ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು
Recommended Video

"ನನಗೆ ಟಿಕೆಟ್ ಕೊಟ್ಟರೂ ನಾನು ಚುನಾವಣೆಗೆ ನಿಲ್ಲುವುದಿಲ್ಲ" ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಚಂದ್ರು ರಾಜಕೀಯ, ರಂಗಭೂಮಿ ಮತ್ತು ಸಿನಿಮಾರಂಗದ ಬಗ್ಗೆ ಮಾತನಾಡಿದ್ದಾರೆ.
ಇದೆ ಸಮಯದಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಚಂದ್ರು ರಂಗಭೂಮಿಯ 45 ವರ್ಷಗಳ ನಂಟನ್ನು ತೆರೆದಿಟ್ಟರು. ನಾನು ರಂಗಭೂಮಿ, ಚಿತ್ರರಂಗ, ಕಿರುತೆರೆ, ರಾಜಕಾರಣದಲ್ಲಿ, ಗುರುತಿಸಿಕೊಂಡಿದ್ದೇನೆ. ರಾಜಕಾರಣ ಪ್ರವೇಶಿಸಿದ ಕೇವಲ 20 ದಿನದಲ್ಲೇ ಶಾಸಕನಾಗಿ ಆಯ್ಕೆಯಾದೆ, ಆನಂತರ ಎರಡು ಬಾರಿ ಎಂ.ಎಲ್.ಸಿ ಆದೆ" ಎಂದು ಹೇಳಿದರು.
ಇನ್ನು "ರಾಜಕಾರಣವನ್ನು ಸುಮ್ಮನೆ ಮಾಡಿದೆ. ಆದರೀಗ ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನು ಪ್ರಾಮಾಣಿಕನಾಗಿದ್ದು, ರಾಜಕಾರಣ ಸೇರಿ ಹಣ ಆಸ್ತಿ ಮಾಡಿಲ್ಲ. ಹಾಗಾಗಿ ನನಗೆ ಚುನಾವಣೆಯಲ್ಲಿ ನಿಲ್ಲುವ ಶಕ್ತಿ ಇಲ್ಲ. ಆಕಸ್ಮಿಕವಾಗಿ ರಂಗಭೂಮಿಗೆ ಬಂದ ನಾನು ಚಲನಚಿತ್ರ ರಂಗ, ಕಿರುತೆರೆಯಲ್ಲೂ ಸಕ್ರಿಯನಾದೆ. ಆದರೆ ಸಿನಿಮಾದಿಂದಾಗಿ ಬಲಗಣ್ಣು, ಎಡಗಿವಿ ಕಳೆದುಕೊಂಡು ಮಾತನಾಡಲಾಗದ ಸ್ಥಿತಿಗೆ ತಲುಪಿದ್ದೆ. ಆನಂತರ ಚೇತರಿಸಿಕೊಂಡೆ. ನನ್ನ ಕೈಕಾಲು ಗಟ್ಟಿಯಾಗಿರುವವರೆಗೂ ನಾಟಕ ಆಡುವುದನ್ನು ನಿಲ್ಲಿಸುವುದಿಲ್ಲ" ಎಂದು ಹೇಳಿದ್ದಾರೆ.

ಇದೆ ಸಮಯದಲ್ಲಿ ಚಂದ್ರುಶೇಖರ್ ಆಗಿದ್ದವರು ಮುಖ್ಯಮಂತ್ರಿ ಆಗಿದ್ದು ಹೇಗೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. "ಮುಖ್ಯಮಂತ್ರಿ ನಾಟಕ ಮಾಡಿದಾಗಿನಿಂದ ಮುಖ್ಯಮಂತ್ರಿ ಚಂದ್ರು ಆಗಿ ಗುರುತಿಸಿಕೊಂಡೆ. ಆಗ ನನಗೆ 27-28 ವರ್ಷ ಇರಬಹುದಷ್ಟೆ. ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ಅಭಿನಯಿಸಿದರೂ ರಂಗಭೂಮಿಯೇ ಮೈಲುಗಲ್ಲಾಯಿತು" ಎಂದು ಸಂತಸಪಟ್ಟರು.


Click it and Unblock the Notifications











