ಶಕ್ತಿಧಾಮಕ್ಕೆ ಶಿವರಾಜ್‌ಕುಮಾರ್ ಭೇಟಿ: ಅಂಗಳದಲ್ಲಿ ಮಕ್ಕಳೊಂದಿಗೆ ಆಟ!
ಕನ್ನಡ ಚಿತ್ರರಂಗದಲ್ಲಿ ಲೀಡರ್ ಅಂತಲೇ ಕರೆಸಿಕೊಳ್ಳುವ ನಟ ಶಿವರಾಜ್ ಕುಮಾರ್ ಅವರ ದಿನಚರಿ ಇತ್ತೀಚೆಗೆ ಬದಲಾಗಿದೆ. ಅದಕ್ಕೆ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾರಣ. ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ದೊಡ್ಮನೆಯ ದೊಡ್ಡಣ್ಣ ಶಿವಣ್ಣನ ದಿನಚರಿ ಬದಲಾಗಿದೆ. ಆಗಾಗ ಶಕ್ತಿಧಾಮಕ್ಕೆ ಭೇಟಿ ಕೊಡುವುದು ಅವರ ಜೀವನದ ಭಾಗವಾಗಿದೆ.
ಅಪ್ಪು ಇಲ್ಲವಾದ ಬಳಿಕ ಶಕ್ತಿಧಾಮಕ್ಕೆ ಅಪ್ಪು ಮಾಡುತ್ತಿದ್ದ ಸೇವೆ ಕೇಳಿ ಶಿವಣ್ಣ ಅವರೇ ಅಚ್ಚರಿಗೊಂಡಿದ್ದರು. ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಕಾರ್ಯವನ್ನು ಶಿವರಾಜ್‌ಕುಮಾರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅವರು ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆಯುವುದು ಎಂದರೆ ಶಿವಣ್ಣನಿಗೆ ಅದೇನೋ ಖುಷಿ.
ಈಗ ಮತ್ತೆ ಶಕ್ತಿಧಾಮಕ್ಕೆ ಭೇಟಿ ನೀಡಿರುವ ಶಿವರಾಜ್‌ಕುಮಾರ್ ಮಕ್ಕಳ ಜೊತೆ ಮಗುವಾಗಿ ಆಟ ಆಡಿದ್ದಾರೆ. ಈ ವಿಡಿಯೋ ಮೂರು ದಿನ ತಡವಾಗಿ ರಿವೀಲ್ ಆಗಿದೆ. ವಿಡಿಯೋ ವೈರಲ್ ಲಿಸ್ಟ್ ಸೇರಿದೆ. ಶಿವರಾಜ್‌ಕುಮಾರ್ ಅವರು ಮಕ್ಕಳನ್ನು ಗುಂಪು ಕಟ್ಟಿಕೊಂಡು ಹಾಡಿ, ನಲಿದಿದ್ದಾರೆ.

ಅಂಗಳದಲ್ಲಿ ಮಕ್ಕಳೊಂದಿಗೆ ಆಟ ಆಡಿದ ಶಿವಣ್ಣ!
ನಟ ಶಿವರಾಜ್ ಕುಮಾರ್ ಅವರು ಫೆ.26 ಶನಿವಾರದಂದು ಮೈಸೂರಿನಲ್ಲಿ ಇರುವ ಶಕ್ತಿಧಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಮಕ್ಕಳ ಜೊತೆಗೆ ಹೆಚ್ಚು ಸಮಯ ಕಳೆದಿದ್ದಾರೆ. ಮಕ್ಕಳೊಂದಿಗೆ ಶಿವಣ್ಣ ಕೂಡ ಅಂಗಳದಲ್ಲಿ ಕೂತು ಆಟವಾಡಿದ್ದಾರೆ. ಅವರು ಮಕ್ಕಳೊಂದಿಗೆ ಇರುವ ಸಣ್ಣದೊಂದು ವಿಡಿಯೋ ರಿವೀಲ್ ಆಗಿದ್ದು ವೈರಲ್ ಆಗಿದೆ. ಶಿವರಾಜ್ ಕುಮಾರ್ ಅವರು ಆಗಾಗ ಅಲ್ಲಿಗೆ ಭೇಟಿ ನೀಡುತ್ತಾರೆ. ಮಕ್ಕಳೊಂದಿಗೆ ಸಮಯ ಕಳೆದು ಬರುತ್ತಾರೆ. ಈಗ ಶಕ್ತಿಧಾಮಕ್ಕೆ ಭೇಟಿ ಕೊಡುವುದು ಸಾಮಾನ್ಯವಾಗಿದೆ.
ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಜಾಲಿ ರೈಡ್!
ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಜಾಲಿ ರೈಡ್‌ಗೆ ಕರೆದುಕೊಂಡು ಹೋಗಿದ್ದರು. ಶಿವಣ್ಣ ಅವರೇ ಶಕ್ತಿಧಾಮದ ವ್ಯಾನ್ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದರು. ಮಕ್ಕಳು ಶಿವರಾಜ್ ಅವರೊಂದಿಗೆ ಜಾಲಿ ರೈಡ್ ಹೋಗಿ ಎಂಜಾಯ್ ಮಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಬಳಿಕ ಶಿವರಾಜ್ ಕುಮಾರ್ ಅವರು ಮಕ್ಕಳೊಂದಿಗೆ ಖೊ ಖೋ ಆಟ ಆಡಿದ್ದರು. ಹಾಗೆ ಮತ್ತೊಮ್ಮೆ ಅವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.
ಶಿವರಾಜ್‌ಕುಮಾರ್ ಅವರಿಗೆ ಶಕ್ತಿಧಾಮಕ್ಕೆ ಭೇಟಿ ನೀಡುವುದು ಅಂದರೆ, ಅಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವುದು ಅಂದರೆ ಬಲು ಇಷ್ಟವಂತೆ. ಅಂತೆಯೇ ಮಕ್ಕಳಿಗೂ ಕೂಡ ಶಿವರಾಜ್‌ಕುಮಾರ್ ಅವರೊಂದಿಗೆ ಕಾಲ ಕಳೆಯುವುದು ಅಂದರೆ ಎಲ್ಲಿಲ್ಲದ ಸಂತಸ.


Click it and Unblock the Notifications











