'ಒಡೆಯ' ಚಿತ್ರದಲ್ಲಿ ದರ್ಶನ್ ಸಹೋದರನಾಗಿ ನಟಿಸಿದ್ದ ನಿರಂಜನ್ ಮೇಲೆ ಹಲ್ಲೆ; FIR ದಾಖಲು
'ಟಗರು', 'ವಾಸು' ಹಾಗೂ 'ಒಡೆಯ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟ ನಿರಂಜನ್ ಹಲ್ಲೆ ನಡೆದಿದೆ. ನಗರದ ಬಾರ್ ಒಂದರಲ್ಲಿ ಅಪರಿಚಿತ ವ್ಯಕ್ತಿಗಳ ಅವರ ಮೇಲೆ ಅಟ್ಯಾಕ್ ಮಾಡಿದ್ದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 28ರಂದು ಈ ಘಟನೆ ನಡೆದಿದ್ದು ಬಿಯರ್ ಬಾಟಲ್‌ಗಳಿಂದ ಗುಷ್ಕರ್ಮಿಗಳು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಯಶಸ್ ಸೂರ್ಯ ಅವರ ಮನೆಗೆ ಹೋಗಿ ನಿರಂಜನ್ ವಾಪಸ್ ಬರುವಾಗ ಮಂತ್ರಿ ಅಲೈಯೆನ್ಸ್ ಬಳಿ ಇರುವ ಬಾರ್‌ವೊಂದಕ್ಕೆ ನಿರಂಜನ್ ಹೋಗಿದ್ದಾರೆ. ಬಾರ್ ಒಳಗೆ ಅಪರಿಚಿತ ವ್ಯಕ್ತಿ ತಳ್ಳಾಟ ನಡೆಸಿದ್ದಾಗಿ ಹೇಳಿದ್ದಾರೆ. ಇದಕ್ಕೆ ಕಾರಣ ಕೇಳಿ ಶುರುವಾದ ಮಾತು ಬಳಿಕ ವಾಗ್ವಾದಕ್ಕೆ ತಿರುಗಿ ಸಣ್ಣ ಕಿರಿಕ್ ಬಳಿಕ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದೆ. ಕೆಲವೇ ಕ್ಷಣಗಳಲ್ಲಿ ಗುಂಪೊಂದು ಬಂದು ಅಲ್ಲಿಗೆ ಬಂದು ನಟನ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಲಾಗ್ತಿದೆ.

ಕಿರಿಕ್ ವೇಳೆ ನಿರಂಜನ್ ಸಿನಿಮಾ ನಟ ಎನ್ನುವುದು ಅಪರಿಚಿತ ವ್ಯಕ್ತಿಗಳ ಗಮನಕ್ಕೆ ಬಂದಿದೆ. ನೀನು ಆಕ್ಟರ್ ಆದ್ರೆ ನಮಗೇನು? ಎಂದು ಅಪರಿಚಿತ ವ್ಯಕ್ತಿ ತಗಾದೆ ತೆಗೆದಿದ್ದಾನೆ. ಬಳಿಕ ಅಲ್ಲಿಗೆ ಬಂದ ದುಷ್ಕರ್ಮಿಗಳು ಬಿಯರ್ ಬಾಟಲ್‌ಗಳಿಂದ ನಿರಂಜನ್ ತಲೆಗೆ ಹೊಡೆದಿದ್ದಾರೆ. ಸದ್ಯ ನಿರಂಜನ್ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಅಚಾನಕ್ ಆಗಿ ನಡೆದ ಗಲಾಟೆಯೋ ಪೂರ್ವನಿಯೋಜಿತ ಕೃತ್ಯವೋ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
8 ವರ್ಷಗಳ ಹಿಂದೆ 'ಜಲ್ಸಾ' ಎಂಬ ಚಿತ್ರದಲ್ಲಿ ನಿರಂಜನ್ ನಟಿಸಿದ್ದರು. ಸಿನಿಮಾಗಳಲ್ಲಿ ಸಣ್ಣಪುಟ್ಟ ಫೈಟ್ ದೃಶ್ಯಗಳಲ್ಲಿ ಫೈಟರ್ ಆಗಿ ನಿರಂಜನ್ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ಅಭಿಮಾನಿ ಆಗಿದ್ದರಿಂದ ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದರು. ದರ್ಶನ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಒಮ್ಮೆ ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಾಗ ಫೈಟ್ ಮಾಡುವುದು ಬಿಟ್ಟಿದ್ದೀನಿ. ಸಣ್ಣಪುಟ್ಟ ಪಾತ್ರ ಮಾಡ್ತಿದ್ದೀನಿ ಎಂದು ದರ್ಶನ್ ಬಳಿ ಹೇಳಿದ್ದರು. ಹೌದಾ, ಸರಿ ಹಾಗಿದ್ದರೆ ನನ್ನ ಮುಂದಿನ ಚಿತ್ರದಲ್ಲಿ ನಿನಗೊಂದು ಪಾತ್ರ ಕೊಡಿಸುತ್ತೀನಿ ಎಂದಿದ್ದರಂತೆ. ಕೆಲವೇ ದಿನಗಳಲ್ಲಿ 'ಒಡೆಯ' ಚಿತ್ರದ ಪಾತ್ರ ಸಿಕ್ಕಿತ್ತು.
ಎಂ. ಡಿ ಶ್ರೀಧರ್ ನಿರ್ದೇಶನದ 'ಒಡೆಯ' ಚಿತ್ರದಲ್ಲಿ ನಾಯಕ(ದರ್ಶನ್)ನ ನಾಲ್ವರು ಸಹೋದರರಲ್ಲಿ ಒಬ್ಬರಾಗಿ ನಿರಂಜನ್ ಬಣ್ಣ ಹಚ್ಚಿದ್ದರು. ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತ್ತು. ತಮಿಳಿನ 'ವೀರಂ' ಚಿತ್ರದ ರೀಮೆಕ್ ಇದಾಗಿತ್ತು. ತಮಿಳಿನಲ್ಲಿ ಅಜಿತ್ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ದರ್ಶನ್ ನಿಭಾಯಿಸಿದ್ದರು. ಸಂದೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು.
ಪ್ರಭುದೇವಾ ನಿರ್ದೇಶನದ 'ಆರ್ ರಾಜ್‌ಕುಮಾರ್' ಚಿತ್ರದಲ್ಲಿ ಶಾಹಿದ್ ಕಪೂರ್ ಡ್ಯೂಪ್ ಆಗಿ ಕೂಡ ನಿರಂಜನ್ ಕೆಲಸ ಮಾಡಿದ್ದರು. ತಂದೆ ಡ್ರೈವರ್ ಹಾಹೂ ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ಮಗನನ್ನು ಸಾಕಿದ್ದಾರೆ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ಫೈಟರ್ ಆಗಿ ನಿರಂಜನ್ ಕಾಣಿಸಿಕೊಂಡಿದ್ದಾರೆ. ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಲ್ಲಿ ಕೂಡ ಮಿಂಚಿದ್ದಾರೆ.


Click it and Unblock the Notifications











