RCB vs CSK: ಅಣ್ಣಾ ಸಿಎಸ್‌ಕೆ ಟಾಸ್ ಗೆದ್ದುಬಿಟ್ರು ಅಂದಾಗ ಶಿವಣ್ಣ ಹೇಳಿದ್ದಿದ್ದೇನು?
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ. ಈ ಮೂಲಕ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಆದರೆ ಶಿವಣ್ಣ ಈ ಗೆಲುವನ್ನು ಮೊದ್ಲೆ ಊಹಿಸಿದ್ರಾ? ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ನಿನ್ನೆ(ಮೇ 18) ಪಂದ್ಯದ ಕೊನೆ ಹಂತದವರೆಗೂ ಆರ್‌ಸಿಬಿ ತಂಡ ಪ್ಲೇ ಆಫ್ ಹಂತಕ್ಕೆ ಹೋಗುವ ನಿರೀಕ್ಷೆ ಇರಲಿಲ್ಲ. ಮಳೆ ಕಾರಣಕ್ಕೆ ಪಂದ್ಯ ರದ್ದಾದರೆ ಏನು ಗತಿ ಎನ್ನುವ ಲೆಕ್ಕಾಚಾರ ಬೇರೆ ಇತ್ತು. ಬೆಂಗಳೂರಿನಲ್ಲಿ ಪಂದ್ಯ ನಡೆದಿದ್ದರಿಂಗ ಮಳೆ ಬರುವ ಮುನ್ಸೂಚನೆ ಇತ್ತು. ಪಂದ್ಯದ ಆರಂಭದಲ್ಲೇ ಕೆಲವೊತ್ತು ಮಳೆ ಬಂದು ಅಡ್ಡಿಪಡಿಸಿತ್ತು. ಆದರೂ ಅದೃಷ್ಟ ಆರ್‌ಸಿಬಿ ಪರ ಇತ್ತು ಎನಿಸುತ್ತದೆ.

ಮತ್ತೆ ಪಂದ್ಯ ಆರಂಭವಾಗಿ ರಾಯಲ್ ಚಾಲೆಂಜರ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಅಂತೂ ಇಂತೂ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಇನ್ನು ಸಿಎಂ ಸಿದ್ದರಾಮಯ್ಯ, ನಟ ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ್ದರು. ಅಚ್ಚರಿ ಎನ್ನುವಂತೆ ಪಂದ್ಯ ಆರಂಭಕ್ಕೂ ಮುನ್ನ ನಟ ಶಿವಣ್ಣ ಭವಿಷ್ಯ ನುಡಿದಿದ್ದರು. ಆರ್‌ಸಿಬಿ ಗೆಲ್ಲುತ್ತದೆ ಎಂದಿದ್ದರು. ಅದೇ ನಿಜವಾಯಿತು.
ಆರ್‌ಸಿಬಿ ಜೆರ್ಸಿ ತೊಟ್ಟು ಪಂದ್ಯ ನೋಡಲು ಮನೆಯಿಂದ ತೆರಳುವ ಮುನ್ನ ಶಿವಣ್ಣ ಟ್ವೀಟ್ ಮಾಡಿದ್ದರು. ಫೋಟೊ ಹಂಚಿಕೊಂಡು "ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ ಆರ್‌ಸಿಬಿ ಹುಡುಗರೇ" ಎಂದು ಬರೆದುಕೊಂಡಿದ್ದರು. 'ಜೋಗಯ್ಯ' ಚಿತ್ರದ ಡೈಲಾಗ್ ಅನ್ನು ಕೊಂಚ ಬದಲಿಸಿ ಈ ರೀತಿ ಟ್ವೀಟ್ ಮಾಡಿದ್ದರು. ಪಂದ್ಯ ಆರಂಭಕ್ಕೂ ಮುನ್ನವೇ ಸೆಂಚುರಿ ಸ್ಟಾರ್ ಪೋಸ್ಟ್ ಸದ್ದು ಮಾಡಿತ್ತು. ಪಂದ್ಯದ ಬಳಿಕ "ಜಾಸ್ತಿ ಹೇಳಲ್ಲ. ಈಗಾಗಲೇ ಹೇಳಿಬಿಟ್ಟಿದ್ದೀನಿ" ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.
ಇನ್ನು ಪಂದ್ಯದಲ್ಲಿ ಟಾಸ್ ಗೆಲ್ಲುವುದು ಸಹ ಬಹಳ ಮುಖ್ಯವಾಗಿತ್ತು. ಆದರೆ ಸಿಎಸ್‌ಕೆ ತಂಡ ಟಾಸ್ ಗೆದ್ದಿತ್ತು. ಕೂಡಲೇ ಅಭಿಮಾನಿಯೊಬ್ಬರು ಶಿವಣ್ಣನ ಪೋಸ್ಟ್‌ಗೆ ಕಾಮೆಂಟ್ ಮಾಡಿ ಟಾಸ್ ಅವ್ರು ಗೆದ್ರು ಎಂದು ಬೇಸರ ವ್ಯಕ್ತಪಡಿಸಿದ್ದರು. ಅದಕ್ಕೆ ರಿಪ್ಲೇ ಮಾಡಿದ್ದ ಶಿವಣ್ಣ "ನನ್ನ ಟ್ವೀಟ್‌ನ ಮತ್ತೆ ಓದಿ" ಎಂದು ಬರೆದಿದ್ದರು. ಸೆಂಚುರಿ ಸ್ಟಾರ್ ಹೇಳಿದಂತೆ ಆರ್‌ಸಿಬು ತಂಡ ಪಂದ್ಯ ಗೆದ್ದುಬಿಡ್ತು. ಸದ್ಯ ಶಿವಣ್ಣನ ಭವಿಷ್ಯ ಪೋಸ್ಟ್ ವೈರಲ್ ಆಗುತ್ತಿದೆ.
ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಸರ್ ನೀವು ಹೇಳಿದಂತೆ ಗೆದ್ದುಬಿಟ್ವಿ. ಶಿವಣ್ಣ ನಿಮ್ಮ ಭವಿಷ್ಯ ನಿಜವಾಯಿತು, ಬಾಸ್ ಸೂಪರ್, ಆರ್‌ಸಿಬಿ ಚಿಂದಿ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆ ತಂಡ 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರ ಗಳಿಸಿ ಸೋಲು ಒಪ್ಪಿಕೊಂಡಿತ್ತು. ಇನ್ನು ನಿನ್ನೆಯ ಪಂದ್ಯದಲ್ಲಿ ಹಲವು ದಾಖಲು ನಿರ್ಮಾಣವಾದವು.
ಪಂದ್ಯದ ಬಳಿಕ ನಟ ಸುದೀಪ್ ಟ್ವೀಟ್ ಮಾಡಿ "ಅಭಿನಂದನೆಗಳು ಆರ್‌ಸಿಬಿ. ಅಬ್ಬಾ ಎಂತಹ ಪಂದ್ಯ. ಸಿಎಸ್‌ಕೆ ಅದೃಷ್ಟ ಇರಲಿಲ್ಲ. ಚೆನ್ನಾಗಿ ಆಡಿದ್ರಿ" ಎಂದಿ ಬರೆದುಕೊಂಡಿದ್ದಾರೆ. ಇನ್ನು ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಸೇರಿದಂತೆ ಹಲವು ಸಿನಿಮಾ ತಾರೆಯರು ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











