ಪುನೀತ್ ರಾಜ್‌ಕುಮಾರ್ ಸಮಾಧಿ ಮುಂದೆ ಬಿಕ್ಕಿ-ಬಿಕ್ಕಿ ಅತ್ತ ತಮಿಳು ನಟ ಸಿದ್ಧಾರ್ಥ್
ಪುನೀತ್ ರಾಜ್‌ಕುಮಾರ್ ಅಗಲಿಕೆ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಮಾತ್ರವೇ ಅಲ್ಲ ಚಿತ್ರರಂಗಕ್ಕೂ ಶೂನ್ಯ ಭಾವ ತರಿಸಿದೆ. ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೆ ನೆರೆ-ಹೊರೆಯ ಚಿತ್ರರಂಗದವರೂ ಸಹ ಅಪ್ಪು ನಿಧನದಿಂದ ತೀವ್ರ ದುಃಖಿತರಾಗಿದ್ದಾರೆ. ಇದು ಅಪ್ಪುವಿನ ಮಾನವೀಯ ಗುಣ, ಸ್ನೇಹಪರತೆಯನ್ನು ತೋರುತ್ತದೆ.
ತೆರೆಯ ಮೇಲೆ ಗಂಡೆದೆಯಿಂದ ವಿಲನ್‌ಗಳನ್ನು ಚಂಡಾಡುವ ನಾಯಕ ನಟರು ಅಪ್ಪು ಸಮಾಧಿ ಮುಂದೆ ನಿಂತು ಮಗುವಿನಂತೆ ಕಣ್ಣೀರು ಹಾಕುತ್ತಿರುವುದನ್ನು ಕನ್ನಡ ನಾಡಿನ ಜನರು ಕಳೆದ ಹನ್ನೊಂದು ದಿನದಿಂದಲೂ ನೋಡುತ್ತಿದ್ದಾರೆ.
ಇಂದು ಬಹುಭಾಷಾ ನಟ ಸಿದ್ಧಾರ್ಥ್ ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿಯ ಮುಂದೆ ಕೆಲ ಕಾಲ ಕೈಕಟ್ಟಿ ನಿಂತ ಸಿದ್ಧಾರ್ಥ್ ಗಳ-ಗಳನೆ ಅಳಲು ಆರಂಭಿಸಿದರು. ಅಳು ನಿಲ್ಲಿಸಿಲು ಬಹುವಾಗಿ ಯತ್ನಿಸಿ ವಿಫಲವಾದ ಸಿದ್ಧಾರ್ಥ್ ಕಣ್ಣೀರು ಒರೆಸಿಕೊಂಡು ಮಾಸ್ಕ್ ತೊಟ್ಟು ದುಃಖದಿಂದ ಕೂಡಿದ ಮುಖವನ್ನು ಮರೆಮಾಚಲು ಯತ್ನಿಸಿ ಮತ್ತೆ ವಿಫಲವಾದರು.

ಪುನೀತ್ ಸಮಾಧಿಗೆ ಎರಡು ದೊಡ್ಡ ಹಾರಗಳನ್ನು ಹಾಕಿದ ನಟ ಸಿದ್ಧಾರ್ಥ್ ದುಃಖದ ಭಾರಕ್ಕೋ ಏನೋ ಅಲ್ಲಿಯೇ ಸಮಾಧಿಯ ಪಕ್ಕದಲ್ಲಿ ತಲೆ ತಗ್ಗಿಸಿಕೊಂಡು ಕುಳಿತುಬಿಟ್ಟರು. ಸಿದ್ಧಾರ್ಥ್ ಕಣ್ಗಳಿಂದ ಮತ್ತೆ ಕಣ್ಣೀರು ಧಾರಾಕಾರವಾಗಿ ಹರಿಯಲಾರಂಭಿಸಿತು.
'ಬಾಯ್ಸ್', 'ನುವ್ವೊಸ್ತಾನಂಟೆ ನೇನೊದ್ದಂಟಾನಾ', 'ಬೊಮ್ಮರಿಲ್ಲು', 'ರಂಗ್ ದೇ ಬಸಂತಿ' ಸೇರಿದಂತೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಿದ್ಧಾರ್ಥ್, ಪುನೀತ್ ರಾಜ್‌ಕುಮಾರ್‌ಗೆ ಆತ್ಮೀಯರಾಗಿದ್ದರು. ಅಪ್ಪು ಅಗಲಿಕೆ ಸಮಯದಲ್ಲಿ ಸಿದ್ಧಾರ್ಥ್ ಬರಲಾಗಿರಲಿಲ್ಲ.
