ಸಿದ್ದರಾಮಯ್ಯ ಪರ ವರುಣದಲ್ಲಿ ಶಿವಣ್ಣ ಪ್ರಚಾರ: ವ್ಯಂಗ್ಯವಾಡಿದ ಬಿಜೆಪಿ ನಾಯಕರು
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಸ್ಪರ್ಧಿಸಿರುವ ವರುಣ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಚುನಾವಣೆ ಪ್ರಚಾರ ಕಣ ರಂಗೇರುತ್ತಿದ್ದು ಇಂದು(ಮೇ4) ಸ್ಯಾಂಡಲ್‌ವುಡ್ ನಟ ಡಾ. ಶಿವರಾಜ್‌ಕುಮಾರ್ ವರುಣದಲ್ಲಿ ಸಿದ್ದಾರಾಮಯ್ಯ ಪರ ಮತಯಾಚಿಸುತ್ತಿದ್ದಾರೆ. ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಾತ್ ನೀಡಿದ್ದಾರೆ.
ವರುಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಚಾರ ನಡೆಸಿ ಮತಯಾಚಿಸಿದರು. ನಟ ಶಿವರಾಜ್ ಕುಮಾರ್ ಸಹ ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದರು. ಈ ವೇಳೆ ಶಿವಣ್ಣ ಹಳೆಯ ದಿನಗಳನ್ನು ನೆನಪಿಸಿಕೊಂಡರು. "ಸಿದ್ದರಾಮಯ್ಯ ಹಾಗೂ ನಮಗೂ ಅನೇಕ ವರ್ಷಗಳ ಒಡನಾಟ ಇದೆ. ಅಪ್ಪಾಜಿ ಬದುಕಿದ್ದಾಗಲೂ ನಿರಂತರ ಸಂಪರ್ಕ ಇತ್ತು. ಅವರ ಪರ ಪ್ರಚಾರ ಮಾಡಿರೋದು ಸಂತಸ ತಂದಿದೆ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಎಲ್ಲರೂ ವೋಟ್ ಮಾಡಿ ಎಂದು ಶಿವಣ್ಣ ಮನವಿ ಮಾಡಿದರು.

"ಸಿದ್ದರಾಮಯ್ಯ ಅವರ ದೂರದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಜನರಿಗೆ ಒಳ್ಳೆದಾಗಿದೆ" ಎಂದರು. ಈ ವೇಳೆ ಮಾತನಾಡಿದ ಸಿದ್ಧರಾಮಯ್ಯ 2008 ಮತ್ತು 2013ರಲ್ಲಿ ನಿಮ್ಮ ಆಶೀರ್ವಾದದಿಂದಲೇ ಗೆದ್ದಿದ್ದೇನೆ. ಈ ಬಾರಿ ಆಶೀರ್ವಾದಿಸಿದರೇ ನನಗೆ ದೊಡ್ಡ ಶಕ್ತಿ ಬಂದಂತಾಗುತ್ತದೆ. ವರುಣವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನನ್ನ ವಿರುದ್ದ ಬೆಂಗಳೂರು ಅಭ್ಯರ್ಥಿಯನ್ನು ತಂದು ನಿಲ್ಲಿಸಿದ್ದಾರೆ.

"ನಾನು ಸಿಎಂ ಆಗಿದ್ದಾಗ ಆ ಧರ್ಮ ಈ ಧರ್ಮ ಅಂತಾ ನೋಡಿಲ್ಲ. ಎಲ್ಲಾ ಧರ್ಮದವರಿಗೂ ಕೆಲಸ ಮಾಡಿದ್ದೇನೆ. ಬೇರೆಯವರು ಬಂದು ವರುಣದಲ್ಲಿ ಅಭಿವೃದ್ದಿ ಮಾಡೋಕೆ ಆಗಲ್ಲ" ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಸಿದ್ದರಾಮಯ್ಯ ಪರೋಕ್ಷ ಟಾಂಗ್ ನೀಡಿದರು. ಇನ್ನು ಸಿದ್ದಾರಾಮಯ್ಯ ಪರ ನಟ ಶಿವರಾಜ್‌ಕುಮಾರ್ ಪ್ರಚಾರ ನಡೆಸುತ್ತಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಸೋಲುವ ಭೀತಿಯಿಂದ ಸಿದ್ದರಾಮಯ್ಯ ಚಿತ್ರನಟನನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಸಿದ್ದಾರಾಮಯ್ಯ ಪರ ಶಿವಣ್ಣ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ "ಸಿದ್ದಾರಾಮಯ್ಯ ಅವ್ರು ಹತಾಶರಾಗಿದ್ದಾರೆ. ಅದು ಯಾಕೆ ಹತಾಶರಾದರೋ ಗೊತ್ತಿಲ್ಲ. ಅವ್ರು ನಾಮಿನೇಷನ್ ವೇಳೆ ಹೇಳಿದ್ದರು. ನಾನು ಮತ ಚಲಾಯಿಸಲು ಮಾತ್ರ ಬರ್ತೀನಿ ಅಂತ. ನನಗೂ ಡಾ. ರಾಜ್‌ಕುಮಾರ್ ಕುಟುಂಬಕ್ಕೂ 40 ವರ್ಷಗಳ ಅವಿನಾಭಾವ ಸಂಬಂಧ. ಪುನೀತ್ ರಾಜ್‌ಕುಮಾರ್ ನಿಧನದ ನಂತರ ಅವರ ಹೆಸರಿನಲ್ಲಿ ಆಸ್ಪತ್ರೆ ಮಾಡಿದ್ದೆವು. ಅದಕ್ಕೆ ಅವರ ಸಹೋದರ ರಾಘಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಶಿವರಾಜ್‌ಕುಮಾರ್ ಯಾಕೆ ಹೀಗೆ ಮಾಡಿದ್ರೋ ಗೊತ್ತಿಲ್ಲ."
"ಒಂದಂತೂ ಸಂತೋಷ ಇದೆ. ಸಿದ್ದಾರಾಮಯ್ಯ ಸಾಹೇಬ್ರು ಕೂಡ ಸೋಮಣ್ಣ ಎದುರು ಸ್ಟಾರ್ ಪ್ರಚಾರಕರನ್ನು ಕರೆತಂದಿದ್ದಾರೆ. ನಾನು ನೋಡಿದ ಸಿದ್ದಾರಾಮಯ್ಯ ಇವತ್ತು ಕಳೆದು ಹೋಗಿದ್ಧಾರೆ. ಇವತ್ತಿನ ಸಿದ್ದರಾಮಯ್ಯ ಜನ ಸೇರಿಸಲು ಸ್ಟಾರ್ ಪ್ರಚಾರಕರನ್ನು ಕರೆತಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ" ಎಂದು ಕುಟುಕಿದ್ದಾರೆ.
ಇನ್ನು ಸಂಸದರಾದ ಪ್ರತಾಪ್ ಸಿಂಹ ಟ್ವೀಟ್ ಮಾಡಿ "ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ" ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications











