ಗಣೇಶ-ಕಾರ್ತಿಕೇಯ ನೀತಿಕಥೆ ಹೇಳಿ ಕುಂಭಮೇಳದ ಬಗ್ಗೆ ನಟ ಕಿಶೋರ್ ವ್ಯಂಗ್ಯ!
ನಟ ಕಿಶೋರ್ ತಮ್ಮ ಬಿಜೆಪಿ ವಿರೋಧಿ ನಿಲುವಿನಿಂದ ಪದೇ ಪದೆ ಚರ್ಚೆಗೆ ಗ್ರಾಸವಾಗುತ್ತಾರೆ. ಬಿಜೆಪಿ ಪಕ್ಷವನ್ನು, ಪ್ರಧಾನಿ ಮೋದಿಯನ್ನು ಕೂಡ ಟೀಕಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಕುಂಭಮೇಳದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಮಾತನಾಡುತ್ತಾ ತಮ್ಮ ವಾದ ಮುಂದಿಟ್ಟಿದ್ದರು. ಜನರನ್ನು ಮೌಢ್ಯದಲ್ಲಿ ಮುಳುಗಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಇದು ಎಂದಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಕುಂಭಮೇಳದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಣೇಶ- ಕಾರ್ತಿಕೇಯರ ನೀತಿಪಾಠವನ್ನು ಬರೆದು ಕುಂಭಮೇಳದಲ್ಲಿ ವಿಐಪಿಗಳಿಗೆ ಒಂದು ನ್ಯಾಯ? ಸಾಮಾನ್ಯರಿಗೆ ಒಂದು ನ್ಯಾಯ? ಎಂದು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಜನ ಪುಣ್ಯಸ್ನಾನ ಮಾಡುವ ಏರಿಯಲ್ ಶಾಟ್ ಫೋಟೊವನ್ನು ನಟ ಕಿಶೋರ್ ಹಂಚಿಕೊಂಡಿದ್ದಾರೆ. ವಿಐಪಿಗಳಿಗೆ ಪ್ರತ್ಯೇಕ ಬ್ಲಾಕ್ ಮಾಡಿದ್ದರು ಎನ್ನುವಂತೆ ಆ ಫೋಟೋ ಇದೆ.

"ನನ್ನ ಬಾಲ್ಯದ ಒಂದು ನೀತಿ ಕಥೆ, ಶಿವ ಮತ್ತು ಪಾರ್ವತಿಯರ ಬಳಿ ತಮ್ಮ ಮಕ್ಕಳಿಗೆ ಕೊಡಲು ನಾರದ ತಂದುಕೊಟ್ಟ ಒಂದೇ ಒಂದು ಮಾವಿನ ಹಣ್ಣಿತ್ತು. ಆ ಮಾವಿನ ಹಣ್ಣನ್ನು ಗೆಲ್ಲಲು ಅವರು , ತಮ್ಮ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮೂರು ಬಾರಿ ಪ್ರಪಂಚ ಸುತ್ತಿ ಬರುವಂತೆ ಸವಾಲು ಹಾಕಿದರು. ಯಾರು ಮೊದಲು ಹಿಂತಿರುಗುತ್ತಾರೋ, ಅವರಿಗೆ ಮಾವಿನ ಹಣ್ಣು ಸಿಗುತ್ತದೆ. ಕಾರ್ತಿಕೇಯ ಒಡನೇ ತನ್ನ ವಾಹನವಾದ ನವಿಲಿನ ಮೇಲೆ ಹಾರಿ ಹೊರಟನು, ಆದರೆ ಗಣೇಶನು ತನ್ನ ಹೆತ್ತವರನ್ನು ಸುತ್ತಿ ನೀವೇ ನನ್ನ ಪ್ರಪಂಚ ಎಂದು ಹೇಳಿದ. ಕಾರ್ತಿಕೇಯ, ಪ್ರಪಂಚವನ್ನು ಮೂರು ಸುತ್ತು ಸುತ್ತಿ ಹಿಂತಿರುಗಿದ ನಂತರ ಕಂಡದ್ದು ಶಾಶ್ವತ ಸತ್ಯವನ್ನು" ಎಂದು ನಟ ಕಿಶೋರ್ ಬರೆದುಕೊಂಡಿದ್ದಾರೆ.
ಜೀವಕ್ಕೆ ಬೆಲೆಕೊಡದ, ಕೇವಲ ರಾಜಕೀಯಕ್ಕಾಗಿ ಮಾಡುವ ತೀರ್ಥ ಸ್ನಾನ ಎಂದು ಕುಂಭಮೇಳದ ಬಗ್ಗೆ ಕಿಶೋರ್ ವ್ಯಂಗ್ಯವಾಡಿದ್ದಾರೆ. "ಪ್ರೀತಿಯೇ ದೇವರು ಪ್ರಪಂಚ ಎಲ್ಲ .. ಅದು ನೀವು ಎಲ್ಲಿದ್ದೀರೋ ಅಲ್ಲೇ ಇದೆ ... ನಿಮ್ಮ ಪ್ರೀತಿಪಾತ್ರರ ನಡುವೆ. ಅವರನ್ನು ಸಂತೋಷವಾಗಿಡುವುದೇ ಪೂಜೆ..ಈಗ ನನಗೆ ಯಾರು ಆದರ್ಶ ? ಗಣೇಶನೇ ? ಕಾರ್ತಿಕೇಯನೇ? ನನ್ನ ಸುತ್ತಿ ಹೆತ್ತವರು, ಹಿತವರಿರುವಾಗ.. ಆಗಸದಿಂದ ನನ್ನ ತಲೆಯ ಮೇಲೆ ಬೀಳುವ ಒಂದೊಂದು ಹನಿಯೂ ಗಂಗೆ ಕಾವೇರಿಯಾಗಿರುವಾಗ, ಪ್ರತಿ ಮಳೆಯೂ ಪುಣ್ಯಸ್ನಾನ, ನಾನಡಿಯಿಡುವ ಪ್ರತಿ ನೆಲವೂ ಪುಣ್ಯಕ್ಷೇತ್ರವಾಗಿರುವಾಗ, ನನಗೇಕೆ ತಾರತಮ್ಯ ಮಾಡುವ, ಜೀವಕ್ಕೆ ಬೆಲೆಕೊಡದ, ಕೇವಲ ರಾಜಕೀಯಕ್ಕಾಗಿ ಮಾಡುವ ತೀರ್ಥ ಸ್ನಾನಗಳ ಮೇಳಗಳ ಹಂಗು ? ಇದನ್ನೇ ಅಲ್ಲವೇ ಗಣೇಶ ನನಗೆ ಹೇಳಿಕೊಟ್ಟಿದ್ದು? ಎಂದು ಕಿಶೋರ್ ಪ್ರಶ್ನಿಸಿದ್ದಾರೆ.
ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಈಗಾಗಲೇ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ. ಮಾರ್ಚ್ 1ರಂದು ಆರಂಭವಾಗಿರುವ ಚಿತ್ರೋತ್ಸವ ಮಾರ್ಚ್ 8ರವರೆಗೆ ಮುಂದುವರೆಯಲಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಸಿನಿಮಾಗಳಲ್ಲಿ ಕಿಶೋರ್ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರದ ಮೂಲಕ ಇದೀಗ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈದ್ ಸಂಭ್ರಮದಲ್ಲಿ ಮುರುಗದಾಸ್ ನಿರ್ದೇಶನದ ಈ ಸಿನಿಮಾ ತೆರೆಗೆ ಬರಲಿದೆ. ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











