ಶಿವಣ್ಣ- ಗೀತಕ್ಕ ಅವ್ರದ್ದು ಲವ್ ಮ್ಯಾರೇಜಾ? ಅರೇಂಜ್ಡಾ? ಇಲ್ಲಿದೆ ನೋಡಿ ಲಗ್ನ ಪತ್ರಿಕೆ
ನಟ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ನೆಚ್ಚಿನ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. 1986, ಮೇ 19ರಂದು ಬೆಂಗಳೂರಿನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಮದುವೆ ನಡೆದ ಕೆಲವೇ ದಿನಗಳಲ್ಲಿ ಮೊದಲ ಸಿನಿಮಾ 'ಆನಂದ್' ಬಿಡುಗಡೆಯಾಗಿ ಗೆದ್ದಿತ್ತು.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಪುತ್ರಿ ಗೀತಾ ಅವರನ್ನು ಶಿವಣ್ಣ ವರಿಸಿದ್ದರು. ಕಮಲ್ ಹಾಸನ್, ಎಂಜಿಆರ್ ಸೇರಿದಂತೆ ಖ್ಯಾತನಾಮರು ಶಿವಣ್ಣ, ಗೀತಕ್ಕ ಮದುವೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಈಗ ವೈರಲ್ ಆಗುತ್ತಿದೆ. ಬೆಂಗಳೂರು ಅರಮನೆಯಲ್ಲಿ ಮದುವೆ ನಡೆದಿತ್ತು. ಆಗ ಎಸ್. ಬಂಗಾರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದರು.

ಬೆಳಗ್ಗೆ 12-10 ರಿಂದ 1-05 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಗೀತಾ ಅವರ ಕೊರಳಿಗೆ ಶಿವರಾಜ್‌ಕುಮಾರ್ ಮಾಂಗಲ್ಯಧಾರಣೆ ಮಾಡಿದ್ದರು. ಅದೇ ದಿನ ಸಂಜೆ 6.30ರಿಂದ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಗ್ನಪತ್ರಿಕೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಮೈಸೂರು ಅನಂತಸ್ವಾಮಿ ಮತ್ತು ಸಂಗಡಿಗರಿಂದ "ಭಾವಗೀತೆಗಳು" ಬೆಂಗಳೂರು ಕುಮಾರಿ ವೀಣಾವಾರಿಣಿಯವರಿಂದ "ವೀಣಾವಾದನ" ಹಮ್ಮಿಕೊಳ್ಳಲಾಗಿತ್ತು.
ಶಿವರಾಜ್‌ಕುಮಾರ್ ತಮ್ಮ ಮದುವೆ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. "1985ರಲ್ಲಿ ನಾನು ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಲಿತು ಬೆಂಗಳೂರಿಗೆ ಬಂದಿದ್ದ. ಆಗ ಮನೆಯಲ್ಲಿ ನನ್ನ ಮದುವೆ ಚರ್ಚೆ ಶುರುವಾಗಿತ್ತು. ಹುಡುಗಿ ನೋಡಿ ಬರಲು ಹೇಳಿದ್ದರು. ನಾನು ಇಷ್ಟು ಬೇಗ ಬೇಡ ಎಂದಿದ್ದೆ. ಬಳಿಕ ಸರಿ ನೋಡೋಣ ಅಂತ ಹೋಗಿ ನೋಡಿಬಂದೆ. ಮೊದಲ ನೋಟದಲ್ಲೇ ಗೀತಾ ಇಷ್ಟವಾಗಿದ್ದರು. ಅಮ್ಮನಿಗೆ ಬಂದು ಹೇಳಿದೆ. ಹುಡುಗಿ ಇಷ್ಟ ಆದ್ಲು ಅಂತ. ಬಳಿಕ ಮದುವೆ ನಿಶ್ಚಯವಾಯಿತು" ಎಂದು ನೆನಪು ಮಾಡಿಕೊಂಡಿದ್ದರು.

