ಅಬ್ಬಬ್ಬಾ.. ಶಿವಣ್ಣ ಸಿನಿಮಾ ಜರ್ನಿಗೆ 36 ವರ್ಷ: ನೂರಾರು ಸಿನಿಮಾ, ಹಲವಾರು ಪಾತ್ರ!
ವರನಟ ಡಾ.ರಾಜ್‌ಕುಮಾರ್ ಅವರ ಚೊಚ್ಚಲ ಪುತ್ರ ನಟ ಶಿವರಾಜ್‌ಕುಮಾರ್ ಅವರು ಸದ್ಯ ಕನ್ನಡ ಚಿತ್ರದ ಲೀಡರ್ ಸ್ಥಾನದಲ್ಲಿ ಇದ್ದಾರೆ. ಹಲವು ವರ್ಷಗಳಿಂದ ನಟ ಶಿವರಾಜ್‌ಕುಮಾರ್ ಅವರು ನೂರಾರು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾರಂಗ ಮಾತ್ರವಲ್ಲ, ಕರುನಾಡ ಜನಮಾನಸದಲ್ಲಿ ಶಿವಣ್ಣ ಹೀರೋ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ನಟ ಶಿವರಾಜ್ ಕುಮಾರ್ ಅವರ ಸಿನಿಮಾ ಜರ್ನಿಗೆ ಈಗ 36 ವರ್ಷ. ಸತತ 36 ವರ್ಷಗಳಿಂದ ನಟ ಶಿವರಾಜ್‌ಕುಮಾರ್ ಅವರು ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೂ ಕೂಡ ಇನ್ನೂ ಅವರ ಸಿನಿಮಾ ಉತ್ಸಾಹ ಕುಂದಿಲ್ಲ. ಈಗಲೂ ಶಿವಣ್ಣನ ಡಾನ್ಸ್, ಫೈಟ್ ಅಂದರೆ ಅಭಿಮಾನಿಗಳಿಗೆ ಅಷ್ಟೇ ಕ್ರೇಜ್ ಇದೆ.
ಟುವ್ವಿ ಟುವ್ವಿ ಎಂದು ಹಾಡುತ್ತಾ, ಕುಣಿಯುತ್ತಾ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳ ಹೃದಯದಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶಿವರಾಜ್ ಕುಮಾರ್ ಅವರ ವರ್ಚಸ್ಸು ಹಾಗೇ ಉಳಿದಿದೆ. ಈಗಲೂ ಕೂಡ ಶಿವರಾಜ್‌ಕುಮಾರ್ ಅವರು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ: ಶಿವಣ್ಣ ಮಾಡದ ಪಾತ್ರವಿಲ್ಲ!
ಆಡು ಮುಟ್ಟದ ಸೊಪ್ಪಿಲ್ಲ ಶಿವಣ್ಣ ಮಾಡದ ಪಾತ್ರವಿಲ್ಲ ಎನ್ನುವ ಮಾತು ಅವರಿಗೆ ಅನ್ವಿಸುತ್ತದೆ. ಅಷ್ಟು ಸಿನಿಮಾಗಳಲ್ಲಿ ಭಿನ್ನ, ವಿಭಿನ್ನ ಪಾತ್ರದಲ್ಲಿ ಮಾಡಿದ್ದಾರೆ. ದೈವಭಕ್ತಿಯ ಪಾತ್ರದಲ್ಲಿ ಶಿವನನ್ನು ಮೆಚ್ಚಿಸಿದ ಕಣ್ಣಪ್ಪನಾಗಿ, ಏನೂ ಅರಿಯದ ಮುಗ್ಧನಂತೆ ಅಭಿನಯಿಸಿ ಕುರುಬನ ರಾಣಿಯ ಕಣ್ತೆರೆಸಿದ ಕೆಂಚನಾಗಿ, ಕತ್ತಲಲ್ಲಿ ಕಮರಿಹೋಗಿದ್ದ ಕನಸುಗಳನ್ನು ಚಿಗುರೊಡೆಯುವಂತೆ ಮಾಡಿ ಚಿಗುರಿದ ಕನಸಿನಲ್ಲಿ ಶಂಕರ್ ರೂಪದಲ್ಲಿ ನೊಂದವರ ಬಾಳಿನ ಬೆಳಕಾಗಿ, ತವರಿಗೆ ಬಾ ತಂಗಿ ಸಿನಿಮಾದಲ್ಲಿ ಜವಾಬ್ದಾರಿಯುತ ಅಣ್ಣನ ಪಾತ್ರದಲ್ಲಿ, ಹೀಗೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ಅಭಿನಯಿಸಿದ್ದಾರೆ.

