ನಮ್ಮದು ಲವ್ ಕಮ್ ಅರೇಂಜ್ಡ್.. ಮದುವೆ ಯಾವಾಗ ಅಂದ್ರೆ; ನಟ ನಿರಂಜನ್ ಸುಧೀಂದ್ರ ಮಾತು
ಕನ್ನಡ ನಟ ನಿರಂಜನ್ ಸುಧೀಂದ್ರ ಹೊಸಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಮದುವೆ ನಿಶ್ಚಿತಾರ್ಥ ನಡೆದಿದೆ. ಉಪೇಂದ್ರ ಅಣ್ಣನ ಮಗ ನಿರಂಜನ್ ಈಗಾಗಲೇ ಹೀರೊ ಚಿತ್ರರಂಗ ಪ್ರವೇಶಿಸಿದ್ದರು. 3 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೆರಡು ಸಿನಿಮಾಗಳು ಕೈಯಲ್ಲಿವೆ. ಇದೆಲ್ಲದರ ನಡುವೆ ಸಿಹಿಸುದ್ದಿ ನೀಡಿದ್ದಾರೆ.
ಗೈನಕಾಲಜಿಸ್ಟ್ (ಸ್ತ್ರೀರೋಗ ತಜ್ಞೆ) ಸಂಜನಾ ಬಿ ರಾಜ್ ಎಂಬುವವರ ಜೊತೆ ನಿರಂಜನ್ ಸುಧೀಂದ್ರ ಮದುವೆ ನಿಶ್ಚಯವಾಗಿದೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಎರಡೂ ಕುಟುಂಬ ಸದಸ್ಯರು ಹಾಗೂ ಕೆಲವೇ ಆಪ್ತರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಫೋಟೊಗಳನ್ನು ಹಂಚಿಕೊಂಡು ಜೋಡಿಗೆ ಶುಭ ಕೋರಿದ್ದಾರೆ. ನನ್ನ ಕಥೆಯ ಇಷ್ಟದ ಅಧ್ಯಾಯ.. ನನ್ನ ಬಾಳ ಸಂಗಾತಿ ಡಾ. ಸಂಜನಾ ರಾಜ್ ಪರಿಚಯ.. ನಿಮ್ಮೆಲ್ಲರ ಆಶೀರ್ವಾದ ಇರಲಿ" ಎಂದು ನಿರಂಜನ್ ಪೋಸ್ಟ್ ಮಾಡಿದ್ದಾರೆ.

ಎಂಗೇಜ್‌ಮೆಂಟ್ ಹಾಗೂ ಮದುವೆ ತಯಾರಿ ಬಗ್ಗೆ ನಟ ನಿರಂಜನ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.. 6 ತಿಂಗಳ ಹಿಂದೆ ಸ್ನೇಹಿತರ ಮೂಲಕ ಇಬ್ಬರ ಪರಿಚಯವಾಗಿತ್ತು. ಬಳಿಕ ಸ್ನೇಹಿತರಾಗಿದ್ದೆವು. ಬಳಿಕ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಈಗ ಮದುವೆ ಆಗುತ್ತಿದ್ದೇವೆ. ಸರಳವಾಗಿ ಎಂಗೇಜ್‌ಮೆಂಟ್ ನಡೀತು. ವರ್ಷಾಂತ್ಯಕ್ಕೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೀತಿದೆ ಎಂದಿದ್ದಾರೆ.
ಬಾಳ ಸಂಗಾತಿ ಆಗುತ್ತಿರುವ ಡಾ. ಸಂಜನಾ ರಾಜ್ ಬಗ್ಗೆ ನಿರಂಜನ್ ಪ್ರತಿಕ್ರಿಯಿಸಿದ್ದಾರೆ. ಆಕೆ ಸದ್ಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದಾರೆ. ಅಂತಿಮ ವರ್ಷದ ಎಂಎಸ್ ಮಾಡುತ್ತಿದ್ದು ಜೊತೆಗೆ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಕಳೆದ 10 ವರ್ಷಗಳಿಂದ ಅವರ ಫ್ಯಾಮಿಲಿ ಬೆಂಗಳೂರಿನಲ್ಲಿದೆ. ಅವರ ಪೋಷಕರದ್ದು ಮೂಲತಃ ಮೈಸೂರು ಎಂದು ತಿಳಿಸಿದ್ದಾರೆ.

