"ಅವ್ರು ನಮ್ಮ ಜನಾಂಗದವರು" ಎಂದು ಸುದೀಪ್ ಕರೆ ಮಾಡಿ ಲೋಕೇಶ್‌ಗೆ ಹೇಳಿದ್ರಾ? ಕಿಚ್ಚ ದಿಢೀರ್ ಟ್ವೀಟ್ ಮಾಡಿದ್ದೇಕೆ?
ನಟ ಕಿಚ್ಚ ಸುದೀಪ್ ಕುರಿತು ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಎನ್. ಲೋಕೇಶ್ ಅವಹೇಳನಕಾರಿಯಾಗಿ ಹೇಳಿದ್ದರು ಎನ್ನುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಲೋಕೇಶ್ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಆಗ್ರಹಿಸಿದ್ದರು. ಸ್ವತಃ ಸುದೀಪ್ ಕರೆ ಮಾಡಿ ನನ್ನೊಟ್ಟಿಗೆ ಈ ಬಗ್ಗೆ ಮಾತನಾಡಿದ್ರು ಎಂದಿರುವ ಲೋಕೇಶ್ ವಿಡಿಯೋ ವೈರಲ್ ಆಗಿದೆ.
ಸುದೀಪ್ ಇದೀಗ ಟ್ವೀಟ್ ಮಾಡಿ ನಾನು ಯಾರಿಗೂ ಕರೆ ಮಾಡಲಿಲ್ಲ ಎಂದಿದ್ದಾರೆ. "ನಾನು ಕ್ಷಮೆ ಕೇಳುವಂತೆ ಯಾರಿಗೂ ಕರೆ ಮಾಡಲಿಲ್ಲ ಅಂತ ಹೇಳುವುದಕ್ಕೆ ಇಷ್ಟಪಡ್ತೀನಿ. ಯಾರೋ ಕ್ಷಮೆ ಕೇಳುವುದರಿಂದ ನಾನು ಹೆಮ್ಮೆಪಡುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಹಳೆಯ ಸಿದ್ದಾಂತ. ಇದು ನಾನು ಹೇಳಿದ್ದಲ್ಲ" ಎಂದು ಸುದೀಪ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಘಟನೆಯ ಹಿನ್ನೆಲೆ ಏನು?
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಎನ್. ನಂಜುಂಡಸ್ವಾಮಿ ಈ ಬಾರಿ ಕಣಕ್ಕಿಳಿದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪರವಾಗಿ ನಟ ಸುದೀಪ್ ಶೀಘ್ರದಲ್ಲೇ ಪ್ರಚಾರ ಮಾಡಲು ಕೊಳ್ಳೆಗಾಲಕ್ಕೆ ಹೋಗುತ್ತಾರೆ ಎನ್ನಲಾಗ್ತಿದೆ. ಸುದೀಪ್ ಪ್ರಚಾರಕ್ಕೆ ಬರ್ತಾರೆ ಎನ್ನುವ ಮಾತನನ್ನು ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ಪದೇ ಪದೇ ಹೇಳುತ್ತಿದ್ದಾರಂತೆ. ಇದಕ್ಕೆ ಟಾಂಗ್ ಕೊಡಲು ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸುದೀಪ್ ಬಗ್ಗೆ ಉಡಾಫೆಯಾಗಿ ಮಾತನಾಡಿದ್ದರ ಎನ್ನಲಾಗಿದೆ.
ಲೋಕೇಶ್ ಮಾತನಾಡುತ್ತಾ "ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ನಮ್ಮ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು, ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ ಅಷ್ಟೇ" ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ಸುದೀಪ್ ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ. ಈ ಬಗ್ಗೆ ಲೋಕೇಶ್ ಕ್ರಮಕೆ ಕೇಮಾತುಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿವೆ. ಹಾಗಾಗಿ ಲೋಕೇಶ್ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ವಾಲ್ಕೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸರಗೂರು ಶಿವು ಮಾತನಾಡಿ "ಲೋಕೇಶ್ ಕೂಡಲೇ ಸುದೀಪ್ ಅವರಿಗೆ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು. ಇದು ಕೇವಲ ಸುದೀಪ್ ಅವರಿಗೆ ಮಾಡಿರುವ ಅವಮಾನವಲ್ಲ, ಅಭಿಮಾನಿಗಳಿಗೂ ಮಾಡಿರುವ ಅಪಮಾನ" ಎಂದಿದ್ದರು. ಇದೀಗ ಲೋಕೇಶ್ ಅವರು ಮಾತನಾಡಿ "ಕಿಚ್ಚ ಸುದೀಪ್ ಅವರು ನನಗೆ ಕರೆ ಮಾಡಿದ್ದರು. ಅವರು ನಮ್ಮ ಜನಾಂಗದವರು, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೋ, ಅವರು ಅಷ್ಟೇ ನನ್ನನ್ನು ಪ್ರೀತಿಸುತ್ತಾರೆ" ಎಂದಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ರೋಲ್ ಪೇಜ್‌ವೊಂದು ಹಂಚಿಕೊಂಡಿತ್ತು. ಅದಕ್ಕೆ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರಿಗೂ ಕರೆ ಮಾಡಿಲ್ಲ ಎಂದಿದ್ದಾರೆ. ಇನ್ನು ಸುದೀಪ್ ಈ ಬಾರಿಯ ಚುನಾವಣೆಯಲ್ಲಿ ಆತ್ಮೀಯರಾದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಅವರ ಪ್ರಚಾರ ಕೂಡ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವೂ ಪ್ರಚಾರ ನಡೆಸುವ ಸಾಧ್ಯತೆಯಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 3 ಕಥೆಗಳನ್ನು ಸುದೀಪ್ ಫೈನಲ್ ಮಾಡಿದ್ದಾರೆ. ಶೀಘ್ರದಲ್ಲೇ ಒಂದು ಸಿನಿಮಾ ಟೀಸರ್ ಶೂಟ್ ಮಾಡುವುದಾಗಿ ಟ್ವೀಟ್ ಮಾಡಿ ಹೇಳಿದ್ದಾರೆ. ಅಭಿಮಾನಿಗಳು ಕಿಚ್ಚನ ಮುಂದಿನ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸುದೀಪ್ ಮುಂದಿನ ಸಿನಿಮಾ ನಿರ್ದೇಶಕರಾಗಿ ಅನೂಪ್ ಭಂಡಾರಿ, ತಮಿಳಿನ ವೆಂಕಟ್ ಪ್ರಭು ಹಾಗೂ ಚೇರನ್ ಹೆಸರುಗಳು ಚಾಲ್ತಿಯಲ್ಲಿದೆ.


Click it and Unblock the Notifications











