಧಿಕಾರಕ್ಕೆ ಬರ್ತಾರೆ ಅಂದ್ರೆ ಬಹಳ ಭಯಾನಕ ಜನ ಅವ್ರು. ಅಂತಹವರೇ ಈಗ ಅಧಿಕಾರದಲ್ಲಿದ್ದಾರೆ. ಅಲ್ಲಿ ಟ್ರಂಪ್ ನೋಡಿ, ಇಲ್ಲಿ ಇವರನ್ನು ನೋಡಿ. ಎಲ್ಲರೂ ಅದೇ ರೀತಿ ಇದ್ದಾರೆ" ಎಂದು ನಟ ಕಿಶೋರ್ ಹೇಳಿದ್ದಾರೆ.
ರಾಜಕೀಯ ಎನ್ನುವುದು ಈಗ ಅಧಿಕಾರ ಎನ್ನುವಂತಾಗಿದೆ ಎಂದು ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ. ರಾಜಕೀಯ ಎನ್ನುವುದು ಅಧಿಕಾರ ಅಲ್ಲ, ಕೆಲಸ ಮಾಡುವುದು. ಜನರಿಗೆ ಸಹಾಯ ಮಾಡುವ ಸೇವರ ರಾಜಕಾರಣಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನೆಹರೂ ನಾನು ಪ್ರಥಮ್ ಸೇವಕ್ ಎಂದು ಹೇಳಿದ್ದರು. ಈಗ ಪ್ರಧಾನಿ ಆಗಿರುವ ಮೋದಿ ಹೇಳ್ತಾರೆ, ನಾನು ಪ್ರಧಾನ್ ಸೇವಕ್ ಅಂತ. ಅಂದ್ರೆ ನಾನೇ ಮುಖ್ಯ ಎನ್ನುವಂತೆ ಹೇಳಿಕೊಳ್ತಾರೆ. ಪ್ರಜಾಪ್ರಭುತ್ವವನ್ನು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನಗಳ ನಡುವೆ ಪ್ರೀತಿ ಇರಬೇಕು, ಆದರೆ ಇವರೆಲ್ಲಾ ದ್ವೇಷ ತುಂಬುತ್ತಿದ್ದಾರೆ. ಆ ಮೂಲಕ ಮನೆಗಳನ್ನು ಹಾಳು ಮಾಡುತ್ತಿದ್ದಾರೆ. ಕನ್ನಡದಲ್ಲಿ ಇಂತಹ ಕೆಲಸ ಮಾಡುವವರನ್ನು 'ಮನೆಹಾಳ' ಎನ್ನುತ್ತಾರೆ. ಇಂತಹ ರಾಜಕಾರಣಿಗಳೆಲ್ಲಾ ಮನೆಹಾಳು ಕೆಲಸ ಮಾಡುತ್ತಿದ್ದಾರೆ ಎಂದು ಕಿಶೋರ್ ವ್ಯಂಗ್ಯವಾಡಿದ್ದಾರೆ.
ಕಳೆದ ವರ್ಷ ಕಿಶೋರ್ ನಟನೆಯ ಏಳೆಂಟು ಕನ್ನಡ ಸಿನಿಮಾಗಳು ತೆರೆಕಂಡಿತ್ತು. ಈ ವರ್ಷ 'ಮಹಾಕವಿ' ಸಿನಿಮಾ ಮಾತ್ರ ಅವರ ಕೈಯಲ್ಲಿದೆ. ಇನ್ನುಳಿದಂತೆ ತಮಿಳಿನಲ್ಲಿ 'ಮೆಲ್ಲಿಸೈ' ಸಿನಿಮಾ ಬಿಡುಗಡೆ ಆಗ್ತಿದೆ. ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ದೇಶದ ಆಗುಹೋಗುಗಳ ಬಗ್ಗೆ ಕಾಮೆಂಟ್ ಮಾಡುತ್ತಿರುತ್ತಾರೆ.


Click it and Unblock the Notifications











