'ಟಾಕ್ಸಿಕ್' ಟೀಸರ್ ನೋಡ್ದೆ.. ಯಶ್ ಈ ತರ ಬೆಳೀತಿರೋದು ನನ್ನ ತಮ್ಮನೇ ಬೆಳೀತಿದ್ದಾನೆ ಅನ್ಸತ್ತೆ": ಶಿವಣ್ಣ
ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಟೈಟಲ್ ರಿವೀಲ್ ಆಗಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ರಾಕಿ ಮುಂದಿನ ಸಿನಿಮಾ ಮೂಡಿ ಬರಲಿದೆ. 'ಟಾಕ್ಸಿಕ್' ಟೈಟಲ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಸದ್ಯ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು ಶಿವಣ್ಣ ಕೂಡ ಮೆಚ್ಚಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರಲಿದೆ. ನಟ ಯಶ್ ಕೂಡ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇನ್ನು ಮೋಷನ್ ಟೀಸರ್ ಡಿಸೈನ್, ಬಿಜಿಎಂ ಎಲ್ಲವೂ ಮಜಾ ಕೊಡುವಂತಿದೆ. ಪರಭಾಷಿಕರು ಕೂಡ ಯಶ್ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಜಬರ್ದಸ್ತ್ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ರಿಲೀಸ್ ಮಾಡಿ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ.

ಟೀಸರ್ ನೋಡಿದವರು ಸಿನಿಮಾ ಕಥೆ ಏನು? ಯಶ್ ಪಾತ್ರ ಏನು? ಲುಕ್ ಹೇಗಿರುತ್ತದೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಏಪ್ರಿಲ್ 10, 2025ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಈ ಬಾರಿ ಪ್ಯಾನ್ ಇಂಡಿಯಾ ದಾಟಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಚಿತ್ರವನ್ನು ಯಶ್ ಕೊಂಡೊಯ್ಯುವಂತೆ ಕಾಣುತ್ತಿದೆ. ಅಂದಹಾಗೆ 'KGF-2' ರಿಲೀಸ್ ಆಗಿ ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಯಶ್ 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿದ್ದಾರೆ.
ನಟ ಶಿವರಾಜ್‌ಕುಮಾರ್ ಇದೀಗ 'ಟಾಕ್ಸಿಕ್' ಟೀಸರ್ ಬಗ್ಗೆ ಮಾತನಾಡಿದ್ದಾರೆ. ವಿಸ್ತಾರ ನ್ಯೂಸ್ ವಾಹಿನಿ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಟಾಕ್ಸಿಕ್ ಟೀಸರ್ ಚೆನ್ನಾಗಿದೆ. ಇಷ್ಟು ದಿನ ಕಾದಿದ್ದಕ್ಕೂ ಬಹಳ ವಿಭಿನ್ನವಾಗಿದೆ. 'ಟಾಕ್ಸಿಕ್' ಅಂದ್ರೇನೆ ಒಂದು ನಶೆ ಇದೆ. ಕಿಕ್ ಇದೆ. ಕಿಕ್‌ಸ್ಟಾರ್ಟ್ ಆಗಿದೆ. ನಾವು ಕೂಡ ಸಿನಿಮಾಗಾಗಿ ನಿರೀಕ್ಷೆ ಮಾಡ್ತಿದ್ದೀವಿ"
"ಪ್ರಪಂಚದಾದ್ಯಂತ 'KGF' ಸಿನಿಮಾದಿಂದ ಯಶ್ ಇಷ್ಟು ಹೆಸರು ಮಾಡಿರುವುದು ನಮಗೂ ತುಂಬಾ ಹೆಮ್ಮೆ ಎನಿಸುತ್ತದೆ. 'ಟಾಕ್ಸಿಕ್' ಇಷ್ಟು ಅದ್ಭುತವಾಗಿ ಬರ್ತಿರೋದು ನಮಗೂ ಹೆಮ್ಮೆಯ ವಿಷಯ. ಯಾಕಂದ್ರೆ ನಮ್ಮ ಕರ್ನಾಟಕದವರು ಒಬ್ರು ದೇಶದ ತುಂಬಾ ಮೆರೆಯುತ್ತಾರೆ ಅಂದ್ರೆ ಅದು ನಮಗೆ ಹೆಮ್ಮೆ ಅಲ್ವಾ? ನಾವೇ ಮೆರೆದಂತೆ. ನನ್ನ ಮತ್ತೊಬ್ಬ ಸಹೋದರನ ತರ ಯಶ್. ನಾನು, ಅಪ್ಪು, ಯಶ್ ಕೊನೆ ಕಾರ್ಯಕ್ರಮದಲ್ಲಿ ಜೊತೆಯಲ್ಲಿದ್ವಿ. ನನಗೆ ಯಶ್ ಬೇರೆ ಅನ್ಸಲ್ಲ. ಅಪ್ಪು ಬೇರೆ ಅನ್ಸಲ್ಲ. ಇಬ್ಬರೂ ಒಂದೇ. ಯಶ್ ಈ ತರ ಬೆಳೀತಿರೋದು ನನ್ನ ತಮ್ಮನೇ ಬೆಳೀತಿದ್ದಾನೆ ಅನ್ಸತ್ತೆ" ಎಂದು ಶಿವಣ್ಣ ಹೇಳಿದ್ದಾರೆ.

ಯಶ್19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅಂತೂ ಇಂತೂ ಕ್ರೇಜಿ ನ್ಯೂಸ್ ಕೊಟ್ಟು ರಾಕಿಂಗ್ ಸ್ಟಾರ್ ಅಭಿಮಾನಿಗಳ ಮನಗೆದ್ದಿದ್ದಾರೆ. ಕಥೆ ಚಿತ್ರಕಥೆ, ಕಲಾವಿದರು, ತಂತ್ರಜ್ಞರ ತಂಡವನ್ನು ಫೈನಲ್ ಮಾಡಿಕೊಂಡೇ 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿರುವಂತೆ ಕಾಣುತ್ತಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಇರುತ್ತದೆ ಎನ್ನುವ ಚರ್ಚೆ ನಡೀತಿದೆ. ಮೋಷನ್ ಟೀಸರ್ ಕೂಡ ಅದೇ ಸುಳಿವು ಕೊಡುತ್ತಿದೆ.
'ಟಾಕ್ಸಿಕ್' ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರ ಜೊತೆ ಪರಭಾಷಾ ಕಲಾವಿದರು, ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುವ ಸಾಧ್ಯತೆಯಿದೆ. ಗೋವಾ ಹಾಗೂ ಶ್ರೀಲಂಕಾದಲ್ಲಿ ಸಿನಿಮಾ ಚಿತ್ರೀಕರಣ ನಡೆಯುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಯಶ್ ಹುಟ್ಟುಹಬ್ಬಕ್ಕೆ(ಜನವರಿ 8) ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುವ ನಿರೀಕ್ಷೆಯಿದೆ.
ಯಶ್ 'ಟಾಕ್ಸಿಕ್' ಮಾತ್ರವಲ್ಲದೇ ಬಾಲಿವುಡ್ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಕಾವ್ಯ ಆಧರಿತ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ. ಮುಂದಿನ ವರ್ಷ ಆ ಸಿನಿಮಾ ಚಿತ್ರೀಕರಣ ಕೂಡ ನಡೆಯಲಿದ್ದು 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಸಾಧ್ಯತೆ ದಟ್ಟವಾಗಿದೆ. ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸೋದು ಬಹುತೇಕ ಖಚಿತವಾಗಿದೆ.


Click it and Unblock the Notifications











