"ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು": ನಟ ಸುದೀಪ್
ಮೈಸೂರಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿದೆ. ಆದರೂ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿನ ಪುಣ್ಯಭೂಮಿ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ವಿಷ್ಣುದಾದಾ ಪುಣ್ಯಸ್ಮರಣೆ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳು ಮತ್ತೊಮ್ಮೆ ಪುಣ್ಯಭೂಮಿ ಜಾಗಕ್ಕಾಗಿ ದನಿ ಎತ್ತಿದ್ದಾರೆ. ಇದಕ್ಕೆ ನಟ ಸುದೀಪ್ ಕೂಡ ಬೆಂಬಲ ಸೂಚಿಸಿದ್ದಾರೆ.
ನಟ ವಿಷ್ಣುವರ್ಧನ್ ಸಮಾಧಿ ಜಾಗ ಶತಾಯಗತಾಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಮಾನಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು(ಡಿಸೆಂಬರ್ 17) ಡಾ.ವಿಷ್ಣು ಸೇನಾ ಸಮಿತಿಯು ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಈ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ.

ಸಾಹಸಸಿಂಹನ ಪುಣ್ಯಭೂಮಿ ಜಾಗದ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿದ್ದರು. ಮೈಸೂರಿನ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಇದೇ ಇವರ್ಷ ಜನವರಿ 29ರಂದು ಸ್ಮಾರಕ ಲೋಕಾರ್ಪಣೆ ಆಗಿತ್ತು. ಆದರೆ ಬಹುತೇಕ ಅಭಿಮಾನಿಗಳು ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಜಾಗ ಉಳಿಯಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ. ಆದರೆ ಸ್ಟುಡಿಯೋ ಮಾಲೀಕರು ಒಳ ಪ್ರವೇಶಿಸಲು ನಿರ್ಬಂಧ ಹೇರುವುದರ ಜೊತೆಗೆ ದಾದಾ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ದಿನ ಅಭಿಮಾನಿಗಳ ಅಲ್ಲಿ ಸೇರಲು ತೊಂದರೆ ಕೊಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಎರಡೂ ಕಡೆ ಸ್ಮಾರಕ ಇರಲಿ. ಇಲ್ಲಿ ಪುಣ್ಯಭೂಮಿ ಅಭಿವೃದ್ದಿಗೆ ಅಭಿಮಾನಿಗಳೇ ಹಣ ಕೊಡುತ್ತೇವೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ನಟ ಕಿಚ್ಚ ಸುದೀಪ್. ಅಭಿಮಾನಿಗಳ ಹೋರಾಟಕ್ಕೆ ಸುದೀಪ್ ಸಹ ಬೆಂಬಲ ಸೂಚಿಸಿದ್ದು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ" ಎಂದು ಬರೆದುಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 50 ಸಾವಿರ ಜನ ಈ ಹೋರಾಟದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ.

ಸರ್ಕಾರ ಈ ಪ್ರತಿಭಟನೆಗೂ ಸ್ಪಂದಿಸದಿದ್ದರೆ ದೆಹಲಿಯಲ್ಲಿ ನಾವು ಹೋರಾಟವನ್ನು ಮುಂದುವರಿಸಲಿದ್ದೇವೆ ಜೊತೆಗೆ ಸರ್ಕಾರದ ಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಲಿದ್ದೇವೆ ಎಂದು ವೀರಕಪುತ್ರ ಶ್ರೀನಿವಾಸ್ ಈಗಾಗಲೇ ಮಾಹಿತಿ ನೀಡಿದ್ದಾರೆ.
ಇನ್ನು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಭೂಮಿ ನೀಡುವಂತೆ ಆಗ್ರಹಿಸಿ ನಾಳೆ(ಡಿಸೆಂಬರ್ 18) ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಅಧ್ಯಕ್ಷ ರಾಜು ಗೌಡ ಹೇಳಿದ್ದಾರೆ.


Click it and Unblock the Notifications











