'ದರ್ಶನ್'ಗೋಸ್ಕರ 'ಪ್ರಥಮ್' ಪ್ರಾರ್ಥನೆ, ಬದುಕ್ಬೇಕಲ್ಲ, ಬಕೆಟ್ ಹಿಡಿತಾವ್ನೆ ಎಂದ ಡಿ ಫ್ಯಾನ್ಸ್...!
ಬಿಗ್ ಬಾಸ್ ಕಾರ್ಯಕ್ರಮದ ನಾಲ್ಕನೇ ಸೀಸನ್‌ನ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಸನ್‌ನಲ್ಲಿ ಪ್ರಥಮ್ ಉಣಬಡಿಸಿದ್ದ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರು ಇನ್ನೂ ಮರೆತಿರಲಿಕ್ಕಿಲ್ಲ. ಒಂದಿಷ್ಟು ಕಿರಿಕ್ಕು- ಇನ್ನೊಂದಿಷ್ಟು ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ಆ ನಂತರ ಚಿತ್ರಗಳಲ್ಲಿ ಬ್ಯುಸಿಯಾದರು. ದೇವ್ರಂಥಾ ಮನುಷ್ಯ ಸೇರಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿದರು. ಸದ್ಯ ಪ್ರಥಮ್ ಅಭಿನಯದ ಫಸ್ಟ್ ನೈಟ್ ವಿತ್ ದೆವ್ವ ಮತ್ತು ನಿರ್ದೇಶಿಸಿ ಅಭಿನಯಿಸಿರುವ ಕರ್ನಾಟಕದ ಅಳಿಯ ಚಿತ್ರಗಳು ಬಿಡುಗಡೆಯಾಗಬೇಕಿವೆ.
ಇಂಥಾ ಪ್ರಥಮ್ ಈಗ ಜೈಲಿನಲ್ಲಿರುವ ದರ್ಶನ್ ಬಿಡುಗಡೆಗೆ ಪ್ರಾರ್ಥನೆ ಮಾಡಿದ್ದಾರೆ. ದೇವ್ರಾಣೆ ಬಿಡುಗಡೆಯಾಗಲಿ ಎಂದು ಹೇಳಿದ್ದಾರೆ. ಇದು ಕೆಲವರ ಅಚ್ಚರಿಗೆ ಕಾರಣವಾದರೆ, ಇನ್ನೂ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಅಸಲಿಗೆ .. ದರ್ಶನ್ ಜೈಲು ಪಾಲಾದ ದಿನದಿಂದ, ಪ್ರಥಮ್ ಕುಂತರೂ ನಿಂತರೂ ದರ್ಶನ್ ಧ್ಯಾನ ಮಾಡುತ್ತಿದ್ದರು. ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಅಂಧಾಭಿಮಾನ ಎಂದು ಸಂಭೋದಿಸಿದ್ದರು. ಆ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು. ಅಂಧಾಭಿಮಾನಿಗಳೇ ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆ ಪೊಲೀಸ್ ನೋಟಿಸ್ ಬಂದಮೇಲೆ ಸ್ಟೇಷನ್‌ಗೆ ಬಂದಾಗ ನಾವು ಪ್ರಥಮ್ ಅಭಿಮಾನಿ, ಯಾರೋ ಫೇಕ್ ಪ್ರೊಫೈಲ್ ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ ಎಂದು ವ್ಯಂಗ್ಯವಾಡಿದ್ದರು.
ಇದು ಸಾಲದು ಎನ್ನುವಂತೆ ಕನ್ನಡ ಚಿತ್ರರಂಗದ ಒಳಿತಿಗಾಗಿ ಚಿತ್ರರಂಗದವೆರಲ್ಲ ಪೂಜೆ-ಹೋಮ-ಹವನ ಮಾಡುತ್ತಿದ್ದಾಗ ಪ್ರಥಮ್ ರೇಣುಕಾಸ್ವಾಮಿ ಅವರ ಕುಟುಂಬವನ್ನು ಭೇಟಿ ಮಾಡಿದ್ದರು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಒಂದು ಕುಟುಂಬ ತನ್ನ ಮನೆಮಗನನ್ನು ಕಳೆದುಕೊಂಡಿದೆ. ಸಹನಾ ಅವರು ಅವರ ಗಂಡನನ್ನು ಕಳೆದುಕೊಂಡಿದ್ದಾರೆ. ಇವರಿಗೆ ಆಗಿರುವುದು ಅಕ್ಷಮ್ಯ ಅದು ಆಗಬಾರದಿತ್ತು ಎಂದಿದ್ದಾರೆ. ನಾನು ಸುಮ್ನೆ ವಿಷಾದದ ಮಾತುಗಳನ್ನಾಡಲು ಬಂದಿಲ್ಲ, ರೇಣುಕಾ ಸ್ವಾಮಿ ಅವರನ್ನು ಬೈಯ್ಯುವವರು ಇವರೆಲ್ಲರ ಬಗ್ಗೆ ಒಮ್ಮೆ ಯೋಚನೆ ಮಾಡಬೇಕು ಎಂದು ಹೇಳಿದ್ದರು. ರೇಣುಕಾಸ್ವಾಮಿ ಕುಟುಂಬದ ನೋವು ನನ್ನನ್ನೂ ಕಾಡುತ್ತಿತ್ತು ಎಂದಿದ್ದರು.

