ಅಣ್ಣಾವ್ರ ಮಕ್ಕಳ ಶಬರಿಮಲೈ ಯಾತ್ರೆ ಆರಂಭ
ಅಯ್ಯಪ್ಪನ ಮೇಲೆ ವರನಟ ಡಾ.ರಾಜ್ ಕುಮಾರ್ ಗೆ ಎಷ್ಟು ಭಕ್ತಿ ಇತ್ತೋ ಅಷ್ಟೇ ಭಕ್ತಿ ಅವರ ಮಕ್ಕಳಿಗೂ ಇದೆ. ಇದೇ ಕಾರಣಕ್ಕೆ ಹಲವು ವರ್ಷಗಳಿಂದ ನಿರಂತರವಾಗಿ ಶಬರಿಮಲೈಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಬರ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣಾವ್ರ ಮಕ್ಕಳು ಶಬರಿಮಲೈ ಯಾತ್ರೆ ಕೈಗೊಂಡಿದ್ದಾರೆ. ಕಳೆದ ತಿಂಗಳು ಮಾಲೆ ಧರಿಸಿದ ಶಿವಣ್ಣ ಮತ್ತು ರಾಘಣ್ಣ, ನಿನ್ನೆ ಸಕಲ ಪೂಜಾ ಕೈಂಕರ್ಯಗಳನ್ನ ಕೈಗೊಂಡು ಸಂಜೆ 7.30 ರ ಸುಮಾರಿಗೆ ಯಾತ್ರೆ ಆರಂಭಿಸಿದರು.

ಡಾ.ರಾಜ್ ಶಬರಿಗಿರಿಗೆ ಎಲ್ಲರನ್ನ ತಮ್ಮ ಸದಾಶಿವನಗರದ ನಿವಾಸದಿಂದ ಕರ್ಕೊಂಡು ಹೋಗೋ ಪರಿಪಾಟವನ್ನ ಬೆಳೆಸಿಕೊಂಡಿದ್ದರು. ತಂದೆ ಮಾರ್ಗದರ್ಶನದಲ್ಲೇ ಬೆಳೆದಿರುವ ಶಿವಣ್ಣ, ಬರೀ ತಾವಷ್ಟೇ ಅಲ್ಲದೇ, ಇನ್ನುಳಿದ ಭಕ್ತರನ್ನ ತಮ್ಮ ಜೊತೆಗೆ ಕರ್ಕೊಂಡು ಹೋಗುವ ಪದ್ಧತಿಯನ್ನ ಮುಂದುವರಿಸಿದ್ದಾರೆ. [ಅಯ್ಯಪ್ಪ ಸ್ವಾಮಿಗಳಾದ ಹ್ಯಾಟ್ರಿಕ್ ಹೀರೋ ಶಿವಣ್ಣ]
ಇರುಮುಡಿ ಕಟ್ಟಿಕೊಂಡು ದೈವದರ್ಶನ ಮಾಡೋದ್ರಿಂದ ಸಿಗುವ ಖುಷಿಗಿಂತ ಮತ್ತೊಂದಿಲ್ಲ ಅಂತ ಹೇಳುವ ಶಿವಣ್ಣ, ಈ ವರ್ಷ ಎಂದಿನಂತೆ ತಮ್ಮ ನಿವಾಸದಲ್ಲಿ ನಿನ್ನೆ ಬೆಳ್ಳಗ್ಗಿನಿಂದಲೇ ಪೂಜಾ ಕಾರ್ಯಗಳನ್ನ ಹಮ್ಮಿಕೊಂಡಿದ್ದರು.

ಗುರುಸ್ವಾಮಿ ಶಿವರಾಂ ಅವರ ಮಾರ್ಗದರ್ಶನದಲ್ಲಿ ಇರುಮುಡಿ ಕಟ್ಟಿದ ಶಿವಣ್ಣ, ರಾಘಣ್ಣ, ಅಪ್ಪು, ಲವ್ಲಿ ಸ್ಟಾರ್ ಪ್ರೇಮ್, ವಿನಯ್ ರಾಜ್ ಕುಮಾರ್, 'ಎಡಕ್ಕಲ್ಲು' ಚಂದ್ರಶೇಖರ್ ಸೇರಿದಂತೆ ಒಟ್ಟು 49 ಮಂದಿ ಯಾತ್ರೆ ಆರಂಭಿಸಿದರು.
ಅನಾರೋಗ್ಯದ ಕಾರಣ ಕಳೆದ ವರ್ಷ ಯಾತ್ರೆ ಕೈಗೊಳ್ಳದ ರಾಘಣ್ಣ, ಈ ವರ್ಷ ಖುಷಿಯಿಂದ ಯಾತ್ರೆ ಆರಂಭಿಸಿದ್ದಾರೆ. ವಿನಯ್ ರಾಜ್ ಕುಮಾರ್ ಹೀರೋ ಆದ್ಮೇಲೆ ಇದು ಮೊದಲ ಶಬರಿಗಿರಿ ಯಾತ್ರೆ. ಲವ್ಲಿ ಸ್ಟಾರ್ ಪ್ರೇಮ್ ಪುತ್ರ ಕೂಡ ಮಾಲೆ ಧರಿಸಿ ಯಾತ್ರೆ ಕೈಗೊಂಡಿರುವುದು ಈ ವರ್ಷದ ವಿಶೇಷ.

ಅಯ್ಯಪ್ಪನ ದರ್ಶನ ಮಾಡಿದ ನಂತ್ರ ಮೂರು ದಿನಗಳ ನಂತ್ರ ಅಂದ್ರೆ ಮಂಗಳವಾರ ಎಲ್ಲರೂ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಶಬರಿಗಿರಿಯ ಈ ಭಕ್ತಿ ಯಾತ್ರೆ ನಿರಾತಂಕವಾಗಿ ಯಶಸ್ವಿಯಾಗಲಿ ಅನ್ನುವುದೇ ನಮ್ಮ ಹಾರೈಕೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











