"ಇವತ್ತಲ್ಲ ಯಾವಾಗಲೂ ಶಿವಣ್ಣ ಜೋಳಿಗೆ ಹಿಡಿದುಕೊಂಡೇ ಇರ್ತಾನೆ": ಗೆದ್ದ ಖುಷಿಯಲ್ಲಿ 'ವೇದ'ವಾಕ್ಯ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ತೆರೆಗಪ್ಪಳಿಸಿದೆ. ಬೆಳ್ಳಂಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ.
ಎ. ಹರ್ಷ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ವೇದ'ಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. 100 ಡೇಸ್ ಪಕ್ಕಾ ಎನ್ನುತ್ತಿದ್ದಾರೆ. ಇನ್ನು ಥಿಯೇಟರ್ ಅಂಗಳದಲ್ಲಿ 'ವೇದ'ನಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ಹಬ್ಬದ ರೀತಿ ಚಿತ್ರವನ್ನು ಬರಮಾಡಿಕೊಂಡಿದ್ದಾರೆ. ಶಿವಣ್ಣನ ಕಟೌಟ್‌ಗಳಿಗೆ ಹಾರ ಹಾಕಿ ಸಿಂಗರಿಸಿ, ಪಟಾಕಿ ಸಿಡಿಸಿ, ತಮಟೆ ಸದ್ದಿಗೆ ಕುಣಿದು, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ 'ವೇದ' ಸಕ್ಸಸ್‌ಗಾಗಿ ಅಭಿಮಾನಿಗಳು ಚಂಡಿಕಾ ಹೋಮ ನೆರವೇರಿಸಿದ್ದಾರೆ.
ನಟ ಶಿವರಾಜ್‌ಕುಮಾರ್ ಪತ್ನಿ ಸಮೇತರಾಗಿ ಬೆಳಗ್ಗೆ ಪ್ರಸನ್ನ ಥಿಯೇಟರ್‌ಗೆ ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಪೂಜೆಯಲ್ಲಿ ಭಾಗಿ ಆಗಿದ್ದರು. ಶಿವಣ್ಣನಿಗೆ ಜೋಳಿಗೆ ಹಾಗೂ ಗೀತ ಶಿವರಾಜ್‌ಕುಮಾರ್‌ಗೆ ಮಹಿಳೆಯರು ಮಡಿಲು ತುಂಬಿದರು.

ಬೆಳಂಬೆಳಗ್ಗೆ 'ವೇದ' ಎಂಟ್ರಿ
ರಾಜ್ಯಾದ್ಯಂತ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ವೇದ' ಸಿನಿಮಾ ರಿಲೀಸ್ ಆಗಿದೆ. ಪದ್ಮನಾಭನಗರದ ಶ್ರೀನಿವಾಸ, ಮಾಗಡಿ ರಸ್ತೆಯ ಪ್ರಸನ್ನ, ಜೆ.ಪಿ ನಗರದ ಸಿದ್ದೇಶ್ವರ ಥಿಯೇಟರ್‌ಗಳಲ್ಲಿ ಬೆಳಗ್ಗೆ 5 ಗಂಟೆಗೆ ಮೊದಲ ಪ್ರದರ್ಶನ ಆರಂಭ ಆಗಿತ್ತು. ಸೂರ್ಯ ಹುಟ್ಟುವ ಸಮಯದಲ್ಲಿ ತೆರೆಮೇಲೆ 'ವೇದ'ನ ದರ್ಶನ ಮಾಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. 'ವೇದ' ಆಗಿ ಶಿವಣ್ಣನ ಆರ್ಭಟ ಕಂಡು ಹುಚ್ಚೆದ್ದು ಕುಣಿದಿದ್ದಾರೆ.

ಪ್ರಸನ್ನ ಅಂಗಳದಲ್ಲಿ ಶಿವಸಂಭ್ರಮ
ವಿಜಯನಗರದ ಪ್ರಸನ್ನ ಥಿಯೇಟರ್‌ನಲ್ಲಿ 'ವೇದ' ರಿಲೀಸ್ ಸಂಭ್ರಮ ಜೋರಾಗಿತ್ತು. ಅಭಿಮಾನಿಗಳು ಅಣ್ಣಮ್ಮ ದೇವಿ ಮೂರ್ತಿ ಕೂರಿಸಿ, ಚಂಡಿಕಾ ಹೋಮವನ್ನು ಹಮ್ಮಿಕೊಂಡಿದ್ದರು. 'ಶಿವ' ಸಂಭ್ರಮ ಹೆಸರಿನಲ್ಲಿ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ಬರಮಾಡಿಕೊಂಡಿದ್ದಾರೆ.

