'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ!
ಕಿಚ್ಚ ಸುದೀಪ್ ಮತ್ತು 'ಕೋಟಿಗೊಬ್ಬ-2' ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಈಗ ಈ ಸುದ್ದಿಯನ್ನ ಸ್ವತಃ ಸುದೀಪ್ ಅವರೇ ಖಚಿತ ಪಡಿಸಿದ್ದಾರೆ.
ಇನ್ನು ಮೂಲಗಳು ಹೇಳುವಂತೆ ಸೂರಪ್ಪ ಬಾಬು ಪ್ರಾಜೆಕ್ಟ್ ನಲ್ಲಿ ಸುದೀಪ್ ನಟಿಸಲು ದೊಡ್ಡ ಸಂಭಾವನೆಯನ್ನ ನೀಡಲಾಗುತ್ತಿದೆಯಂತೆ. ಇದು ಸ್ಯಾಂಡಲ್ ವುಡ್ ನಲ್ಲೇ ಅತಿ ಹೆಚ್ಚು ಎನ್ನಲಾಗುತ್ತಿದೆ. ಈ ಮೂಲಕ ಕಿಚ್ಚನ ಸಂಭಾವನೆ ಕೂಡ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ.
ಹಾಗಿದ್ರೆ, ಕೋಟಿಗೊಬ್ಬ-3' ಚಿತ್ರಕ್ಕೆ ಸುದೀಪ್ ಸಂಭಾವನೆ ಎಷ್ಟು? 'ದಿ ವಿಲನ್' ಚಿತ್ರದ ನಂತರ ಕಿಚ್ಚನ ಸಿನಿಮಾ ಯಾವುದು? ಹೆಬ್ಬುಲಿ ಕೃಷ್ಣ ಅವರ ಜೊತೆನಾ? ಸೂರಪ್ಪ ಬಾಬು ಅವರ ಜೊತೆನಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಮುಂದಿದೆ ಓದಿ......

ಸೂರಪ್ಪ ಬಾಬು ಸಿನಿಮಾ ಕನ್ ಫರ್ಮ್
ನಿರ್ಮಾಪಕ ಸೂರಪ್ಪ ಬಾಬು ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಸಿನಿಮಾ ಸೆಟ್ಟೇರುವುದು ಖಚಿತವಾಗಿದೆ. ಈ ವಿಷ್ಯವನ್ನ ಖುದ್ದು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಟೈಟಲ್ 'ಕೋಟಿಗೊಬ್ಬ-3'
ಸುದೀಪ್ ಮತ್ತು ಸೂರಪ್ಪಬಾಬು ಜೋಡಿಯ ಎರಡನೇ ಚಿತ್ರದ ಟೈಟಲ್ 'ಕೋಟಿಗೊಬ್ಬ-3' ಎಂದು ಇಡಲಾಗಿದೆಯಂತೆ. ಸದ್ಯ, ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಚೆನ್ನೈನಲ್ಲಿ ನಡೆಯುತ್ತಿದ್ದು, ಸ್ಕ್ರಿಪ್ಟ್ ಅಂತಿಮವಾಗುತ್ತಿದ್ದಂತೆ ನಿರ್ದೇಶಕ ಮತ್ತು ಕಲಾವಿದರನ್ನ ಆಯ್ಕೆ ಮಾಡಲಾಗುವುದಂತೆ.

'ಕೋಟಿಗೊಬ್ಬ-3' ಚಿತ್ರಕ್ಕಾಗಿ ಕಿಚ್ಚನ ಸಂಭಾವನೆ
'ಕೋಟಿಗೊಬ್ಬ-3' ಚಿತ್ರದಲ್ಲಿ ಸುದೀಪ್ ನಟಿಸಲು ನಿರ್ಮಾಪಕರು ದೊಡ್ಡ ಮೊತ್ತವನ್ನೇ ಆಫರ್ ಮಾಡಿದ್ದಾರಂತೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಬಣ್ಣ ಹಚ್ಚಲು ಕಿಚ್ಚನಿಗೆ 8 ಕೋಟಿ ನೀಡಲಾಗುತ್ತಿದೆಯಂತೆ.

'ದಿ ವಿಲನ್' ನಂತರ ಯಾವುದು?
ಸದ್ಯ ಪ್ರೇಮ್ ನಿರ್ದೇಶನ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ಹೆಬ್ಬುಲಿ ಕೃಷ್ಣ ಅವರ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ, ಕೃಷ್ಣ ಅವರ ಪ್ರಾಜೆಕ್ಟ್ ಜೊತೆಯಲ್ಲಿಯೇ ಸೂರಪ್ಪ ಬಾಬು ಅವರ ಸಿನಿಮಾ ಕೂಡ ಸೆಟ್ಟೇರಲಿದೆಯಂತೆ. ಹೀಗೆಂದು, ಸ್ವತಃ ಸುದೀಪ್ ತಿಳಿಸಿದ್ದಾರೆ. ಈ ಮೂಲಕ ಈ ವರ್ಷಾಂತ್ಯಕ್ಕೆ ಸುದೀಪ್ ಅಭಿನಯಿಸಲಿರುವ ಎರಡು ಸಿನಿಮಾಗಳು ಏಕಕಾಲದಲ್ಲಿ ಶುರುವಾಗಲಿದೆ.

'ಥಗ್ಸ್ ಆಫ್ ಮಾಲ್ಗುಡಿ' ಯಾವಾಗ?
ಮೊದಲು 'ಹೆಬ್ಬುಲಿ' ಕೃಷ್ಣ ಸಿನಿಮಾ ರಿಲೀಸ್ ಆಗಲಿದೆ. ನಂತರ ನಂತರ ಸೂರಪ್ಪ ಬಾಬು ಸಿನಿಮಾ ಬಿಡುಗಡೆಯಾಗಲಿದೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ನಿರ್ದೇಶನ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಅದರ ಜೊತೆಗೆ ರಿಷಬ್ ಶೆಟ್ಟಿ ಜೊತೆಯಲ್ಲೂ ಸುದೀಪ್ ಸಿನಿಮಾ ಮಾಡಲಿದ್ದಾರೆ.


Click it and Unblock the Notifications











