ಶಿವಣ್ಣ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ: ಅಭಿಮಾನಿಗಳಿಂದ ರೇಷನ್ ಕಿಟ್ ವಿತರಣೆ
ಮೇ 19 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗೆ ಮರೆಯಲಾಗದ ದಿನ. ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು. ಶಿವಣ್ಣ, ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ಕೈ ಹಿಡಿದ ಸುದಿನ.
1986ರ ಮೇ 19ರಂದ ಶಿವರಾಜ್ ಕುಮಾರ್, ಗೀತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸುಂದರ ಬಂಧಕ್ಕೆ ಈಗ 35 ವರ್ಷದ ಸಂಭ್ರಮ. ಸ್ಯಾಂಡಲ್ ವುಡ್ ನ ಈ ಸುಂದರ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ದಂಪತಿಯ ಫೋಟೋ ಶೇರ್ ಮಾಡಿ, ವಿಶ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಪ್ರತಿವರ್ಷ ಶಿವಣ್ಣ ಮದುವೆ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅದ್ದೂರಿ ಆಚರಣೆ ಬದಲು ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಕೆ.ಜಿ ರಸ್ತೆಯಲ್ಲಿರುವ ಚಿತ್ರಮಂದಿರದ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಶಿವು ಅಡ್ಡ ಮತ್ತು ಶಿವ ಸೈನ್ಯ ಅಭಿಮಾನಿ ಬಳಗ ಒಟ್ಟಾಗಿ ಈ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಶಿವಣ್ಣ ದಂಪತಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರಿಗೆ 'ಆಸರೆ' ಹೆಸರಿನ ಅಡಿಯಲ್ಲಿ ನಾಗಾವರ ಏರಿಯಾದಲ್ಲಿ ಪ್ರತಿನಿತ್ಯ 500 ಜನರಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ.
'ಆಸರೆ' ಹಸಿದ ಹೊಟ್ಟೆಗೆ ಕೈ ತುತ್ತು ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ, ಸದ್ಯ 10 ದಿನದವರೆಗೂ ಮುಂದುವರೆಯಲಿದೆ. ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವಣ್ಣ ಹಾಗೂ ಶಿವಣ್ಣ ಬಾಯ್ಸ್ ಯೋಜನೆ ರೂಪಿಸಿಕೊಂಡಿದ್ದಾರೆ.


Click it and Unblock the Notifications











