Subrahmanyaa: ಮಗನ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು 20 ವರ್ಷದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಆರ್ಮುಗ ರವಿಶಂಕರ್
ಕನ್ನಡ ಸಿನಿಮಾ ರಂಗದಲ್ಲಿ ನಟ ಸಾಯಿ ಕುಮಾರ್, ಪಿ ರವಿಶಂಕರ್ ಮತ್ತು ಅಯ್ಯಪ್ಪ ಶರ್ಮಾ ಚಿರಪರಿಚಿತ ಹೆಸರುಗಳು. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿರುವ ಈ ಸಹೋದರರನ್ನು ಮರೆಯಲು ಸಾಧ್ಯವೆ?. ಈಗ ಇದೇ ಕುಟುಂಬದ ಕುಡಿಯೊಂದು ಚಿತ್ರರಂಗಕ್ಕೆ ಕಾಲಿಡುತ್ತಿದೆ.
ಕನ್ನಡ ಸಿನಿಮಾರಂಗದಲ್ಲಿ ಆರ್ಮುಗ ಎಂದೇ ಪ್ರಖ್ಯಾತಿ ಪಡೆದ ನಟ ರವಿ ಶಂಕರ್ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್ಮುಗ ರವಿಶಂಕರ್ ನಟನೆ ಜೊತೆಗೆ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡವರು.

ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದ ಅವರು, ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ನಟನೆಯ 'ಕೆಂಪೇಗೌಡ' ಸಿನಿಮಾದಲ್ಲಿ ಆಮುರ್ಗಂ ಪಾತ್ರದ ಮೂಲಕ ಮನೆ ಮನಗಳಲ್ಲಿ ಆರ್ಭಟಿಸಿದ ನಟ ಮತ್ತೆ ಹಿಂತಿರುಗಿ ನೋಡಿಲ್ಲ. ಈಗ ಹೆಚ್ಚು ಬ್ಯುಸಿ ಇರುವ ನಟರ ಸಾಲಿನಲ್ಲಿ ರವಿ ಶಂಕರ್ ಹೆಸರು ಹೆಚ್ಚು ಕೇಳಿಬರುತ್ತದೆ.
20 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ನಟ ರವಿ ಶಂಕರ್
ಸೌತ್ ಸಿನಿರಂಗದಲ್ಲಿ ಖ್ಯಾತಿ ಪಡೆದಿರುವ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ನಟಿ ಮಾಲಾಶ್ರೀ ಅಭಿನಯದ ದುರ್ಗಿ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ಇದಾದ ನಂತರ ಅವರು ನಿರ್ದೇಶನದತ್ತ ಮುಖ ಮಾಡಿರಲಿಲ್ಲ. ಈಗ 20 ವರ್ಷಗಳ ನಂತರ ತಮ್ಮ ಮಗನ ಸಿನಿಮಾಗಾಗಿ ಡೈರೆಕ್ಷರ್ ಕ್ಯಾಪ್ ತೊಡಲಿದ್ದಾರೆ.

ಆರ್ಮುಗ ರವಿಶಂಕರ್ ಅವರು ತಮ್ಮ ಮಗ ಅಧ್ವಯ್ ಶಂಕರ್ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದು, ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸಿದ್ದಾರೆ. ತಾತನಂತೆ, ಅಪ್ಪ, ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅಧ್ವಯ್ ತಯಾರಾಗಿದ್ದಾರೆ. ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳಲಿದ್ದಾರೆ.
ಅಧ್ವಯ್ ಶಂಕರ್ ಮೊದಲ ಸಿನಿಮಾ ಸುಬ್ರಹ್ಮಣ್ಯ
ದಸರಾ ಹಬ್ಬದ ಶುಭ ವೇಳೆಯಲ್ಲಿ ಅಧ್ವಯ್ ಶಂಕರ್ ಅವರ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಸುಬ್ರಹ್ಮಣ್ಯ ಎಂಬ ಶೀರ್ಷಿಕೆ ಇಡಲಾಗಿದೆ. ಪೋಸ್ಟರ್‌ನಲ್ಲಿ ದೈವಿಕ ಅಂಶಗಳು ಹೈಲೆಟ್ ಆಗಿವೆ. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಅವರ ವಾಹನ ನವಿಲನ್ನು ತೋರಿಸಲಾಗಿದೆ. ನಾಯಕ ಅಧ್ವಯ್ ಒಂದು ಕೈಯಲ್ಲಿ ಜ್ವಾಲೆ ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಹಿಡಿದುಕೊಂಡು ಗೂಢಾಚಾರಿಯ ಲುಕ್ ಕೊಟ್ಟಿದ್ದಾರೆ.
ಸುಬ್ರಹ್ಮಣ್ಯ ಸಿನಿಮಾಗೆ ಕೆಜಿಎಫ್, ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆಯಿದ್ದು, ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಕ್ಯಾಮೆರಾ ಹಿಡಿದಿದ್ದಾರೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ.


Click it and Unblock the Notifications











