ನವದೆಹಲಿ 'ಬೆಳ್ಳಿಹೆಜ್ಜೆ'ಯಲ್ಲಿ ರಮೇಶ್ ಅರವಿಂದ್
'ಬೆಳ್ಳೆಹೆಜ್ಜೆ'ಯ ಬಹುತೇಕ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆದಿವೆ. ಅದುಬಿಟ್ಟರೆ ಮೈಸೂರು, ತುಮಕೂರಿನಲ್ಲಿ ಆಯೋಜಿಸಲಾಗಿತ್ತು. ಈಗ ಇದೇ ಮೊದಲ ಬಾರಿಗೆ ನವದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಟ ಕಮಲ್ ಹಾಸನ್ ಅವರಿಗೂ ರಮೇಶ್ ಅರವಿಂದ್ ಅವರಿಗೂ ಬಹುತೇಕ ಹೋಲಿಕೆಗಳಿದ್ದರೂ ಅವರನ್ನು ಯಾರಿಗೂ ಹೋಲಿಕೆ ಮಾಡುವುದು ಅಷ್ಟು ಸಮಂಜಸವಲ್ಲ. ಅವರಿಗೆ ಅವರೇ ಸಾಟಿ. ಕನ್ನಡ ಚಿತ್ರರಂಗದ ಜೆಂಟಲ್ ಮನ್ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಇದುವರೆಗೂ 145ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ನಿರ್ದೇಶನಕ್ಕೂ ಕೈಹಾಕಿ ಅಲ್ಲೂ ಗೆಲುವು ಸಾಧಿಸಿದರು. ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ನಮ್ಮಣ್ಣ ಡಾನ್ ಚಿತ್ರಗಳನ್ನು ನಿರ್ದೇಶಿಸಿ ಹೊಸ ಭರವಸೆ ಮೂಡಿಸಿದ್ದಾರೆ.
ನವದೆಹಲಿಯ ಕರ್ನಾಟಕ ಸಂಘದಲ್ಲಿ ನ.17ರಂದು ರಮೇಶ್ ಅವರ ಚಲನಚಿತ್ರಗಳ ಪ್ರದರ್ಶನ ಸಂಜೆ 3ರ ತನಕ ನಡೆಯಲಿದೆ. ಬಳಿಕ ಸಂಜೆ 5ಕ್ಕೆ ಛಾಯಾಚಿತ್ರ ಪ್ರದರ್ಶನ. ಅದಾದ ಬಳಿಕ ಬಿಸಿಬಿಸಿ ಚಹದೊಡನೆ ರಮೇಶ್ ಅರವಿಂದ್ ಅವರೊಂದಿಗೆ ಮಾತುಕತೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ ಅವರೀಗ ಗರ್ಭಿಣಿ. ಕಾರ್ಯಕ್ರಮದ ಸಲುವಾಗಿ ಅವರು ದೆಹಲಿವರೆಗೂ ಪ್ರಯಾಣಿಸುತ್ತಾರೋ ಇಲ್ಲವೋ? ಆದರೆ ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗ್ಡೆ ಉಪಸ್ಥಿತರಿರುತ್ತಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