ಆನಂದ್ ಚಿತ್ರದೊಂದಿಗೆ ಹೀರೋ ಕ್ಯಾಪ್ ತೊಟ್ಟ ಶಿವಣ್ಣ!
ನಟ ಶಿವರಾಜ್‌ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ. ಸಿನಿಮಾರಂಗಕ್ಕೆ ಶಿವರಾಜ್‌ಕುಮಾರ್ ನಾಯಕನಾಗಿ ಬಂದ ಬಳಿಕ ಸತತ ಮೂರು ಸಿನಿಮಾಗಳನ್ನು ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಎನ್ನುವ ಪಟ್ಟಕ್ಕೆ ಏರಿದ್ದಾರೆ. ಅಲ್ಲಿಂದ ಶಿವರಾಜ್ ಕುಮಾರ್ ಅವರ ಯಶಸ್ವಿ ಪಯಣ ಮುಂದುವರೆದಿದೆ.

125 ಸಿನಿಮಾಗಳ ಸರದಾರ ಕನ್ನಡದ ಸೆಂಚುರಿ ಸ್ಟಾರ್!
ನಟ ಶಿವರಾಜ್‌ಕುಮಾರ್ ಅವರು ಇಲ್ಲಿ ತನಕ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅವರ 125ನೇ ಸಿನಿಮಾ ವೇದ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅದರಲ್ಲೂ ಶಿವರಾಜ್ ಕುಮಾರ್ ಅವರ ಓಂ, ಜೋಗಿ, ಟಗರು, ಭಜರಂಗಿ ಅಂತಹ ಹತ್ತು ಹಲವು ಪಾತ್ರಗಳನ್ನು ಯಾರು ಮರೆಯೋ ಹಾಗಿಲ್ಲ. ಹೀಗೆ ಹಲವು ಪಾತ್ರಗಳು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿವೆ. ಸದ್ಯ ವೇದ ಚಿತ್ರ ಶೂಟಿಂಗ್‌ನಲ್ಲಿ ನಟ ಶಿವರಾಜ್‌ಕುಮಾರ್ ಅವರು ಬ್ಯುಸಿ ಆಗಿದ್ದಾರೆ.

ಸ್ಪೂರ್ತಿದಾಯಕ ವ್ಯಕ್ತಿತ್ವಯುಳ್ಳ ಹ್ಯಾಟ್ರಿಕ್ ಹೀರೋ!
ನಟ ಶಿವರಾಜ್‌ಕುಮಾರ್ ಅವರ ವ್ಯಕ್ತಿತ್ವವೇ ಸ್ಫೂರ್ತಿದಾಯಕ ಎಂದು ಹೇಳಬಹುದು. ಸಿನಿಮಾಗಳಿಂದ ಮಾತ್ರವಲ್ಲ. ಅವರು ತಮ್ಮ ವೈಯಕ್ತಿಕ ಬದುಕಿನಿಂದಲೂ ಕೂಡ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಉಳ್ಳವರು. ಈ ವಯಸ್ಸಿನಲ್ಲೂ ಕೂಡ ಶಿವರಾಜ್‌ಕುಮಾರ್ ಅವರು ಸಿಕ್ಕಾಪಟ್ಟೆ ಎನರ್ಜಿಟಿಕ್. ಅವರು ಈಗಲೂ ಯಾವುದೇ ಪಾತ್ರವಾದರೂ ಉತ್ಸಾಹದಿಂದ ಜೀವ ತುಂಬುತ್ತಾರೆ. ಹಾಗಾಗಿ ಸಿನಿಮಾರಂಗದಲ್ಲಿ ಎಲ್ಲರೂ ಶಿವರಾಜ್‌ಕುಮಾರ್ ಅವರ ಬಗ್ಗೆ ಒಂದು ಮಾತು ಹೇಳುತ್ತಾರೆ. ವಯಸ್ಸಿಗೆ ವಯಸ್ಸಾಗ ಬಹುದು, ಅದರೆ ಶಿವಣ್ಣನಿಗೆ ವಯಸ್ಸು ಆಗುವುದಿಲ್ಲ ಎಂದು. ಶಿವಣ್ಣನ ಜೀವನೋತ್ಸಾಹ ಕಂಡಾಗ ಅದು ನಿಜ ಎಂಬುದು ಮನದಟ್ಟಾಗುತ್ತದೆ.


Click it and Unblock the Notifications











