'ವೃಷಭ' ಚಿತ್ರತಂಡ ಸಂಭಾವನೆ ಕೊಡದೇ ಮೋಸ ಮಾಡಿದ್ರು"; ಕನ್ನಡ ನಟ ಗಂಭೀರ ಆರೋಪ
ನಂದ ಕಿಶೋರ್ ನಿರ್ದೇಶನದಲ್ಲಿ ಮೋಹನ್ ಲಾಲ್ ನಟನೆಯ 'ವೃಷಭ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡಿದ್ದಾರೆ. ಇದೀಗ ನನಗೆ ಸಂಭಾವನೆ ಕೊಡದೇ ಮೋಸ ಮಾಡಿದ್ದಾರೆ ಎಂದು ನಟ ರಾಘವೇಂದ್ರ ಎಸ್. ಹೊಂಡದಕೇರಿ ಆರೋಪಿಸಿದ್ದಾರೆ.
ಸೆಲೆಬ್ರೆಟಿ ಜಿಮ್ ಕೋಚ್ ಕೂಡ ಆಗಿರುವ ರಾಘವೇಂದ್ರ ಕನ್ನಡದಲ್ಲಿ 'ಕ್ರಾಂತಿ', 'ಕಾಟೇರ' ಚಿತ್ರಗಳಲ್ಲಿ ನಟಿಸಿದ್ದಾರೆ. 'ಕಾಂತಾರ- 1' ಚಿತ್ರದಲ್ಲಿ ಕೂಡ ನಟಿಸಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ತೆರೆಗೆ ಬಂದ ಮೇಲೆ ಅದು ಗೊತ್ತಾಗಲಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರಾಘವೇಂದ್ರ ವೀಡಿಯೋ ಮಾಡಿ ಮಾತನಾಡಿದ್ದಾರೆ. ನಾನು ಚಿತ್ರದಲ್ಲಿ ನಟಿಸೋಕೆ ಬಹಳ ಕಷ್ಟಪಟ್ಟೆ. ಐದಾರು ಗಂಟೆ ಮೇಕಪ್ ಹಾಕಿಕೊಳ್ಳಬೇಕಿತ್ತು. ಎಲ್ಲವನ್ನು ಮಾಡಿದೆ. ಆದರೆ ಕೊನೆಗೆ ಸಂಭಾವನೆ ಕೊಡದೇ ಮೋಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಮಗಧೀರ' ರೀತಿ ಎರಡು ಕಾಲಘಟ್ಟಗಳಲ್ಲಿ 'ವೃಷಭ' ಚಿತ್ರದ ಕಥೆ ಸಾಗಲಿದೆ. ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಪೊಗರು' ಹಾಗೂ 'ರಾಣ' ಸಿನಿಮಾಗಳನ್ನು ಮಾಡಿ ಸೋತ ನಂದ ಕಿಶೋರ್ ಇದೀಗ 'ವೃಷಭ' ಚಿತ್ರ ತೆರೆಗೆ ತರುತ್ತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಅಂತೂ ಇಂತೂ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇಂತಹ ಸಮಯದಲ್ಲೇ ಚಿತ್ರದಲ್ಲಿ ಕೆಲಸ ಮಾಡಿದ ಕನ್ನಡ ತಂಡಕ್ಕೆ ಸಂಭಾವನೆ ಸಿಕ್ಕಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ.
"ಒಬ್ಬ ನಟನಾಗಿ ಪ್ರೋತ್ಸಾಹ, ಮೆಚ್ಚುಗೆ ಇಲ್ಲದಿದ್ದರೆ ಬೇಸರವಾಗುತ್ತದೆ. ಒಂದು ಹುಳದ ರೀತಿ ನಿಮ್ಮನ್ನು ನಡೆಸಿಕೊಂಡರೆ ಬೇಸರವಾಗುತ್ತದೆ. ಈ ಮೇಕಪ್ ನೋಡಿ. ಇದು ಅಷ್ಟು ಸುಲಭವಲ್ಲ. ಇದನ್ನು ಹಾಕಿಕೊಳ್ಳಲು 6 ಗಂಟೆ ಸಮಯ ಬೇಕು. ಅದನ್ನು ಬೆಳಗಿನ ಜಾವದವರೆಗೂ ಇಟ್ಟುಕೊಳ್ಳಬೇಕಿತ್ತು. ಆದರೆ ನಾನು ಮಾಡಿದ್ದೆ. ಕೊನೆಗೆ ನನಗೆ ಒಂದು ರೂಪಾಯಿ ಕೂಡ ಕೊಡಲಿಲ್ಲ. ಅದು ಬೇಸರ ತಂದಿದೆ" ಎಂದು ರಾಘವೇಂದ್ರ ಹೇಳಿದ್ದಾರೆ.