'ಹಂಟರ್' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆಯಾಗಲಿದೆ. 'ಸ್ಪಾರ್ಕ್' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದೀನಿ. ಮಗದೊಂದು ಸಿನಿಮಾ ಚರ್ಚೆ ನಡೀತಿದೆ. ಶೀಘ್ರದಲ್ಲೇ ಘೋಷಣೆ ಆಗುತ್ತದೆ ಎಂದು ನಿರಂಜನ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲೇ ಮದುವೆ ನಡೆಯಲಿದೆ. ಎಲ್ಲಿ, ಯಾವಾಗ ಎನ್ನುವುದು ಅಂತಿಮವಾಗಿಲ್ಲ. ವರ್ಷಾಂತ್ಯಕ್ಕೆ ಮದುವೆ ಮಾಡಬೇಕು ಎಂದು ಎರಡೂ ಕುಟುಂಬದವರು ನಿಶ್ಚಯಿಸಿರುವುದಾಗಿ ಹೇಳಿದ್ದಾರೆ.
ನಿಶ್ಚಿತಾರ್ಥದಲ್ಲಿ ಕ್ರೀಮ್ ಕಲರ್ ಸಫಾರಿ ಸೂಟ್ ಧರಿಸಿ ನಿರಂಜನ್ ಸುಂಧೀಂದ್ರ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಸೀರೆ ಉಟ್ಟು ಸಂಜನಾ ಮಿಂಚಿದ್ದಾರೆ. ಕುರ್ತಾ ಪೈಜಾಮ ಧರಿಸಿ ಉಪೇಂದ್ರ ಮಿಂಚಿದ್ದು ಸೀರೆ ಉಟ್ಟು ಪತ್ನಿ ಪ್ರಿಯಾಂಕ ಉಪೇಂದ್ರ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ವಿಷ್ಣುವರ್ಧನ್ ನಟನೆಯ 'ಬಳ್ಳಾರಿ ನಾಗ' ಚಿತ್ರದಲ್ಲಿ ನಿರಂಜನ್ ಬಾಲನಟನಾಗಿ ಬಣ್ಣ ಹಚ್ಚಿದ್ದರು. ಬಳಿಕ ಪ್ರಿಯಾಂಕ ಉಪೇಂದ್ರ ನಟನೆಯ 'ಸೆಕೆಂಡ್ ಹಾಫ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.
ಹೀರೊ ಆಗಿ ನಿರಂಜನ್ ನಟಿಸಿದ ಮೊದಲ ಸಿನಿಮಾ 'ನಮ್ಮ ಹುಡುಗರು'. ಆ ಬಳಿಕ 'ಸೀತಾಪಯಣ' ಚಿತ್ರದಲ್ಲಿ ಐಶ್ವರ್ಯ ಸರ್ಜಾ ಜೊತೆ ನಾಯಕನಾಗಿ ನಟಿಸಿದ್ದರು. ಅರ್ಜುನ್ ಸರ್ಜಾ ಈ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದು ಗೊತ್ತೇಯಿದೆ. ಉಪೇಂದ್ರ ಅಣ್ಣ ಸುಧೀಂದ್ರ ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಆರಂಭದಿಂದಲೂ ಉಪ್ಪಿಗೆ ಬೆನ್ನೆಲುಬಾಗಿ ನಿಂತಿದ್ದರು. ಈಗಾಗಲೇ ಉಪೇಂದ್ರ ಮಕ್ಕಳಾದ ಆಯ್ಯುಷ್ ಹಾಗೂ ಮಗಳು ಐಶ್ವರ್ಯ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಯಲ್ ಸ್ಟಾರ್ ಶೀಘ್ರದಲ್ಲೇ ರಿಯಲ್ ಪಾಲಿಟಿಕ್ಸ್ ಶುರು ಮಾಡುವುದಾಗಿ ಹೇಳಿದ್ದಾರೆ.


Click it and Unblock the Notifications