ಕಾವೇರಿ ವಿವಾದ: ಶಿವಣ್ಣ, ಅಭಿಷೇಕ್, ಉಪೇಂದ್ರ, ದುನಿಯಾ ವಿಜಯ್ ಪ್ರತಿಕ್ರಿಯೆ
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಅನುಸರಿಸಿ ರಾಜ್ಯ ಸರ್ಕಾರ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ. ಇದೇ ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸಾಕಷ್ಟು ಜನ ರೈತರು ಈ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿನಿಮಾ ತಾರೆಯರು ಬೆಂಬಲಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ನಿಧಾನವಾಗಿ ಸ್ಯಾಂಡಲ್‌ವುಡ್ ತಾರೆಯರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ದರ್ಶನ್, ಸುದೀಪ್ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಮಾಡಿ ಮಾತನಾಡಿದ್ದಾರೆ. ಇನ್ನು ರಾಘವೇಂದ್ರ ರಾಜ್‌ಕುಮಾರ್, ದೊಡ್ಡಣ್ಣ, ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಈ ವಿಚಾರದ ಬಗ್ಗೆ ದನಿ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಶಿವರಾಜ್‌ಕುಮಾರ್ ಮಾತನಾಡಿ "ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ" ಎಂದಿದ್ದಾರೆ.
ಮೊದಲು ನಮ್ಮ ರೈತರನ್ನು ನೋಡಿಕೊಳ್ಳೋಣ- ಅಭಿ
ನಟ ಅಭಿಷೇಕ್ ಅಂಬರೀಶ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೈತರ ಹೋರಾಟಕ್ಕೆ ಅಂಬಿ ಬೆಂಬಲ ನೀಡಿದ್ದ ಹಳೇ ಫೋಟೊ ಶೇರ್ ಮಾಡಿ "ನಮಸ್ಕಾರ.. ನಮ್ಮ ಕರ್ನಾಟಕದ ಕೋಟ್ಯಾಂತರ ಜನರ ಜೀವನದಿಯಾಗಿರುವ ಕಾವೇರಿ ನೀರನ್ನು ದಯಾ ದಾಕ್ಷಣೆ ಇಲ್ಲದೆ ಅನ್ಯಾಯವಾಗಿ ನಮ್ಮಿಂದ ಕಸಿದುಕೊಳ್ಳುತ್ತಿರುವುದು ಸರಿಯಲ್ಲ. ಇನ್ನಾದರೂ ಈ ತಕ್ಷಣವೇ ಈಗಿರುವ ಎರಡು ರಾಜ್ಯದ ಸರ್ಕಾರಗಳು ಈ ಅನ್ಯಾಯವನ್ನು ತಡೆದು ಇದನ್ನೇ ನಂಚಿಕೊಂಡಿರುವ ಕೋಟ್ಯಾಂತರ ಜನರಿಗೆ ತಕ್ಷಣವೇ ನ್ಯಾಯ ಸಲ್ಲಿಸಬೇಕು. ಈ ವಿಷಯವಾಗಿ ಯಾವುದೇ ಸಂದರ್ಭ ಬಂದರು ಕಾವೇರಿ ತಾಯಿಯನ್ನು ನಂಬಿರುವ ನನ್ನ ಜನರ ಪರವಾಗಿ ಹೋರಾಟ ಮಾಡಲು ಸದಾ ಅವರ ಜೊತೆ ಇರುತ್ತೇನೆ, ಮೊದಲು ನಮ್ಮ ರೈತರನ್ನು ನೋಡಿಕೊಳ್ಳೋಣ ಆಮೇಲೆ ಪಕ್ಕದ ಊರಿನ ಬಗ್ಗೆ ಚಿಂತಿಸೋಣ. ಕಾವೇರಿ ನಮ್ಮದು ಜೈ ಕರ್ನಾಟಕ ಮಾತೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು- ಉಪ್ಪಿ
ನಟ, ನಿರ್ದೇಶಕ ಉಪೇಂದ್ರ ಟ್ವೀಟ್ ಮಾಡಿ "ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ" ಎಂದಿದ್ದಾರೆ.
ಅನ್ನದಾತನಿಗೆ ನ್ಯಾಯ ಒದಗಿಸಿ- ದುನಿಯಾ ವಿಜಯ್
"ಕಾವೇರಿ ಈ ನಾಡಿಗೆ ಬರೀ ನೀರಲ್ಲ ಈ ಮಣ್ಣಿನ ಆಳಕ್ಕಿಳಿದ ಜಲರೂಪದ ಬೇರು, ಪ್ರತಿಯೊಬ್ಬ ಕನ್ನಡಿಗನೂ ತಲೆಮೇಲೆ ಹೊತ್ತು ತಿರುಗೋ ದೈವರೂಪದ ತೇರು. ಇಷ್ಟು ದಿನ ಆಕಾಶಕ್ಕೆ ಮುಖ ಮಾಡಿ ನಿಂತಿದ್ದ ಅನ್ನದಾತ ಇಂದು ನ್ಯಾಯಾಲಯದ ಕಡೆ ಮುಖ ಮಾಡಿ ನಿಂತಿದ್ದಾನೆ. ಕಣ್ಣ ಮುಂದೆ ನೀರು ಹರಿದಂತೆ ಅವನ ಕಣ್ಣಿನಿಂದ ನೀರು ಹರಿಯುತ್ತದೆ. ನ್ಯಾಯಕ್ಕಾಗಿ ಕೈಚಾಚುತ್ತಿಲ್ಲ ಒಕ್ಕೊರಲಿನಿಂದ ಕೈಮುಗಿಯುತ್ತಿದ್ದೇವೆ ದಯಮಾಡಿ ಅನ್ನದಾತನಿಗೆ ನ್ಯಾಯ ಒದಗಿಸಿ" ಎಂದು ನಟ ದುನಿಯಾ ವಿಜಯ್ ಮನವಿ ಮಾಡಿದ್ದಾರೆ.


Click it and Unblock the Notifications











