ಪೌರಾಣಿಕ ಚಿತ್ರದಲ್ಲಿ ಪುನೀತ್ : ಅಪ್ಪು ಹೊಸ ಸಿನಿಮಾದ ಎಕ್ಸ್ ಕ್ಲೂಸಿವ್ ಮಾಹಿತಿ!
Recommended Video

ನಟ ಪುನೀತ್ ರಾಜ್ ಕುಮಾರ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡರು. ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಕೆಲ ಸಿನಿಮಾಗಳ ಮೋಷನ್ ಪೋಸ್ಟರ್, ಫಸ್ಟ್ ಲುಕ್ ಗಳು ಬಿಡುಗಡೆಯಾದವು.
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಸಿನಿಮಾದ ಫಸ್ಟ್ ಲುಕ್ ಹಾಗೂ ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್', ಪವನ್ ಒಡೆಯರ್ ಅವರ ವಿಶೇಷ ಹಾಡು ಅಪ್ಪು ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳ ಮುಂದೆ ಬಂದಿತ್ತು.
ಈ ಎಲ್ಲ ಸಿನಿಮಾಗಳ ಜೊತೆಗೆ ಒಂದು ಹೊಸ ಚಿತ್ರದ ಪೋಸ್ಟರ್ ಸಹ ಹೊರ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಕೆಲವರ ಕಣ್ಣಿಗೆ ಬಿದ್ದಿದೆ. ಅಂದಹಾಗೆ, ಈ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾದ ಪೋಸ್ಟರ್ ಆಗಿದೆ. ಈ ಸಿನಿಮಾದ ಎಕ್ಸ್ ಕ್ಲೂಸಿವ್ ಮಾಹಿತಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿವೆ. ಮುಂದೆ ಓದಿ...

ನಿರ್ದೇಶಕ ಸಾಯಿಕೃಷ್ಣ ಮಹತ್ವದ ಸಿನಿಮಾ
ಕನ್ನಡದ ಖ್ಯಾತ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ಪುತ್ರ ಸಾಯಿಕೃಷ್ಣ ಇದೀಗ ಒಂದು ಮಹತ್ವದ ಸಿನಿಮಾ ಮಾಡಲು ಹೊರಟಿದ್ದಾರೆ. ರಾಜ್ ಕುಟುಂಬಕ್ಕೆ ಓಂ ಸಾಯಿ ಪ್ರಕಾಶ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದು, ಈಗ ಅವರ ಮಗ ಸಾಯಿಕೃಷ್ಣ ಪುನೀತ್ ರಾಜ್ ಕುಮಾರ್ ಅವರಿಗೆ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ 'ಕ' ಸಿನಿಮಾಗೆ ಸಾಯಿಕೃಷ್ಣ ಆಕ್ಷನ್ ಕಟ್ ಹೇಳಿದ್ದರು.

ಫಸ್ಟ್ ಲುಕ್ ಅಲ್ಲ, 'ಡ್ರೀಮ್ ಲುಕ್'
ತಮ್ಮ ಕನಸಿನ ಸಿನಿಮಾದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ನಿರ್ದೇಶಕ ಸಾಯಿಕೃಷ್ಣ ಮಾತನಾಡಿದ್ದಾರೆ. ''ಇದು ಸಿನಿಮಾದ ಫಸ್ಟ್ ಲುಕ್ ಅಲ್ಲ, ನನ್ನ ಡ್ರೀಮ್ ಲುಕ್. ನಾನು ಪುನೀತ್ ಅವರನ್ನು ಈ ರೀತಿ ನೋಡಲು ಇಷ್ಟ ಪಡುತ್ತಿದ್ದೇನೆ'' ಎಂದರು. ಪುನೀತ್ ಗಾಗಿ ದೊಡ್ಡ ಸಿನಿಮಾವೊಂದನ್ನು ಸಾಯಿಕೃಷ್ಣ ಪ್ಲಾನ್ ಮಾಡಿದ್ದಾರೆ. ಪುನೀತ್ ಕೂಡ ಸಾಯಿ ಜೊತೆಗೆ ಒಂದು ಸಿನಿಮಾ ಮಾಡಲಿದ್ದಾರೆ.

ತಂದೆಯ ಕಥೆ, ಮಗನ ನಿರ್ದೇಶನ
ಅಂದಹಾಗೆ, ಪುನೀತ್ ರಾಜ್ ಕುಮಾರ್ ಅವರ ಈ ಹೊಸ ಸಿನಿಮಾ ಕಥೆ ನಿರ್ದೇಶಕ ಸಾಯಿ ಪ್ರಕಾಶ್ ಅವರದ್ದಾಗಿರಲಿದೆ. ಈಗಾಗಲೇ, ಈ ಸಿನಿಮಾದ ಸ್ಟೋರಿ ಬೋರ್ಡ್ ರೆಡಿಯಾಗಿದೆ. ತಂದೆಯ ಕಥೆಯನ್ನು ಮಗ ಸಾಯಿಕೃಷ್ಣ ತೆರೆಗೆ ತರಲಿದ್ದಾರೆ. ''ಅಪ್ಪು ಒಬ್ಬ ಲೆಜೇಂಡ್ ಮಗ. ಅವರನ್ನು ಸಣ್ಣ ವಯಸ್ಸಿನಿಂದ ನೋಡಿದ್ದೇನೆ. ಅವರು ತಾಕತ್ತು ನನಗೆ ತಿಳಿದಿದೆ.'' ಎನ್ನುತ್ತಾರೆ ಸಾಯಿ ಕೃಷ್ಣ.