ಅಪ್ಪು ನಿಧನದ ದಿನ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, ''ನನಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನೀವು ನಮ್ಮನ್ನು ಬಿಟ್ಟು ಹೋದಿರಿ ಎಂಬುದನ್ನು ನಂಬಲಾಗುತ್ತಿಲ್ಲ. ದಯೆ ತುಂಬಿದ, ಧೈರ್ಯವಂತ, ಪ್ರತಿಭಾವಂತ ನೀವು ಜಗತ್ತಿಗೆ ಕೊಡಬೇಕಾಗಿದ್ದಿದ್ದು ಇನ್ನೂ ಸಾಕಷ್ಟಿತ್ತು, ಇದು ಅನ್ಯಾಯ ಸಹೋದರ. ನನ್ನ ಹೃದಯ ಒಡೆದು ಹೋಗಿದೆ'' ಎಂದಿದ್ದರು.
ಮತ್ತೊಂದು ಟ್ವೀಟ್ ಮಾಡಿ, ''ನಮ್ಮ ಪ್ರೀತಿಯ ಅಪ್ಪು ಅವರ ಕುಟುಂಬಕ್ಕೆ, ಗೆಳೆಯರಿಗೆ ಅಪ್ಪುವನ್ನು ಇಷ್ಟಪಡುವವರಿಗೆ ನನ್ನ ಸಂತಾಪಗಳು. ನಾನು ಕಂಡ ಬಹಳ ಪ್ರಶಂಸನೀಯ ವ್ಯಕ್ತಿಗಳಲ್ಲಿ ಅಪ್ಪು ಸಹ ಒಬ್ಬರು. ಬಹಳ ಬೇಗ ಹೊರಟುಹೋಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಿ ಸೂಪರ್ ಸ್ಟಾರ್'' ಎಂದಿದ್ದರು.
ಪುನೀತ್ ರಾಜ್‌ಕುಮಾರ್ ನೆರೆ-ಹೊರೆಯ ಚಿತ್ರರಂಗ ಸ್ಟಾರ್ ನಟರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಪುನೀತ್ ಅಗಲಿಕೆ ಬಳಿಕ ತೆಲುಗಿನ ಸ್ಟಾರ್ ನಟ ನಾಗಾರ್ಜುನ, ರಾಮ್ ಚರಣ್ ತೇಜ, ತಮಿಳಿನ ಶಿವಕಾರ್ತಿಕೇಯ, ವಿಶಾಲ್, ನಟ ಸೂರ್ಯ ಇನ್ನೂ ಹಲವರು ಪುನೀತ್ ಸಮಾಧಿಗೆ ಭೇಟಿ ನೀಡಿದ್ದಾರೆ.
ನಟ ಸೂರ್ಯ ಸಹ ಪುನೀತ್ ಸಮಾಧಿ ಮುಂದೆ ಕಣ್ಣೀರು ಸುರಿಸಿದ್ದರು, ಪುನೀತ್ ಹಾಗೂ ಸೂರ್ಯ ಇಬ್ಬರೂ ಒಂದೇ ವಯೋಮಾನದವರು, ಅಣ್ಣಾವ್ರ ಕುಟುಂಬ ಚೆನ್ನೈನಲ್ಲಿ ನೆಲೆಸಿದ್ದಾಗ ಸೂರ್ಯ ಕುಟುಂಬದ ಜೊತೆಗೆ ಬಹಳ ಆತ್ಮೀಯತೆ ಇತ್ತು. ತನ್ನ ಅಮ್ಮ ಪುನೀತ್ ರಾಜ್‌ಕುಮಾರ್ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಸೂರ್ಯ ಮೊನ್ನೆ ಅಪ್ಪು ಸಮಾಧಿಗೆ ಭೇಟಿ ನೀಡಿದಾಗ ಮಾಧ್ಯಮಗಳ ಮುಂದೆ ಹಂಚಿಕೊಂಡರು.


Click it and Unblock the Notifications











