ಡಾಕ್ಟರೇಟ್ ಪಡೆದ ರವಿಚಂದ್ರನ್: ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್
ನಟ ರವಿಚಂದ್ರನ್ ರಿಗೆ ಗೌರವ ಡಾಕ್ಟರೇಟ್ ಘೋಷಣೆ ಆಗಿದ್ದು, ನಿನ್ನೆ (ನವೆಂಬರ್ 3) ಅದನ್ನು ಪ್ರಧಾನ ಮಾಡಲಾಯಿತು. ಬೆಂಗಳೂರಿನ ಸಿ ಎಂ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿತು.
ಬೆಂಗಳೂರಿನ ಕುಂದಲಹಳ್ಳಿಯ ಸಿ ಎಂ ಆರ್ ಕಾಲೇಜಿನ ಆವರಣದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ರವಿಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್, ಕಾಲೇಜಿನ ವಿದ್ಯಾರ್ಥಿಗಳು ಈ ಸಂಭ್ರಮದ ಕ್ಷಣದಲ್ಲಿ ಭಾಗಿಯಾಗಿದ್ದರು. ರವಿಚಂದ್ರನ್ ಕಂಡು ವಿದ್ಯಾರ್ಥಿಗಳು ಖುಷಿಯಾದರು.
ಡಾಕ್ಟರೇಟ್ ಪಡೆದ ಸಂತಸದಲ್ಲಿ ಮಾತನಾಡಿದ ರವಿಚಂದ್ರನ್, ತಮ್ಮನ್ನು ಗುರುತಿಸಿ ಡಾಕ್ಟರೇಟ್ ನೀಡಿದ ಸಿ ಎಂ ಆರ್ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದ ಹೇಳಿದರು. ''ಇನ್ನು ಮುಂದೆ ಹೊಸ ದಾರಿಯಲ್ಲಿ ಸಾಗುತ್ತೇನೆ, ಹಳೆ ದಾರಿಯನ್ನು ಸರಿ ಮಾಡಿಕೊಳ್ಳುವ ಹಾಗೆ ನಡೆಯುತ್ತೇನೆ'' ಎಂದರು.

ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಪತ್ನಿ ಸುಮತಿ, ಮಕ್ಕಳಾದ ಮನೋರಂಜನ್, ವಿಕ್ರಂ, ಗೀತಾಂಜಲಿ ಹಾಗೂ ಅಳಿಯ ಅಜಯ್ ರವಿಚಂದ್ರನ್ ಜೊತೆಗೆ ಇದ್ದರು.
ಅಂದಹಾಗೆ, ನಿರ್ಮಾಪಕ ವೀರಾಸ್ವಾಮಿ ಪುತ್ರ ರವಿಚಂದ್ರನ್ 1971ರಲ್ಲಿ ಬಾಲನಟನಾಗಿ 'ಕುಲ ಗೌರವ' ಸಿನಿಮಾದಲ್ಲಿ ನಟಿಸಿದರು. ನಂತರ 1982ರಲ್ಲಿ 'ಕದೀಮ ಕಳ್ಳರು' ಸಿನಿಮಾದ ನಿರ್ಮಾಣ ಮಾಡಿ ಒಂದು ಪಾತ್ರವನ್ನು ನಿರ್ವಹಿಸಿದರು. 'ಪ್ರೇಮಲೋಕ' ಚಿತ್ರದ ಮೂಲಕ ನಿರ್ದೇಶನ ಶುರು ಮಾಡಿ, ದೊಡ್ಡ ಹಿಟ್ ನೀಡಿದರು. ಅಲ್ಲಿಂದ ಶುರುವಾದ ರವಿಚಂದ್ರನ್ ಪ್ರಯಾಣ ಇಂದಿಗೂ ಮುಂದುವರೆದಿದೆ.
ನಟ, ನಿರ್ದೇಶಕ, ನಿರ್ಮಾಪಕ, ಗೀತಾರಚನೆಗಾರ, ಸಂಗೀತ ನಿರ್ದೇಶಕ, ಸಂಭಾಷಣೆಕಾರನಾಗಿ ರವಿಚಂದ್ರನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ಯ 'ಆ ದೃಶ್ಯ', 'ರಾಜೇಂದ್ರ ಪೊನ್ನಪ್ಪ', 'ರವಿ ಬೊಪ್ಪಣ್ಣ' ಸಿನಿಮಾಗಳಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.


Click it and Unblock the Notifications











