ಕಾಟೇರ ಸಕ್ಸಸ್ ಬೆನ್ನಲ್ಲೇ ಮತ್ತೊಮ್ಮೆ 'ಕರಿಯ' ರಿಲೀಸ್‌ಗೆ ಸಿದ್ಧತೆ: ಪ್ಲಾನ್ ಹೇಗಿದೆ ಗೊತ್ತಾ?
ಸದ್ಯಕ್ಕೆ ಕರ್ನಾಟಕದಲ್ಲಿ ಕಾಟೇರನ ಹವಾ ಜೋರಾಗಿಯೇ ಇದೆ. ಪಕ್ಕದ ರಾಜ್ಯ, ವಿದೇಶಗಳಲ್ಲಿಯೂ ಕೂಡ ಕಾಟೇರ ಭರ್ಜರಿ ಸದ್ದು ಮಾಡುತ್ತಿದ್ದಾನೆ. ಡಿ ಬಾಸ್ ಫ್ಯಾನ್ಸ್ ಸಕತ್ ಖುಷಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಸೂಪರ್ ಹಿಟ್ ಸಿನಿಮಾವೊಂದು ಮತ್ತೆ ರಿಲೀಸ್ ಆಗಲು ಸಿದ್ಧವಾಗಿದೆ.
ನಿರ್ಮಾಪಕರಾಗಿದ್ದ ಆನೇಕಲ್ ಬಾಲರಾಜ್ ಬಂಡವಾಳ ಹೂಡಿ, ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ಕರಿಯ'. ಈ ಸಿನಿಮಾ ದರ್ಶನ್ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಚಿತ್ರ ಎಂದರೆ ತಪ್ಪಲ್ಲ. ಪ್ರೇಮ್ ಮತ್ತು ದರ್ಶನ್ ಇಬ್ಬರಿಗೂ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ 'ಕರಿಯ' ಸೂಪರ್ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಯಾಗಿ ಇಪ್ಪತ್ತು ವರ್ಷಗಳಾದರೂ ಕೂಡ ಅರ ಹವ ಕಡಿಮೆಯಾಗಿಲ್ಲ. ಈಗ ಕರಿಯ ಮತ್ತೆ ರಿಲೀಸ್ ಆಗಲಿದೆ.

ಮತ್ತೆ ಥಿಯೇಟರ್‌ಗಳಿಗೆ ಬರಲಿದೆ 'ಕರಿಯ'
ದರ್ಶನ್ ಕೆರಿಯರ್‌ನ ಬಹುದೊಡ್ಡ ಹಿಟ್ ಕರಿಯ. ಈಗ ಕಾಟೇರ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಆದರೂ ಹಲವು ಮಂದಿಗೆ 'ಕರಿಯ' ಮೆಚ್ಚಿನ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಸಿನಿಮಾ ಬಿಡುಗಡೆಯಾಗಿ ಇಪ್ಪತ್ತು ವರ್ಷವಾದ ಬೆನ್ನಲ್ಲೇ ಮತ್ತೊಮ್ಮೆ ಥಿಯೇಟರ್‌ಗಳಲ್ಲಿ 'ಕರಿಯ'ನ ದರ್ಶನವಾಗಲಿದೆ.
ಈ ಬಗ್ಗೆ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಮಗ ಮತ್ತು ನಟ ಸಂತೋಷ್ ನ್ಯೂಸ್ ಫಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. "ಕರಿಯ ಬಂದು ಇಪ್ಪತ್ತು ವರ್ಷವಾಗಿದೆ. ಕರಿಯ ಅಂತಹ ಒಂದು ಸಿನಿಮಾ ನಿರ್ಮಾಣ ಮಾಡಿದ ಖುಷಿ ನಮಗಿದೆ. ಅದೊಂದು ಲೆಜೆಂಡ್ ಸಿನಿಮಾವಾಗಿ ಇಂದಿಗೂ ಇದೆ. ಎಲ್ಲರ ಮನಸ್ಸಿನಲ್ಲಿ ಇಂದಿಗೂ ಅದು ಹಾಗೆ ಇದೆ. ನಮ್ಮ ಡಿ ಬಾಸ್ ಏನು ಕೆಲಸ ಮಾಡಿದ್ದಾರೆ ಎಂಬುದು ಈಗಲು ಕೇಳಿ ಬರುತ್ತೆ. ಕರಿಯ ಹವಾ ಇಂದಿಗೂ ಕಡಿಮೆ ಆಗಿಲ್ಲ" ಎಂದು ಹೇಳಿದ್ದಾರೆ.

'ಈ ಹಿಂದೆಯೇ ಪ್ಲ್ಯಾನ್ ಮಾಡಿದ್ದೇವು': ಸಂತೋಷ್
"ನಮ್ಮ ಬ್ಯಾನರ್‌ನಲ್ಲಿ ನಮ್ಮ ತಂದೆ ಕರಿಯ ಸಿನಿಮಾಗೂ ಮುನ್ನ ಹಲೋ ಯಮ ಸೇರಿ ಹಲವು ಸಿನಿಮಾ ಮಾಡಿದ್ದಾರೆ. ಆದರೆ, ಕರಿಯ ನಮಗೆ ತುಂಬಾ ಹೆಸರು ತಂದುಕೊಟ್ಟಿತು. ಈಗ ಕರಿಯ ಸಿನಿಮಾ ಬಿಡುಗಡೆಯಾಗಿ 20 ವರ್ಷ ಆಗಿದೆ. ಹೀಗಾಗಿ ಈಗ ಆ ಸಿನಿಮಾವನ್ನು ರಿ ರಿಲೀಸ್ ಮಾಡುತ್ತೇವೆ. ಈ ಬಗ್ಗೆ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿ, ಪ್ಲ್ಯಾನ್ ಮಾಡುತ್ತೇವೆ. ಈ ಬಗ್ಗೆ ಹಿಂದೆಯೇ ಪ್ಲ್ಯಾನ್ ಮಾಡಿದ್ದೇವು. ಈಗ ಮತ್ತೆ ಖಂಡಿತ ರಿ ರಿಲೀಸ್ ಮಾಡುತ್ತೇವೆ. ಅದೊಂದು ಪ್ಲ್ಯಾನ್ ಇದೆ. ಇಪ್ಪತ್ತು ವರ್ಷ ಆದ ಮೇಲೆ ಕರಿಯ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡುವ ಹವಾನೇ ಬೇರೆ, ಖಂಡಿತ ರಿರೀಲಿಸ್ ಮಾಡುತ್ತೇವೆ" ಎಂದು ನಟ ಸಂತೊಷ್ ಹೇಳಿದ್ದಾರೆ.
ಕರಿಯ
ಕರಿಯ ಸಿನಿಮಾ 2003 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಪ್ರೀತಿ ಮ್ತು ರೌಡಿಸಂ ನಡುವಿನ ಒದ್ದಾಟಗಳ ಸುತ್ತ ಹೆಣೆದ ಕತೆಗೆ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿದ್ದರು. ನಟ ದರ್ಶನ್ ಮತ್ತು ನಟಿ ಅಭಿನಯಶ್ರೀ ನಟಿಸಿದ್ದ ಈ ಸಿನಿಮಾದಲ್ಲಿ ನಿಜ ಜೀವನದ ರೌಡಿಗಳೇ ಪಾತ್ರ ಮಾಡಿ ಗಮನ ಸೆಳೆದಿದ್ದರು.


Click it and Unblock the Notifications











