ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ಬಿಡುಗಡೆ ಬಳಿಕ ರಕ್ಷಿತ್ ಶೆಟ್ಟಿ ಹೊಸ ನಿರ್ಧಾರ ಪ್ರಕಟ
ಗುರುವಾರ (ಆಗಸ್ಟ್ 17) ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ರಕ್ಷಿತ್ ಶೆಟ್ಟಿ ತಮ್ಮ ನಟನಾವೃತಿ ಬಗ್ಗೆ ಮುಖ್ಯವಾದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಮೊದಲಿನಿಂದಲೂ ಸಿನಿಮಾ ನಿರ್ದೇಶನದತ್ತಲೇ ಒಲವು ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಬಿಡುಗಡೆ ಹೊಸ್ತಿಲಲ್ಲಿ ಈ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಹೆಚ್ಚು ಸಿನಿಮಾಗಳಲ್ಲಿ ತಾವು ಕಾಣಿಸಿಕೊಳ್ಳುವುದಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ತಮ್ಮ ಉಳಿದವರು ಕಂಡಂತೆ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. "ಉಳಿದವರು ಕಂಡಂತೆ" ಸಿನಿಮಾ ಮಾಡುವಾಗ, ನಿರ್ದೇಶಕರಿಗೆ ತಮ್ಮ ಕಲ್ಪನೆಗೆ ತಕ್ಕಂತೆ ಸಿನಿಮಾ ಮಾಡುವ ಅವಕಾಶ ಸೃಷ್ಟಿಯಾಗಬೇಕು. ಅಂತಹ ವೇದಿಕೆ ಸೃಷ್ಟಿಯಾಗಬೇಕು ಎಂದುಕೊಂಡಿದ್ದೆ. ಈಗ ಪರಂವಃ ಮೂಲಕ ಒಂದು ಉತ್ತಮ ವೇದಿಕೆ ಸಿಕ್ಕಿದೆ ಎಂದಿದ್ದಾರೆ.
ಚಾರ್ಲಿ 777 ಸಿನಿಮಾ ನಂತರ ನಟನೆ ಮಾಡುವುದನ್ನು ಕಡಿಮೆ ಮಾಡಬೇಕು ಎಂಬ ಆಸೆಯಿತ್ತು. ಈಗ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನಿನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡುತ್ತೇನೆ. ನನ್ನ ಸಿನಿಮಾಗಳಲ್ಲಿ ನಟಿಸುತ್ತೇನೆ, ಆದರೆ, ನಿರ್ದೇಶಕ ಹೇಮಂತ್ ರಾವ್ ಯಾವುದೇ ಸಿನಿಮಾದ ಯಾವುದೇ ಪಾತ್ರಕ್ಕೆ ಕರೆದರೂ ಹೋಗಿ ನಟಿಸುತ್ತೇನೆ. ಏಕೆಂದರೆ ಅವರು ನನ್ನಷ್ಟೇ ಸಿನಿಮಾವನ್ನು ಪ್ರೀತಿಸುತ್ತಾರೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಅವನೇ ಶ್ರೀಮನ್ನಾರಾಯಣ, ವಾಸ್ತು ಪ್ರಕಾರ, ಗೋಧಿ ಬನ್ಣ ಸಾಧಾರಾಣ ಮೈಕಟ್ಟು, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿರುವ ಅವರು ಚಾರ್ಲಿ 777 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಈಗ ನಟನೆಯನ್ನು ಕಡಿಮೆ ಮಾಡುವ ಬಗ್ಗೆ ನಿರ್ಧಾರ ತಿಳಿಸಿದ್ದಾರೆ. ಸದ್ಯಕ್ಕೆ ರಿಚರ್ಡ್ ಆಂಟೋನಿ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.
ಈಗ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹೇಮಂತ್ ಎಂ ರಾವ್ ನಿರ್ದೇಶನದ ಚಲನಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಎರಡು ಭಾಗಗಳ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮನು ಎಂಬ ಪಾತ್ರವನ್ನು, ನಾಯಕಿ ರುಕ್ಮಿಣಿ ವಸಂತ್ ಪ್ರಿಯಾ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 3:14 ನಿಮಿಷದ ಟ್ರೈಲರ್‌ನಲ್ಲಿ ಮನು ಮತ್ತು ಪ್ರಿಯಾಳ ಪ್ರಪಂಚವನ್ನು ಒಂದು ಸುತ್ತು ಹಾಕಬಹುದು. ಇಬ್ಬರ ಉತ್ಕಟ ಪ್ರೇಮ, ಪ್ರಣಯ, ಕೊಲೆ, ಜೈಲು, ಹೋರಾಟ ಕಾಣಿಸುತ್ತದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ಚರಣ್ ರಾಜ್ ಸಂಗೀತವಿದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 1 ರಂದು, ಎರಡನೇ ಭಾಗ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಚೈತ್ರ ಜೆ ಆಚಾರ್ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