ಬಹಳ ದಿನಗಳಿಂದ ಈ ರೀತಿ ವೀಡಿಯೋ ಮಾಡಿ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಮನಸ್ಸು ಬರಲಿಲ್ಲ, ಈಗ ಮಾಡುತ್ತಿದ್ದೇನೆ ಎಂದು ರಾಘವೇಂದ್ರ ಹೇಳಿದ್ದಾರೆ. "ನಾನು ಈ ವೀಡಿಯೋ ಮಾಡಿರುವುದು 'ವೃಷಭ' ಚಿತ್ರದ ಬಗ್ಗೆ. ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. 2 ವರ್ಷಗಳ ಹಿಂದೆ ಕರೆ ಮಾಡಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಇದೆ. ವಿಲನ್ ಪಾತ್ರ ಎಂದರು. ಅದಕ್ಕೆ ನೀವು ಪ್ರಾಸ್ಥೆಟಿಕ್ ಮೇಕಪ್ ಹಾಕಿಕೊಳ್ಳಬೇಕು ಅಂದ್ರು. ಇದೇ ಮೊದಲ ಬಾರಿಗೆ ಭಾರತದಲ್ಲಿ ಮಾಡ್ತಿರೋದು ಅಂದ್ರು. ಎಲ್ಲದ್ದಕ್ಕೂ ಒಪ್ಪಿದೆ. ಮೇಕಪ್ ಟೆಸ್ಟ್ ಆಯ್ತು. ಬಳಿಕ 15 ದಿನಗಳ ಕಾಲ ಚಿತ್ರೀಕರಣ ಮಾಡಿದ್ರು. ಕಾರಣಾಂತರಗಳಿಂದ ಸಿನಿಮಾ ನಿಂತಿತ್ತು" ಎಂದು ನೆನಪಿಸಿಕೊಂಡಿದ್ದಾರೆ.
'ವೃಷಭ' ಚಿತ್ರದ ಪ್ರೊಡಕ್ಷನ್ ಚೇಂಜ್ ಆಯ್ತು. ಬಳಿಕ ಮತ್ತೆ ಸಿನಿಮಾ ಶುರುವಾದಾಗ ಫೋನ್ ಮಾಡಿ 3 ದಿನಗಳ ಕಾಲ್‌ಶೀಟ್ ಕೇಳಿದ್ರು. "ನಾನು ನನ್ನ ಸಂಭಾವನೆ ಕೊಟ್ಟರೆ ಬರ್ತೀನಿ ಅಂದೆ. ಅದಕ್ಕೆ ಅವ್ರು ಒಪ್ಪಲಿಲ್ಲ. ಹಳೇ ಪ್ರೊಡಕ್ಷನ್‌ಗೂ ನಮಗೂ ಸಂಬಂಧ ಇಲ್ಲ. 30 ಸಾವಿರ ರೂ. ಕೊಡ್ತೀವಿ ಬಂದು ಮಾಡಿ ಅಂದ್ರು. ನಾನು ಒಪ್ಪದೇ ಇದ್ದಾಗ ಇದು ಪ್ರಾಸ್ಥೆಟಿಕ್ ಮೇಕಪ್, ನೀವು ಇಲ್ಲದಿದ್ದರೆ ಬೇರೆಯವರಿಂದ ಮಾಡಿಸುತ್ತೇವೆ ಅಂದ್ರು. ನನಗೆ ಸ್ವಾಭಿಮಾನ. ನಾನು ಮಾಡಲ್ಲ ಎಂದುಬಿಟ್ಟೆ. ಆದರೆ ಇವತ್ತಿಗೂ ನನ್ನ ಹಣ ಬಂದಿಲ್ಲ. 5 ಲಕ್ಷ ರೂ. ಕೊಡಬೇಕಿತ್ತು. ಕೊಡಲಿಲ್ಲ. ಕೇರಳ, ಹೈದರಾಬಾದ್ ತಂಡದವರಿಗೆ ಸಂಭಾವನೆ ಸಿಕ್ಕಿದೆ. ಬೆಂಗಳೂರು ತಂಡಕ್ಕೆ ಸಿಕ್ಕಿಲ್ಲ, ಕಾರಣ ಯಾರೊಬ್ಬರು ಧೈರ್ಯ ಮಾಡಿ ಮಾತನಾಡಲಿಲ್ಲ ಎಂದು ನಟ ರಾಘವೇಂದ್ರ ವಿವರಿಸಿದ್ದಾರೆ.


Click it and Unblock the Notifications











