ಮನಮೋಹನ್ ಸಿಂಗ್ ಬಗ್ಗೆ ಸುಳ್ಳು ಹೇಳಿಕೆಗೆ ಕ್ಷಮೆ ಯಾಚಿಸಿದ ನಟ ಪ್ರಕಾಶ್ ಬೆಳವಾಡಿ
"ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದೇ ಕಾನೂನುಬಾಹಿರ" ಎಂದು ಹೇಳಿಕೆ ನೀಡಿದ್ದ ಹಿರಿಯ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಇದೀಗ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ಡಾ. ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರಧಾನಮಂತ್ರಿ ಮಾಡಿದ್ದು, ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕಾಶ್ ಬೆಳವಾಡಿಯವರ ಹೇಳಿಕೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಖಂಡಿಸಿದ್ದರು. ಸರಿಯಾಗಿ ಇತಿಹಾಸ ಹಾಗೂ ಸಂವಿಧಾನ ತಿಳಿಯದೇ ಮಾತನಾಡಬಾರದು ಎಂದಿದ್ದರು. ಈ ಬಗ್ಗೆ ಸುದೀರ್ಘವಾಗಿ ಟ್ವೀಟ್ ಮಾಡಿದ್ದರು. ಸಾಕಷ್ಟು ಜನ ಅವರನ್ನು ಬೆಂಬಲಿಸಿ ಪ್ರಕಾಶ್ ಬೆಳವಾಡಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಯನ್ನೇ ನಿಜ ಎಂದು ನಂಬಿ ಮಾತನಾಡಬಾರದು ಎಂದು ಪ್ರಕಾಶ್ ಬೆಳವಾಡಿ ಅವರನ್ನು ಕುಟುಕಿದ್ದರು.

ಇದೀಗ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ವಕ್ತಾರ ಬ್ರಿಜೇಶ್ ಕಾಳಪ್ಪ ಅವರನ್ನು ಪ್ರಕಾಶ್ ಬೆಳವಾಡಿ ಸಂಪರ್ಕಿಸಿದ್ದಾರೆ. ಲಾವಣ್ಯ ಬಳ್ಳಾಲ್ ಹಾಗೂ ಬಿ.ಕೆ.ಹರಿಪ್ರಸಾದ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಸ್ವತಃ ಹರಿಪ್ರಸಾದ್ ಟ್ವೀಟ್ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. "ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ತಾವು ಆಡಿರುವ ಮಾತುಗಳನ್ನು ಹಿಂದಕ್ಕೆ ಪಡೆದು,ಆಗಿರುವ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ತಮ್ಮ ಅಪಾರ ಜ್ಞಾನ, ತಿಳುವಳಿಕೆ ಹಾಗೂ ಅಧ್ಯಯನದಿಂದ ದೇಶವನ್ನು ಮುನ್ನೆಡಸಿದ ಆರ್ಥಿಕ ತಜ್ಞರನ್ನು ಹೀಯಾಳಿಸುವುದು ತರವಲ್ಲ, ಅದಾಗ್ಯೋ ಭೂಮಿಯ ಮೇಲೆ ಜೀವಂತವಿಲ್ಲದ, ಉದಾತ್ತ "ಆತ್ಮ"ವನ್ನು ಆರೋಪಿಸುವುದು ಒಪ್ಪುವಂತದ್ದಲ್ಲ. 1991ರ ಅಸ್ಸಾಂ ನಿವಾಸಿ ಕಾನೂನು ಹಾಗೂ 2003ರ ಜನತಾ ಪ್ರಾತಿನಿಧ್ಯ ತಿದ್ದುಪಡಿ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದೆ ಎಂದು ಬೆಳವಾಡಿಯವರನ್ನು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ" ಎಂದು ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಅಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಪ್ರಕಾಶ್ ಬೆಳವಾಡಿ "ಮನಮೋಹನ್ ಸಿಂಗ್ ಅವ್ರು ಲೋಕಸಭೆ ಚುನಾವಣೆಗೆ ನಿಂತು ಸೋತಿದ್ದರು ಎನ್ನುವುದು ನಿಮಗೆ ಗೊತ್ತಾ? ಎಷ್ಟು ಬೇಗ ಮರೆತುಬಿಡ್ತೀವಿ ಅಲ್ವಾ?? ಅವ್ರು ಚುನಾವಣೆಗೆ ನಿಂತು ಸೋತಿದ್ರು, ಬಳಿಕ ಅವ್ರನ್ನು ನ್ಯಾಚುರಲ್ ಸಿಟಿಜನ್ ಆಫ್ ಅಸ್ಸಾಂ ಎಂದು ಹೇಳಿ ಕರೆತಂದು ಪ್ರಧಾನಿ ಮಾಡಿದ್ರು. ಅದು ಕಾನೂನಿಗೆ ವಿರುದ್ಧ. ಸಂವಿಧಾನಕ್ಕೆ ವಿರುದ್ಧವಾಗಿತ್ತು. ಸಂವಿಧಾನವನ್ನು ತಿದ್ದುಪಡಿ ಮಾಡಿದ್ದರು. ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು ಎಂದಿತ್ತು. ಆದ್ರೆ ಅವ್ರನ್ನು ಪ್ರಧಾನಿ ಮಾಡಲು ಸಂವಿಧಾನ ತಿದ್ದುಪಡಿ ಮಾಡಿದ್ದರು" ಎಂದು ಹೇಳಿಕೆ ನೀಡಿದ್ದರು.
ಪ್ರಕಾಶ್ ಬೆಳವಾಡಿ ಹೇಳಿಕೆ ಖಂಡಿಸಿ ಬಿ. ಕೆ ಹರಿಪ್ರಸಾದ್ ಅಂದು ಸುದೀರ್ಘವಾಗಿ ಟ್ವೀಟ್ ಮಾಡಿದ್ದರು. "ಸಂವಿಧಾನದ ಪ್ರಖಂಡ ಪಂಡಿತರಂತೆ, ಕಾನೂನು ತಜ್ಞರಂತೆ ಸಂವಿಧಾನದ ವಿಧಿ, ವಿಧಾನಗಳು ಹಾಗೂ ಕಾನೂನುಗಳ ಬಗ್ಗೆ ವಾಚಾಮಗೋಚರ ಹಲುಬಿರುವ ಬೆಳವಾಡಿಗೆ ದೇಶದ ಮೂಲೆಯ ಯಾವ ಪ್ರಜೆಯಾದರೂ ಪ್ರಧಾನಿಯಾಗುವ ಹಕ್ಕು,ಅಧಿಕಾರ, ಅರ್ಹತೆ ಸಂವಿಧಾನವೇ ನೀಡಿದೆ ಎಂಬುದು ಗೊತ್ತಿಲ್ಲದೆ ಇರುವುದು ವಿಪರ್ಯಾಸ" ಎಂದು ತಿವಿದಿದ್ದರು.
"ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಬಾರದೆಂದು ಯಾವ ಸಂವಿಧಾನ, ಕಾನೂನಿನಲ್ಲಿದೆ ಎಂದು ಬೆಳವಾಡಿ ಜನರಿಗೆ ತಿಳಿಸಲಿ. ಜಗತ್ತು ಕಂಡ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಅಸ್ಸಾಂ ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರಾಗಿ ಪ್ರಧಾನಿಯಾದದ್ದು ಯಾವ ಅಪರಾಧ? ಅಸ್ಸಾಂ ದೇಶದಲ್ಲಿರುವ ರಾಜ್ಯವಲ್ಲವೇ? ಕರ್ನಾಟಕದಿಂದಲೇ ಪ್ರಧಾನಿಯಾದ ಹೆಚ್ ಡಿ ದೇವೇಗೌಡರು ಕೂಡ ರಾಜ್ಯಸಭೆಯ ಸದಸ್ಯರಾಗಿಯೇ ಎನ್ನುವುದು ಬಹಿರಂಗ ಸತ್ಯವಲ್ಲವೇ?" ಎಂದು ಪ್ರಶ್ನಿಸಿದ್ದರು.


Click it and Unblock the Notifications











