ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಹುಟ್ಟು ಹಬ್ಬದ ಸಂಭ್ರಮ, 60 ದಾಟಿದ ರವಿಮಾಮ!
ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಇಂದು ಮೇ(30) ವಿಶೇಷವಾದ ದಿನ. ಯಾಕೆಂದರೆ ನಟ ರವಿಚಂದ್ರನ್ ಅವರ ಹುಟ್ಟುಹಬ್ಬ. ಸ್ಟಾರ್ ನಟರ ಹುಟ್ಟುಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ಹಬ್ಬದ ದಿನ. ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಾರೆ. ಆದರೆ ಕೊರೊನಾ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಇದು ಸಾಧ್ಯವಾಗಿಲ್ಲ. ಈಗ ಮತ್ತೆ ಈ ಖುಷಿ ಮರುಕಳಿಸಿದೆ.
ರವಿಚಂದ್ರನ್ ಕೂಡ ಪ್ರತಿ ಬಾರಿ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೊರೊನಾದಿಂದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ರವಿಮಾಮ ತಮ್ಮ ಅಭಿಮಾನಿ ಬಳಗದ ಜೊತೆಗೆ ಬರ್ತ್ ಡೇ ಕೇಕ್ ಕತ್ತರಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಜೊತೆಗೆ ಕಿರುತೆರೆ ಕಾರ್ಯಕ್ರಮ ಮೂಲಕವೂ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ರವಿಚಂದ್ರನ್.
1982ರಲ್ಲಿ ಹೀರೋ ಆಗಿ ಸಿನಿಮಾ ರಂಗಕ್ಕೆ ಬಂದ ರವಿಚಂದ್ರನ್, ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದಾರೆ.

ಕ್ರೇಜಿಸ್ಟಾರ್ 61ನೇ ಹುಟ್ಟುಹಬ್ಬ!
ನಟ ರವಿಚಂದ್ರನ್ ಅವರ 61ನೇ ವರ್ಷದ ಹುಟ್ಟು ಹಬ್ಬ ಇದು. ರವಿಮಾಮ ಕೇವಲ ನಾಯಕ ನಟನಾಗಿ ಮಾತ್ರ ಅಲ್ಲ. ಸಿನಿಮಾರಂಗದಲ್ಲಿ ನಟನೆಯ ಜೊತೆಗೆ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ರವಿಚಂದ್ರನ್ ನಾಯಕ ನಟನಾಗಿ ಹೇಗೆ ಜನಮನ ಗೆದ್ದಿದ್ದಾರೋ, ಹಾಗೆ ಉತ್ತಮ ನಿರ್ದೇಶಕನಾಗಿಯೂ ಜನರ ಮನಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಂದಿಗೂ ಅವರ ನಿರ್ದೇಶನಕ್ಕೆ ಅಷ್ಟೇ ಬೇಡಿಕೆ ಇದೆ. ಅವರ 61ನೇ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

ದಾಖಲೆಗಳ ಸರದಾರ ರವಿಮಾಮ!
ಇನ್ನು ನಟ ರವಿಚಂದ್ರನ್ ಸಿನಿಮಾಗಳ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ರವಿಚಂದ್ರನ್ ಸಿನಿಮಾ ಅಂದರೇನೆ ಬೇರೆ. ಅವರು ಸಿನಿಮಾ ಮಾಡುವ ಸ್ಟೈಲೇ ಬೇರೆ. ಹಾಗಾಗಿ ಸಾಕಷ್ಟು ಪ್ರಥಮ ದಾಖಲೆಗಳಿಗೆ ರವಿಚಂದ್ರನ್ ಒಡೆಯ. 'ಪ್ರೇಮ ಲೋಕ'ದಂತಹ ಮ್ಯೂಸಿಕಲ್ ಲವ್ ಸ್ಟೋರಿಯಿಂದ ಹಿಡಿದು, 'ಶಾಂತಿ ಕ್ರಾಂತಿ'ಯಂತಹ ಪ್ರಯೋಗ ಕೂಡ ಮಾಡಿದ್ದಾರೆ.

ಬ್ರೇಕ್ ಬಳಿಕ ರವಿಚಂದ್ರನ್ ಕಮ್ ಬ್ಯಾಕ್!
ನಟ ರವಿಚಂದ್ರನ್ ಸಿನಿಮಾ ರಂಗದಲ್ಲಿ ಸದಾ ಸಕ್ರಿಯ. ಆದರೆ ನಡುವೆ ಕೆಲವು ವರ್ಷ ರವಿಚಂದ್ರನ್ ಸಿನಿಮಾಗಳು ಬರಲಿಲ್ಲ. ಆದರೆ ಮತ್ತೆ ತಮ್ಮ ಪಯಣ ಆರಂಭಿಸಿದ ರವಿಮಾಮ, ಎರಡನೇ ಇನ್ನಿಂಗ್ಸ್ ನಲ್ಲಿ ಮಿಂಚುತ್ತಿದ್ದಾರೆ. 'ಮಾಣಿಕ್ಯ', 'ದೃಶ್ಯ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮತ್ತೆ ಸೈ ಎನಿಸಿಕೊಂಡಿದ್ದಾರೆ ಕ್ರೇಜಿಸ್ಟಾರ್.
Recommended Video


ಸಿನಿಮಾ, ಕಿರುತೆರೆಯಲ್ಲಿ ಕ್ರೇಜಿ ಸ್ಟಾರ್ ಬ್ಯುಸಿ!
ಸದ್ಯ ಕ್ರೇಜಿ ಸ್ಟಾರ್ ಹಲವು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. 'ದೃಶ್ಯ2' ಸಕ್ಸಸ್ ಬಳಿಕ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರವಿಚಂದ್ರನ್ ಸಿನಿಮಾ ಪಯಣ ಹೀಗೆ ಯಶಸ್ವಿಯಾಗಿ ಮುಂದುವರೆಯಲಿ ಎಂದು ಆಶಿಸೋಣ. ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.


Click it and Unblock the Notifications