ಶಿವಣ್ಣ ಜೋಳಿಗೆ ಹಿಡಿದುಕೊಂಡೇ ಇರ್ತಾನೆ
ಚಂಡಿಕಾ ಹೋಮದ ನಂತರ ಮಾತನಾಡಿದ ಶಿವಣ್ಣ ಅಭಿಮಾನಿಗಳ ಪ್ರೀತಿಗೆ ಚಿರಋಣಿ ಎಂದರು. ಅಪ್ಪಾಜಿ ಕಾಲದಿಂದಲೂ ಪ್ರಸನ್ನ ಥಿಯೇಟರ್‌ಗಳಲ್ಲಿ ಪೂಜೆ ಮಾಡಿ ನಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆನಂದ್ ಚಿತ್ರಕ್ಕೂ ಇಲ್ಲಿ ಪೂಜೆ ನಡೆದಿತ್ತು ಎಂದಿದ್ದಾರೆ. 'ಜೋಗಿ' ನಂತರ ಮತ್ತೆ ಜೋಳಿಗೆ ತುಂಬಿದೆ ಎಂದಾಗ ಶಿವಣ್ಣ "ಇವತ್ತಲ್ಲ ಯಾವಾಗಲೂ ಶಿವಣ್ಣ ಜೋಳಿಗೆ ಹಿಡಿದುಕೊಂಡೇ ಇರ್ತಾನೆ. ಯಾಕೆ ಹೇಳಿ ಈ ಜೋಳಿಗೆಯಿಂದನೇ ಅಭಿಮಾನಿಗಳ ಪ್ರೀತಿ ತುಂಬಬೇಕು. ದುಡ್ಡಲ್ಲ. ಅವರ ಪ್ರೀತಿ ತುಂಬಿದರೆ ಸಾಕು" ಎಂದಿದ್ದಾರೆ.

ಭಯ ಇರಲಿಲ್ಲ ಎಂದ ಗೀತಕ್ಕ
ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ 'ವೇದ'. "ಮೊದಲ ಪ್ರದರ್ಶನಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಶಿವರಾಜ್‌ಕುಮಾರ್ ಜೊತೆಗೆ ಅದಿತಿ, ಗಾನವಿ ನಟನೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗ್ತಿದೆ. ಅವರ ಸಮಕ್ಕೆ ನಿಂತು ನಟಿಸೋದು ಕಷ್ಟ. ಆದರೆ ಅದನ್ನು ಅವರಿಬ್ಬರು ಮಾಡಿ ತೋರಿಸಿದ್ದಾರೆ. ನಾನು ಯಾವತ್ತು ಸಿನಿಮಾ ರಿಲೀಸ್ ಇದೆ ಎಂದು ಭಯ ಪಟ್ಟಿದ್ದಿಲ್ಲ. ಟೆನ್ಷನ್ ಇರಲಿಲ್ಲ. ಸಿನಿಮಾ ಗೆಲ್ಲುತ್ತದೆ ಎಂದು ನನ್ನ ಮನಸ್ಸಿಗೆ ಅನ್ನಿಸಿತ್ತು. ಬಹಳ ಖುಷಿಯಾಗುತ್ತಿದೆ" ಎಂದು ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಹರ್ಷ- ಶಿವಣ್ಣ ಕಾಂಬೋ ಹಿಟ್
ಭಜರಂಗಿ, ವಜ್ರಕಾಯ, ಭಜರಂಗಿ-2 ಸಿನಿಮಾಗಳಲ್ಲಿ ಎ. ಹರ್ಷ ಹಾಗೂ ಶಿವರಾಜ್‌ಕುಮಾರ್ ಒಟ್ಟಿಗೆ ಕೆಲಸ ಮಾಡಿದ್ದರು. 'ವೇದ' ಇವರಿಬ್ಬರ ಕಾಂಬಿನೇಷನ್‌ನ 4ನೇ ಸಿನಿಮಾ. 60 ದಶಕದ ಕಥೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಬಹಳ ರೋಚಕವಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿದೆ. ಉಮಾಶ್ರೀ, ಗಾನವಿ ಲಕ್ಷ್ಮಣ್, ಅದಿತಿ ಅರುಣ್ ಸಾಗರ್, ಶ್ವೇತಾ ಚೆಂಗಪ್ಪ ಚಿತ್ರದ ತಾರಾಗಣದಲ್ಲಿ ಮಿಂಚಿದ್ದಾರೆ. ಮಾಸ್ ಪ್ರೇಕ್ಷಕರಿಗಂತೂ ಸಿನಿಮಾ ಸಖತ್ ಕಿಕ್ ಕೊಡ್ತಿದೆ.


Click it and Unblock the Notifications











