ನಟ ಪೃಥ್ವಿ ಅಂಬರ್ ತಾಯಿ ನಿಧನ
ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟ ಪೃಥ್ವಿ ಅಂಬರ್ ಅವರ ತಾಯಿ ಸುಜಾತಾ ವೀರಪ್ಪ ಅಂಬರ್ ನಿನ್ನೆ (ಜುಲೈ 15) ರಂದು ನಿಧನ ಹೊಂದಿದ್ದಾರೆ.
ಸುಜಾತಾ ಅವರು ಕೆಲ ಸಮಯದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಂಗಳೂರಿನಲ್ಲಿ ನಡೆಯಲಿದೆ.
ಸುಜಾತಾ ಅವರು, ಮಂಗಳೂರಿನ ಆರ್‌ಎಸ್‌ಎಸ್ ಪ್ರಮುಖ ವೀರಪ್ಪ ಅಂಬರ್ ಅವರ ಪತ್ನಿಯಾಗಿದ್ದರು. ಹಲವು ರೀತಿಯ ಸಮಾಜ ಸೇವೆಗಳಲ್ಲಿ, ಮಹಿಳಾಪರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಸುಜಾತಾ ಅಂಬರ್ ದುರ್ಗಾಪರಮೇಶ್ವರಿ ದೇವಾಲಯದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪೃಥ್ವಿ ಅಂಬರ್ ಅವರು ತುಳು ಸಿನಿಮಾಗಳಿಂದ ನಟನೆ ಆರಂಭಿಸಿ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ರಾಧಾ-ಕಲ್ಯಾಣ', 'ಜೊತೆ-ಜೊತೆಯಲಿ'ಗಳಲ್ಲಿ ನಟಿಸಿ ಬಳಿಕ 'ದಿಯಾ' ಸಿನಿಮಾದ ಮೂಲಕ ನಾಯಕ ನಟನಾದರು. ಈ ಸಿನಿಮಾ ಇವರಿಗೆ ಭಾರಿ ದೊಡ್ಡ ಅದೃಷ್ಟ ತಂದೊಡ್ಡಿತು.
'ದಿಯಾ' ಸಿನಿಮಾದ ಬಳಿಕ ಸಾಲು-ಸಾಲು ಅವಕಾಶಗಳು ಪೃಥ್ವಿ ಅಂಬರ್ ಅವರನ್ನು ಅರಸಿ ಬಂದವು. ಶಿವರಾಜ್ ಕುಮಾರ್ ನಟನೆಯ 'ಬೈರಾಗಿ' ಸಿನಿಮಾದಲ್ಲಿ ಪೃಥ್ವಿ ಅಂಬರ್ ನಟಿಸಿದ್ದಾರೆ. ಈ ಸಿನಿಮಾ ಹಿಟ್ ಆಗಿದ್ದು, ಇವರ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಇವರು ನಟಿಸಿರುವ 'ಶುಗರ್ ಲೆಸ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ 'ಲೈಫ್ ಈಸ್ ಬ್ಯೂಟಿಫುಲ್', 'ಫಾರ್ ರಿಜಿಸ್ಟ್ರೇಷನ್', ಜೊತೆಗೆ ತಮಿಳಿನ 'ಮಳೈ ಪುಡಿಕತ ಮಣಿದನ್' ಸಿನಿಮಾಗಳಲ್ಲಿಯೂ ಪೃಥ್ವಿ ನಟಿಸಲಿದ್ದಾರೆ.


Click it and Unblock the Notifications