ಹೀಗೆ ಕಾಲ ಕಾಲಕ್ಕೆ ದರ್ಶನ್ ಅವರ ಅಭಿಮಾನಿಗಳನ್ನು ಕೆಣಕುತ್ತಾ, ಕೆರಳಿಸುತ್ತಾ ಬಂದ ಪ್ರಥಮ್ ಈಗ ಏಕಾಏಕಿ ದರ್ಶನ್ ಅವರ ಬಿಡುಗಡೆಗೆ ಪ್ರಾರ್ಥನೆ ಮಾಡಿದ್ದಾರೆ. ಅಂಧಾಭಿಮಾನಿ ಎಂದಿದ್ದು ನೋವಾಗಿದ್ದರೆ ಮರೆತು ಬಿಡಿ ಎಂದಿದ್ಧಾರೆ. ಕೆಟ್ಟ ಕಾಲ ಎಲ್ಲರಿಗೂ ಬರುತ್ತೆ, ಅದನ್ನು ದಾಟಿ ಅಭಿಮಾನಿಗಳನ್ನು ರಂಜಿಸಲಿ ಎಂದು ಹೇಳಿದ್ದಾರೆ. ಪ್ರಥಮ್ ಅವರ ನಡೆ ಮತ್ತು ನುಡಿಯನ್ನು ನೋಡಿದ ಅನೇಕರು ಈಗ ಪ್ರಥಮ್ ಅವರ ಕುರಿತು ವ್ಯಂಗ್ಯ ಮಾಡುತ್ತಿದ್ದಾರೆ. ಕಾಲೆಳೆಯುತ್ತಿದ್ದಾರೆ.
ದರ್ಶನ್ ಜೈಲಿಂದ ಹೊರ ಬರುವ ವಿಚಾರ ಗೊತ್ತಾದ ನಂತರ ವರಸೆ ಬದಲಾಯ್ತಾ ಎಂದು ಪ್ರಶ್ನೆಯನ್ನು ಕೇಳುತ್ತಿರುವ ಅನೇಕರು ನಿನ್ನ ಪೌರುಷ ಬಾಸ್ ಬರೋವರೆಗೆ ಮಾತ್ರಾನಾ ಎನ್ನುತ್ತಿದ್ದಾರೆ. ಬದುಕ್ಬೇಕಲ್ಲ.. ಬಕೆಟ್ ಹಿಡಿತಾವ್ನೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ದರ್ಶನ್ ಹೊರ ಬರುತ್ತಿರುವ ವಿಚಾರ ಕೇಳಿ ಭೇದಿ ಶುರುವಾಯ್ತಾ ಎಂದಿದ್ದಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂಬ ಗಾದೆ ಮಾತನ್ನು ಪ್ರಥಮ್ ಅವರಿಗೆ ನೆನಪಿಸುತ್ತಿದ್ದಾರೆ.
ಇನ್ನೂ ಕೆಲವರು ನೀವು ಪ್ರಾಮಾಣಿಕ ಅಂದ ಮೇಲೆಯೇ ಗೊತ್ತಾಯ್ತು, ಹೀಗೂ ಟ್ರೋಲ್ ಮಾಡಬಹುದಾ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಈ ಫೋಸ್ಟ್ ಹಂಚಿಕೊಂಡಿದ್ದೀರಾ ಎಂದರೆ ಇವತ್ತು ಕೂಡ ಜಾಮೀನು ಸಿಗಲ್ಲ ಅಂತಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಪ್ರಥಮ್ ಅವರ ಈ ಫೋಸ್ಟ್ ಗೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.


Click it and Unblock the Notifications











