Puneeth Rajkumar: ಅಪ್ಪು ಸ್ಮಾರಕದಲ್ಲಿ ರಾಜ್ ಕುಟುಂಬದಿಂದ ಪೂಜೆ, ಅಪ್ಪನಿಗೆ ಇಷ್ಟದ ತಿಂಡಿಗಳನ್ನಿಟ್ಟ ಮಕ್ಕಳು
ಭಾನುವಾರ (ಅಕ್ಟೋಬರ್ 29) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎರಡನೇ ವರ್ಷದ ಪುಣ್ಯತಿಥಿ. ಈಗಾಗಲೇ ರಾಜ್ಯದ ಹಲವು ಭಾಗಗಳಿಂದ ಅಭಿಮಾನಿಗಳು ಪುನೀತ್ ಸ್ಮಾರಕದ ಬಳಿ ಜಮಾಯಿಸಿದ್ದು, ರಾಜ್‌ಕುಮಾರ್ ಕುಟುಂಬ ಸದಸ್ಯರು ಕೂಡ ಮನೆ ಮಗನಿಗೆ ನಮನ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿಯಲ್ಲಿ ಪುಣ್ಯತಿಥಿ ನಡೆಯುತ್ತಿದ್ದು. ಅಪ್ಪು ಸಮಾಧಿ ಬಳಿ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನಡೆಯುತ್ತಿವೆ. ಕರುನಾಡಿನ ರಾಜಕುಮಾರನಿಗೆ ಇಷ್ಟವಾದ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು, ರಾಘವೇಂದ್ರ ರಾಜ್‌ಕುಮಾರ್, ಯುವರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಮಕ್ಕಳು ಪೂಜೆ ಸಲ್ಲಿಸಿದ್ದಾರೆ.

ಅಪ್ಪು ಸಮಾಧಿಗೆ ಬಂದ ಅಭಿಮಾನಿಗಳಿಗೆ ಅನ್ನದಾನ
ನಗುಮುಖದ ಮಾಣಿಕ್ಯ ನಮ್ಮನ್ನು ದೈಹಿಕವಾಗಿ ಅಗಲಿ ಎರಡು ವರ್ಷಗಳಾದರೂ ಇನ್ನು ಕರುನಾಡು ದುಖಃದಲ್ಲಿದೆ. ಅಭಿಮಾನಿಗಳು ಕಂಠಿರವ ಸ್ಟೂಡಿಯೋಗೆ ಬರುವುದು ಕಡಿಮೆಯಾಗಿಲ್ಲ. ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡುತ್ತಲೆ ಇದ್ದಾರೆ. ಹೀಗಿರುವಾಗ ಇವತ್ತು ಅವರ ಪುಣ್ಯತಿಥಿ ಬೇರೆ. ಅಭಿಮಾನಿಗಳು ಈ ದಿನ ಅವರಿಗೆ ಗೌರವ ಸಲ್ಲಿಸದೆ ಇರುತ್ತಾರೆಯೇ...? ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ.
ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನ ಸಮಾಧಿಯನ್ನು ನೋಡಿ ಕಣ್ಣೀರು ಸುರಿಸುತ್ತಾ ಗೌರವ ಸಲ್ಲಿಸುತ್ತಿದ್ದಾರೆ. ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳ ದಂಡು ನೆರೆದಿದೆ. ದೂರದ ಊರುಗಳಿಂದ ಬೆಳಗ್ಗೆಯೇ ಬಂದಿರುವ ಅಭಿಮಾನಿಗಳಿಗಾಗಿ ರಾಜ್ ಕುಮಾರ್ ಕುಟುಂಬ ಸಹ ಹಲವು ವ್ಯವಸ್ಥೆ ಮಾಡಿದೆ.
ಅಪ್ಪು ಸ್ಮಾರಕಕ್ಕೆ ಬಂದ ಅಭಿಮಾನಿಗಳಿಗಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಯುವರಾಜ್ ಕುಮಾರ್ ಅವರು ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಅನ್ನದಾನ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಕೂಡ ನಡೆಯಲಿದ್ದು, ಇಂದು ಇಡೀ ದಿನ ರಾಜ್ಕುಮಾರ್ ಕುಟುಂಬಸ್ಥರು ಅನ್ನದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಅಣ್ಣಾವ್ರ ಸ್ಮಾರಕದಂತೆ ಅಪ್ಪು ಸ್ಮಾರ ನಿರ್ಮಾಣ
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಡಾ.ರಾಜ್‌ಕುಮಾರ್ ಅವರ ಸಮಾಧಿ ಮಾದರಿಯಲ್ಲೇ ಅಪ್ಪು ಸಮಾಧಿಯನ್ನು ಕಟ್ಟಲಾಗಿದೆ. ಬಿಳಿ ಮಾರ್ಬಲ್ ಬಳಕೆ ಮಾಡಿ ಅಪ್ಪು ಸ್ಮಾರಕ ನಿರ್ಮಾಣ ಮಾಡಿದ್ದು, ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಸ್ಮಾರಕದ ಮೇಲೆ ಅಪ್ಪು ಪೋಟೋ ಇಡಲಾಗಿದೆ.
ಅಪ್ಪು ಸ್ಮರಣೆಗೆ ಉಚಿತ ಬಿರಿಯಾನಿ ವಿತರಣೆ
ಪುನೀತ್ ನಮ್ಮನ್ನಾಗಲಿ ಎರಡು ವರ್ಷ ಕಳೆದರು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಪುನೀತ್ ರಾಜಕುಮಾರ್ ರವರ 2 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಭಿಮಾನಿಗಳಿಗೆ ಉಚಿತ ಬಿರಿಯಾನಿ ವಿತರಣೆ ಮಾಡಲಾಗುತ್ತಿದೆ. ಕೋಡಂಬಳ್ಳಿ ಗ್ರಾಮದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಬಿರಿಯಾನಿ ವಿತರಣೆ ನಡೆಯಲಿದೆ.
ಬಲ್ಲಾಪಟ್ಟಣ ಗ್ರಾಮದ ವಿವೇಕ್ ಎಂಬಾತ ಅಪ್ಪು ಅವರ ಅಪ್ಪಟ ಅಭಿಮಾನಿ. ಹೀಗಾಗಿ ಬಿರಿಯಾನಿಯನ್ನು ಉಚಿತವಾಗಿ ವಿತರಣೆ ಮಾಡಲು 250 KG ಚಿಕನ್ ಬಿರಿಯಾನಿ ತಯಾರು ಮಾಡಿದ್ದಾರೆ. ನೆಚ್ಚಿನ ನಟನಿಗೆ ಗೌರವ ಸಲ್ಲಿಸಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೇ ರಾಜ್ಯದ ಹಲವು ಭಾಗಗಳಲ್ಲಿ ಇಂದು ಅನ್ನದಾನ, ರಕ್ತದಾನ ಮತ್ತು ಸಮಾಜಮುಖಿ ಕೆಲಸಗಳು ನಡೆಯಲಿವೆ.


Click it and Unblock the Notifications











