ರೀಮೇಕ್ ಮಾಡದ ಶಿವಣ್ಣನಿಗೆ ಹೊಸ ಬಿರುದು
ಸ್ಯಾಂಡಲ್ ವುಡ್ ಕಿಂಗ್ ಎಂದು ಕರೆಸಿಕೊಂಡಿರುವ ಶಿವಣ್ಣ ಅವರಿಗೆ ಅವರ ಅಭಿಮಾನಿಗಳು ಮತ್ತೊಂದು ಕಿರೀಟವನ್ನು ತೊಡಿಸಲು ಮುಂದಾಗಿದ್ದಾರೆ. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪರಿಷತ್ ಹೊಸ ಬಿರುದು ಶಿವಣ್ಣನಿಗೆ ನೀಡಲು ನಿರ್ಧರಿಸಿದೆ. ಅದೇನಪ್ಪಾ ಅಂತಹ ಗೌರವ ಎಂದು ಗೊತ್ತಾಗಬೇಕಾದರೆ ಏಪ್ರಿಲ್ 14ರ ತನಕ ಕಾಯಲೇಬೇಕು.
ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿರುದನ್ನು ಘೋಷಿಸಲಾಗುತ್ತದೆ ಎನ್ನುತ್ತಾರೆ ಕಾರ್ಯಕ್ರಮವನ್ನು ಆಯೋಜಿಸಿರುವ ಚಾಮುಂಡೇಶ್ವರಿ ಸಿನಿ ಕಂಬೈನ್ಸ್ ಮಾಲೀಕ ಕೃಷ್ಣ. ಯಾವುದೇ ರೀಮೇಕ್ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂಬ ಮಾತಿಗೆ ಶಿವಣ್ಣ ಬದ್ಧರಾಗಿದ್ದಾರೆ.
ಈ ಮೂಲಕ ಕನ್ನಡ ಚಿತ್ರರಂಗದ ಉಳಿದ ತಾರೆಗಳು ಅವರು ಸ್ಫೂರ್ತಿಯಾಗಿದ್ದಾರೆ. 'ಕೋದಂಡರಾಮ' (ಶಿವಣ್ಣನ 67ನೇ ಚಿತ್ರ) ಚಿತ್ರದ ಬಳಿಕ ಅವರು ಇನ್ನು ಮುಂದೆ ಯಾವುದೇ ರೀಮೇಕ್ ಚಿತ್ರಗಳಲ್ಲಿ ಅಭಿನಯಿಸಲ್ಲ ಎಂದಿದ್ದರು. ಅದರಂತೆ ಅವರು ನಡೆದುಕೊಂಡು ಬರುತ್ತಿದ್ದಾರೆ. ಅವರಿಗೆ ನಮ್ಮ ಸಂಸ್ಥೆಯಿಂದ ಹೊಸ ಬಿರುದು ನೀಡಿ ಸನ್ಮಾನಿಸಲಿದ್ದೇವೆ ಎನ್ನುತ್ತಾರೆ ಕೃಷ್ಣ.
ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಗಳು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್)


Click it and Unblock the Notifications