ಪ್ಯಾನ್ ಇಂಡಿಯಾ ಸಿನಿಮಾ
ಪುನೀತ್ ಅವರ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆಯಂತೆ. ಒಂದು ಕಾಲದಲ್ಲಿ ರಾಜ್ ಕುಮಾರ್ ಅವರ ಸಿನಿಮಾ ಬಂತು ಅಂದರೆ ನಾಲ್ಕೈದು ವಾರ ಟಿಕೆಟ್ ಸಿಗುತ್ತಿರಲಿಲ್ಲ. ಈ ಸಿನಿಮಾ ಕೂಡ ಆ ರೀತಿ ಆಗಬೇಕು, ಆ ಮಟ್ಟದಲ್ಲಿ ಚಿತ್ರ ಬರಬೇಕು ಎನ್ನುವ ಆಸೆಯನ್ನು ಸಾಯಿಕೃಷ್ಣ ಹೊಂದಿದ್ದಾರೆ. ದೊಡ್ಡ ನಟನಿಗಾಗಿ ದೊಡ್ಡ ಕನಸು ಕಂಡಿದ್ದಾರೆ ಸಾಯಿ.

ಇದು ಪೌರಾಣಿಕ ಸಿನಿಮಾ
ಸಿನಿಮಾದ ಮೊದಲ ಪೋಸ್ಟರ್ ನೋಡಿದರೇನೇ ಇದೊಂದು ಪೌರಾಣಿಕ ಸಿನಿಮಾ ಇರಬೇಕು ಎನ್ನುವ ಕುತೂಹಲ ಮೂಡುತ್ತದೆ. ಹೌದು, ಪುನೀತ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ತುಂಬಾನೇ ಪ್ಯಾಶನ್ ಇರುವ ಅವರು ಕಷ್ಟ ಪಟ್ಟು ಈ ಸಿನಿಮಾ ಮಾಡುತ್ತಿದ್ದಾರೆ.

ನಿರ್ಮಾಣ ಯಾರು?
ಈ ಸಿನಿಮಾವನ್ನು ನಿರ್ಮಾಣ ಮಾಡುವುದು ಯಾರು ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ಆದರೆ, ಸಾಯಿ ತಮ್ಮ ಶ್ರೀದೇವಿ ಪಿಕ್ಚರ್ಸ್ರ್ ಬ್ಯಾನರ್ ಮೂಲಕ ಪುನೀತ್ ಗೆ ವಿಶ್ ಮಾಡಿದ್ದಾರೆ. ಟೆಕ್ನಿಕಲಿಯಾಗಿ ಸಾಕಷ್ಟು ಪಳಗಿರುವ ಅವರು ಸರಿಯಾದ ಸಿನಿಮಾವನ್ನು ಶುರು ಮಾಡುತ್ತಿದ್ದಾರೆ. ಪರಿವರ್ತನ್ ಈ ಪೊಸ್ಟರ್ ಡಿಸೈನ್ ಮಾಡಿದ್ದಾರೆ.

ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇದೆ
ಸಿನಿಮಾ ಬಗ್ಗೆ ಆತ್ಮವಿಶ್ವಾಸ ಹೊಂದಿರುವ ಸಾಯಿಕೃಷ್ಣ ದೊಡ್ಡ ಮಟ್ಟದಲ್ಲಿಯೇ ಈ ಸಿನಿಮಾವನ್ನು ಮಾಡಲಿದ್ದಾರಂತೆ. ''ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇವೆ ಅಂತ ಕೆಲ ಸಿನಿಮಾಗಳು ತೋರಿಸಿಕೊಟ್ಟಿದೆ. ಅದೇ ರೀತಿ ಈ ಸಿನಿಮಾ ಕೂಡ ದೊಡ್ಡ ಲೆವೆಲ್ ನಲ್ಲಿ ಮಾಡುವ ಕನಸು ಇದೆ. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ಈ ಸಿನಿಮಾವನ್ನು ಬಹಳ ಇಷ್ಟ ಪಟ್ಟು ಮಾಡುತ್ತಿದ್ದೇನೆ'' ಅಂತಾರೆ ಸಾಯಿಕೃಷ್ಣ

ಯಾವಾಗ ಈ ಸಿನಿಮಾ ಶುರು?
ಸಾಯಿಕೃಷ್ಣ ಪುನೀತ್ ಅವರಿಗೆ ಈ ಸಿನಿಮಾದ ಕಥೆ ಇನ್ನೂ ಹೇಳಿಲ್ಲ. ಆದರೆ, ಅಪ್ಪು ಒಂದು ಪೌರಾಣಿಕ ಸಿನಿಮಾವನ್ನು ಸಾಯಿ ನಿರ್ದೇಶನದಲ್ಲಿ ಮಾಡುವುದು ಪಕ್ಕಾ. ಪುನೀತ್ ಈಗ ಸಾಕಷ್ಟು ಸಿನಿಮಾಗಳನ್ನು ಹೊಂದಿದ್ದು, ಆ ಎಲ್ಲ ಚಿತ್ರಗಳ ಬಳಿಕ ಸರಿಯಾದ ಸಮಯಕ್ಕೆ ಈ ಸಿನಿಮಾ ಪ್ರಾರಂಭ ಆಗಲಿದೆಯಂತೆ.


Click it and Unblock the Notifications











