"ಚಂದ್ರು ಒಳ್ಳೆ ಮನುಷ್ಯ, ಯಾರು ಏನೇ ಮಾಡಿದ್ರು ನಮ್ಮನ್ನ ದೂರ ಮಾಡೋಕ್ಕಾಗಲ್ಲ"; ಶಿವಣ್ಣ
ಆರ್. ಚಂದ್ರು ತಮ್ಮದೇ ಬ್ಯಾನರ್‌ನಲ್ಲಿ ಒಂದಲ್ಲ ಎರಡಲ್ಲ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. 'ಕಬ್ಜ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಚಂದ್ರು ಸೇಫ್ ಆಗಿದ್ದರು. ಆರ್. ಸಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಮೊದಲ ಸಿನಿಮಾ 'ಫಾದರ್' ಸೆಟ್ಟೇರಿದೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ನಟ ಶಿವರಾಜ್‌ಕುಮಾರ್ ಪತ್ನಿ ಸಮೇತ ಆಗಮಿಸಿ ಶುಭ ಕೋರಿದ್ದಾರೆ.
ನಗರದ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. 'ಫಾದರ್' ಚಿತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. ರಾಜ ಮೋಹನ್ ಆಕ್ಷನ್ ಕಟ್ ಹೇಳಲಿದ್ದಾರೆ. ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರಾಗಿ ಆರ್. ಚಂದ್ರು ಜೊತೆ ಕೈ ಜೋಡಿಸಿದ್ದಾರೆ. 'ಕಬ್ಜ' ಚಿತ್ರದಲ್ಲಿ ಶಿವಣ್ಣ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಶಿವಣ್ಣ ಮಾತನಾಡಿದ್ದ ಹೇಳಿಕೆ ವೈರಲ್ ಆಗಿತ್ತು.

'ಘೋಸ್ಟ್' ಸಿನಿಮಾ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಶಿವಣ್ಣ 'ಕಬ್ಜ' ಚಿತ್ರದ ಬಗ್ಗೆ ಮಾತನಾಡಿದ್ದರು. ಚಂದ್ರು ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆ ವೀಡಿಯೋ ವೈರಲ್ ಆಗಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ಖುದ್ದು ಶಿವರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಬ್ಬರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
"ಚಂದ್ರು ಏನೇ ಮಾಡಿದರೂ ಸ್ಟೈಲ್ ಆಗಿ ಮಾಡ್ತಾರೆ. ಆಡಂಬರ ಸ್ವಲ್ಪ ಜಾಸ್ತಿಯೇ ಇರುತ್ತೆ. ನಾನು ಮಾತನಾಡುವಾಗ ಅವರ ಬಗ್ಗೆ ಮಾತನಾಡಲಿ ಎಂದು ಎಕ್ಸ್‌ಪೆಕ್ಟ್ ಮಾಡ್ತಾರೆ. ಅವ್ರು ಎಕ್ಸ್‌ಪೆಕ್ಟ್ ಮಾಡ್ತಾರೆ ಅಂತ ನಾನು ಮಾತನಾಡಲ್ಲ, ಇಷ್ಟಪಟ್ಟು ಮಾತಾಡ್ತೀನಿ. ಅವರ ಸಿನಿಮಾ ಎಮೋಷನಲ್ ಆಗಿ ಕನೆಕ್ಟ್ ಆಗುತ್ತದೆ. ತಂದೆ ಸೆಂಟಿಮೆಂಟ್ ಚೆನ್ನಾಗಿ ಕಟ್ಟಿಕೊಡ್ತಾರೆ."
"ಮೈಲಾರಿ ಸಿನ್ಮಾ ಮಾಡೋವಾಗ ತಂದೆಗೆ ಕನೆಕ್ಟ್ ಆಗೋ ಪಾತ್ರ ಇತ್ತು. ಬಹಳ ಒಳ್ಳೆಯ ಮನುಷ್ಯ. ಅವರೊಟ್ಟಿಗೆ ಯಾರೇ ಆಗಲಿ ಸಿನಿಮಾ ಮಾಡಬೇಕು ಎನಿಸುತ್ತದೆ. 'ಕಬ್ಜ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದೆ. ಆಗ ನಾನು ಏನೋ ಮಾತನಾಡಿದೆ ಎಂದು ವಿಡಿಯೀ ವೈರಲ್ ಆಯಿತು. ನಾನು ಚಂದ್ರುನ ಹತ್ತಿರ ಸೇರ್ಸಲ್ಲ ಅಂತೆಲ್ಲಾ ಸುದ್ದಿ ಆಯಿತು. ನನ್ನ ಹಾಗೂ ಚಂದ್ರು ಬಾಂಧವ್ಯ ಯಾವಾಗಲೂ ಹೀಗೆ ಇರುತ್ತದೆ. ಸೋಶಿಯಲ್ ಮೀಡಿಯಾ ಆಟದ ಸಾಮಾನಿನ ರೀತಿ ಆಗಿದೆ. ಅದನ್ನು ಜನರು ಒಳ್ಳೆಯದಕ್ಕೆ ಬಳಸಿಕೊಳ್ಳುವಂತಾಗಲಿ. ಯಾವ ಮೀಡಿಯಾನೂ ಏನು ಮಾಡೋಕಾಗಲ್ಲ" ಎಂದು ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ.
ಆರ್. ಚಂದ್ರು ನಿರ್ದೇಶನದಲ್ಲಿ ಶಿವಣ್ಣ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀಚೆಗೆ ಹ್ಯಾಟ್ರಿಕ್ ಹೀರೊ ಭೇಟಿ ಮಾಡಿ ಈ ವಿಚಾರವನ್ನು ಚಂದ್ರು ಘೋಷಿಸಿದ್ದರು. ತಮ್ಮ ಬ್ಯಾನರ್‌ನಲ್ಲೇ ಆ ಚಿತ್ರವನ್ನು ನಿರ್ಮಿಸಲಿದ್ದಾರೆ. ಇನ್ನು ಶಿವಣ್ಣ ಹಲವು ಸಿನಿಮಾಗಳಿಗೆ ಸೈ ಎಂದಿದ್ದಾರೆ. ಸದ್ಯ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ.

ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಶಿವಮೊಗ್ಗದಲ್ಲಿ ಶಿವಣ್ಣ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ. ಇನ್ನುಳಿದಂತೆ ಅರ್ಜುನ್ ಜನ್ಯಾ ನಿರ್ದೇಶನದ '45' ಹಾಗೂ ನರ್ತನ್ ಸಾರಥ್ಯದ 'ಬೈರತಿ ರಣಗಲ್' ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಆಗಸ್ಟ್ 15ಕ್ಕೆ 'ಬೈರತಿ ರಣಗಲ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











