ಸ್ಲಂ ಬಾಯ್ ಆಗಿ 'ರೂಪಾಂತರ'ಗೊಂಡ ರಾಜ್ ಬಿ ಶೆಟ್ಟಿ; ಏನಿದು ಕಥೆ?
ಸ್ಯಾಂಡಲ್‌ವುಡ್‌ನ ನಟನಾಗಿ ಹಾಗೂ ನಿರ್ದೇಶಕರಾಗಿ ಕಮಾಲ್ ಮಾಡುತ್ತಿರುವ ರಾಜ್ ಬಿ ಶೆಟ್ಟಿ ಈಗ ತಮ್ಮ ಹೊಸ ಚಿತ್ರವೊಂದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯ ಲೈಟರ್ ಬುದ್ಧ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ನಿನ್ನೆಯಷ್ಟೇ ತಮ್ಮ ಇನ್ಸ್ಟಾಗ್ರಾಂ ಖಾತೆಯ ಲೈವ್‌ನಲ್ಲಿ ಹೊಸ ಸಿನೆಮಾದ ಬಗ್ಗೆ ರಾಜ್ ಸುಳಿವು ಕೊಟ್ಟಿದ್ದರು. ಇಂದು ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಹೊಸ ಸಿನಿಮಾದ ಬಗ್ಗೆ ಶೆಟ್ರು ಅಪ್‌ಡೇಟ್ ಕೊಟ್ಟಿದ್ದಾರೆ.
ವಿಶೇಷ ಏನಪ್ಪಾ ಅಂದರೆ, ರಾಜ್ ಚೊಚ್ಚಲ ನಿರ್ದೇಶನದ ಚಿತ್ರ 'ಒಂದು ಮೊಟ್ಟೆಯ ಕಥೆ' ಹಾಗೂ 'ಗರುಡ ಗಮನ ವೃಷಭ ವಾಹನ' ಚಿತ್ರತಂಡವು ಮತ್ತೆ ಈ ಸಿನಿಮಾದಲ್ಲಿ ಒಗ್ಗೂಡಿದ್ದಾರೆ. ಇನ್ನು ವಿಶಿಷ್ಟವಾದ ಟೈಟಲ್‌ನಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದ್ದು, ಈ ಚಿತ್ರಕ್ಕೆ 'ರೂಪಾಂತರ' ಎಂದು ಹೆಸರಿಡಲಾಗಿದೆ. 'ಮೆಟಮಾರ್ಫಸಿಸ್' ಅಂದರೆ ರೂಪಾಂತರಕ್ಕೆ ಸಂಬಂಧಿಸಿದ ಪರಿಕಲ್ಪನೆಯಲ್ಲಿ ಸಿನಿಮಾವು ವಿಭಿನ್ನವಾಗಿ ಮೂಡಿಬರಲಿದೆ ಎಂದು ಚಿತ್ರತಂಡವು ಮಾಹಿತಿ ನೀಡಿದೆ.

ಇತ್ತೀಚೆಗಷ್ಟೇ ಮಾಲಿವುಡ್‌ನ ಮೆಗಾಸ್ಟಾರ್ ಮಮ್ಮುಟ್ಟಿ ಜೊತೆ 'ಟರ್ಬೋ' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ನೆಗೆಟಿವ್ ಪಾತ್ರದಲ್ಲಿ ವಿಶೇಷವಾಗಿ ಮಿಂಚಿದ್ದ ಶೆಟ್ರು ಈ ಚಿತ್ರದಲ್ಲೂ ಸ್ಲಂ ಹಿನ್ನಲೆಯಿಂದ ಬಂದ ಗೂಂಡಾ ಪಾತ್ರದಲ್ಲಿ ಮಿಂಚಲಿದ್ದಾರೆ. 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲೂ ಗೂಂಡಾ ಆಗಿ ರಗಡ್ ಲುಕ್‌ನಲ್ಲಿ ರಾಜ್ ಕಾಣಿಸಿಕೊಂಡಿದ್ದರು.
ಮಿಥಿಲೇಶ್ ಎಡವಲತ್ತ್ 'ರೂಪಾಂತರ' ಸಿನಿಮಾದ ಕತೆ ಬರೆದಿದ್ದು, ಅವರೇ ಸಿನೆಮಾದ ನಿರ್ದೇಶನವನ್ನೂ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸುಹಾನ್ ಪ್ರಸಾದ್, ಪಾರ್ಥ್ ಜಾನಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶಬರೀಶ್ ಕಬ್ಬಿನಾಲೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಈ ಚಿತ್ರಕ್ಕಿದೆ. 'ರೂಪಾಂತರ' ಸಿನಿಮಾದ ಪೋಸ್ಟರ್‌ನಲ್ಲೇ ಟೈಟಲ್ ರಿವೀಲ್ ಆಗಿದ್ದು ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ನಟಿ ಶ್ವೇತಾ ಶ್ರೀನಿವಾಸ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಜೈಶಂಕರ್, ಭರತ್ ಜಿಬಿ, ಮುರುಳೀಧರ ಸಿಕೆ, ಸೋಮಣ್ಣ ಬೋಲೆಗಾಂವ್, ಲೇಖಾ, ಹನುಮಕ್ಕ, ಅಂಜನ್ ಭಾರದ್ವಾಜ್ ಮತ್ತಿತರು ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಹಾಗೂ ತಾಂತ್ರಿಕ ಕಾರ್ಯಗಳು ಮುಗಿದಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ವಿಭಿನ್ನ ಕಥೆ, ಅಭಿನಯದ ಮೂಲಕ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ರಾಜ್ ಬಿ ಶೆಟ್ಟಿ 'ರೂಪಾಂತರ' ಚಿತ್ರದಲ್ಲಿ ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