ಸದಾ ಶಿವಣ್ಣನ ನೆರಳಿನಂತೆ ಪತ್ನಿ ಗೀತಾ ಇರುತ್ತಾರೆ. ಎಲ್ಲೇ ಹೋದರೂ ಬಂದರು ಜೊತೆಗಿರುತ್ತಾರೆ. ಅದಕ್ಕೂ ಮುನ್ನ ಡಾ. ರಾಜ್‌ಕುಮಾರ್ ಜೊತೆ ಇದೇ ರೀತಿ ಪಾರ್ವತಮ್ಮ ಇರುತ್ತಿದ್ದರು. "ಸದಾ ಯಾಕೆ ಕೈಕೈ ಹಿಡಿದು ಜೊತೆಯಾಗಿ ಓಡಾಡುತ್ತೇವೆ ಅಂದ್ರೆ, ಜವಾಬ್ದಾರಿ. ನಾನು ಜೊತೆಗಿರುತ್ತೇನೆ ಎನ್ನುವುದು ಅವರಿಗೆ ಒಂದು ನಂಬಿಕೆ. ನಾವೇ ಕೇರ್ ತಗೋಬೇಕಲ್ಲ. ತಂದೆ ಮನೆಯಿಂದ ನಮ್ಮ ಮನೆಗೆ ಬಂದಿದ್ದಾರೆ. ಜೊತೆಗಿರಬೇಕು. ನಾವು ಇರುವುದು ಸಿನಿಾ ಇಂಡಸ್ಟ್ರಿಯಲ್ಲಿ. ನಟಿಯರ ಜೊತೆ ಡ್ಯಾನ್ಸ್, ರೊಮ್ಯಾನ್ಸ್ ಮಾಡುತ್ತೇವೆ. ಅವರಿಗೆ ಹೊಟ್ಟೆಕಿಚ್ಚು ಆಗಬಹದು. ಆ ರೀತಿ ಅಲ್ಲ, ಇದು ಸಿನಿಮಾ ಎಂದು ನಾವು ನಂಬಿಕೆ" ಕೊಡಬೇಕು ಎಂದು ಶಿವಣ್ಣ ಹೇಳಿದ್ದರು.
ಶಿವಣ್ಣ ಹಾಗೂ ಗೀತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಿವೇದಿತಾ 'ಅಂಡಮಾನ್' ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಈಗ ನಿರ್ಮಾಪಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಈ ಹಿಂದೆ 'ಹನಿಮೂನ್' ಎಂಬ ವೆಬ್ ಸೀರಿಸ್ ಸಹ ನಿರ್ಮಾಣ ಮಾಡಿದ್ದರು. ಆ ವೆಬ್ ಸೀರಿಸ್ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಹಾಗೂ ಗೀತಕ್ಕ ಎಲ್ಲಿಗೆ ಹನಿಮೂನ್ ಹೋಗಿದ್ರಿ ಎಂದು ನಟ ನಾಗಭೂಷಣ್ ಕೇಳಿದ್ದರು. ಆ ಬಗ್ಗೆ ಶಿವಣ್ಣ ಮಾತನಾಡಿದ್ದರು.
"ಹನಿಮೂನ್ ಅಂತ ನಾವು ಎಲ್ಲಿಗೂ ಆಗ ಹೋಗಿರಲಿಲ್ಲ. ಮೇ 19ಕ್ಕೆ ಮದುವೆ ಆಯಿತು. ಜೂನ್ 19ಕ್ಕೆ 'ಆನಂದ್' ಸಿನಿಮಾ ಬಿಡುಗಡೆ ಆಯಿತು. ಅದೇ ದಿನ 'ರಥಸಪ್ತಮಿ' ಸಿನಿಮಾ ಶುರುವಾಯಿತು. ಬಳಿಕ ಗಾಜನೂರಿಗೆ ಹೋಗಿ ಅಲ್ಲಿಂದ ಕೊಯಮತ್ತೂರಿಗೆ ಹೋಗಿ ಬಂದಿದ್ದೆವು. ಆ ನಂತರ ಕಾಸ್ಟ್ಯೂಮ್ ಕೊಂಡುಕೊಳ್ಳಲು 5 ದಿನ ಬಾಂಬೆಗೆ ಹೋಗಿದ್ದೆವು. ಅದೇ ನಮ್ಮ ಹನಿಮೂನ್ ಎಂದು ಹೇಳಬಹುದು" ಅಂತ ಶಿವಣ್ಣ ತಿಳಿಸಿದ್ದರು.


Click it and Unblock the Notifications











