ಗೋವಾದಿಂದ ಬರುತ್ತಿದ್ದ ನಟ ರಿಷಬ್ ಶೆಟ್ಟಿ ಕಾರು ತಪಾಸಣೆ ನಡೆಸಿದ ಪೊಲೀಸರು!
ನಟ, ನಿರ್ದೇಶಕ ರಿಷಬ್ ಶೆಟ್ಟಿ ಗೋವಾದಲ್ಲಿ ಪ್ರತಿಷ್ಠಿತ IFFI ಪ್ರಶಸ್ತಿ ಪಡೆದಿದ್ದಾರೆ. ಇದೇ ಖುಷಿಯಲ್ಲಿ ರಾಜ್ಯಕ್ಕೆ ಬರುತ್ತಿದ್ದ ಅವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಗೋವಾದಿಂದ ಬರುತ್ತಿದ್ದ ಅವರ ಕಾರನ್ನು ಕಾರವಾರದ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ತಡೆಯಲಾಗಿದೆ.
ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ನಟ ರಿಷಬ್ ಶೆಟ್ಟಿ ಅವರ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ನಿಯಮದಂತೆ ಗೋವಾದಿಂದ ರಾಜ್ಯಕ್ಕೆ ಬರುವ ಪ್ರತಿ ವಾಹನವನ್ನು ತಡೆದು ಪರಿಶೀಲನೆ ನಡೆಸಲಾಗುತ್ತದೆ. ಇದೇ ರೀತಿ ಅವರ ಕಾರನ್ನು ತಡೆದು ತಪಾಸಣೆ ನಡೆಸಲಾಗಿದೆ.

ಗೋವಾ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಸಿನಿಮಾಗಾಗಿ ಪ್ರಶಸ್ತಿ ದೊರೆತಿದೆ. 'ಕಾಂತಾರ' ಸಿನಿಮಾಗಾಗಿ ರಿಷಬ್ ಶೆಟ್ಟಿ ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪಡೆದು ಕುಂದಾಪುರಕ್ಕೆ ಕಾರಾವಾರ ಮಾರ್ಗವಾಗಿ ವಾಪಸ್ ಬರುತ್ತಿದ್ದರು. ಈ ವೇಳೆ ಅಬಕಾರಿ ಇಲಾಖೆ ಸಿಬ್ಬಂದಿ ಕಾರು ತಡೆದಿದ್ದಾರೆ.
ಕಾರು ತಪಾಸಣೆ ತಡೆದು ಒಳಗಿರುವವರು ರಿಷಬ್ ಶೆಟ್ಟಿ ಎಂದು ತಿಳಿದು ಪೊಲೀಸರು ಕೂಡ ಖುಷಿ ಪಟ್ಟಿದ್ದಾರೆ. ಕಾರಿನಿಂದ ಇಳಿದ ರಿಷಬ್ ಶೆಟ್ಟಿ ಸಿಬ್ಬಂದಿಯನ್ನು ಮಾತನಾಡಿಸಿದ್ದಾರೆ. ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಕಾಂತಾರ ಅಬ್ಬರದ ಬಳಿಕ ಮತ್ತೆ ಕಾಂತಾರ ಪ್ರೀಕ್ವೆಲ್ ಅಬ್ಬರ ಆರಂಭ
ರಿಷಬ್ ಶೆಟ್ಟಿ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿರುವ 'ಕಾಂತಾರ' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಗೋವಾ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದೆ. ಕಾಂತಾರ' ಚಿತ್ರದಲ್ಲಿನ ತಮ್ಮ ನಿರ್ದೇಶನ ಹಾಗೂ ನಟನೆಗಾಗಿ ರಿಷಬ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದರ ಜೊತೆಗೆ ಕಾಂತಾರ ಸಿನಿಮಾದ ಪ್ರೀಕ್ವೆಲ್ ಟೀಸರ್ ರಿಲೀಸ್ ಮಾಡಿ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಈ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಟ್ರೆಂಡ್ ಸೃಷ್ಟಿಸಿದೆ.

ಶಂಕರ್ ನಾಗ್ ಅವರಿಗೆ ಪ್ರಶಸ್ತಿ ಅರ್ಪಣೆ
ಇನ್ನು, ವಿಶೇಷ ಜ್ಯೂರಿ ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ನಟ, ನಿರ್ದೇಶಕ ಶಂಕರ್ ನಾಗ್ ಅವರಿಗೆ ರಿಷಬ್ ಶೆಟ್ಟಿ ಅರ್ಪಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.
"ಇಂದು, 54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದ್ದು, ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ. 1979 ರಲ್ಲಿ ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಸರ್ ಅವರಿಗೆ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿದ್ದು, ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ" ಎಂದಿದ್ದಾರೆ.
"ಕಾಂತಾರ ಚಿತ್ರವನ್ನು ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ಕಾಂತಾರ ಅಧ್ಯಾಯ 1 ಚಿತ್ರಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ, ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ" ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.


Click it and Unblock the Notifications











