ಅಭಿಮಾನಿಗಳ, ಪೋಷಕರ ಆರೋಗ್ಯ ಮುಖ್ಯ, ಹುಟ್ಟುಹಬ್ಬ ಇಲ್ಲ: ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನವಿದೆ. ಸೆಪ್ಟೆಂಬರ್ 02 ಬಂತೆಂದರೆ ಕಿಚ್ಚನ ಅಭಿಮಾನಿಗಳಿಗೆ ಹಬ್ಬ. ಆದರೆ ಈ ಬಾರಿ ಅದ್ಧೂರಿ ಹುಟ್ಟುಹಬ್ಬಕ್ಕೆ ಕೊರೊನಾ ಅಡ್ಡಗಾಲು ಹಾಕಿದೆ.
Recommended Video
ನಟ ಸುದೀಪ್ ಸಹ ಇಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮನವಿಯೊಂದನ್ನು ಮಾಡಿದ್ದು, 'ಅಭಿಮಾನಿಗಳ ಆರೋಗ್ಯವೇ ಮುಖ್ಯ ಹಾಗಾಗಿ ಈ ಬಾರಿ ಬಹಿರಂಗ ಹುಟ್ಟುಹಬ್ಬ ಆಚರಣೆ ಇಲ್ಲ' ಎಂದಿದ್ದಾರೆ.
'ನಿಮ್ಮ (ಅಭಿಮಾನಿಗಳ) ಆರೋಗ್ಯದ ಜೊತೆಗೆ ಮನೆಯಲ್ಲಿರುವ ನನ್ನ ಪೋಷಕರ ಆರೋಗ್ಯದ ಬಗ್ಗೆಯೂ ನಾನು ಗಮನ ವಹಿಸಬೇಕು ಹಾಗಾಗಿ ಈ ಬಾರಿ ಯಾವುದೇ ಹುಟ್ಟುಹಬ್ಬ ಆಚರಣೆ, ಕಾರ್ಯಕ್ರಮ ಇರುವುದಿಲ್ಲ' ಎಂದು ಹೇಳಿದ್ದಾರೆ ಸುದೀಪ್.

ಯಾವುದೇ ಸಂಭ್ರಮ, ಆಚರಣೆ ಬೇಡ: ಸುದೀಪ್
'ನಿಮ್ಮ ಹಾರೈಕೆ ನನಗೆ ಬೇಕು ಆದರೆ ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಸಂಭ್ರಮ, ಆಚರಣೆ ಕಾರ್ಯಕ್ರಮ, ಸಮಾರಂಭ ಬೇಡ. ನೀವು ಸಹ ಎಲ್ಲಿಯೂ ಒಟ್ಟಾಗಿ ಸೇರಬೇಡಿ' ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ ಸುದೀಪ್.

ಅಭಿಮಾನಿಗಳನ್ನು ನೋಡುವುದು ನನಗೂ ಸಂತಸ
ನಿಮ್ಮನ್ನೆಲ್ಲಾ ನೋಡುವುದು ನನಗೆ ಇನ್ನಿಲ್ಲದ ಸಂತಸ ತರುತ್ತದೆ. ನಿಮ್ಮನ್ನೆಲ್ಲಾ ಒಟ್ಟಾಗಿ ನೋಡುವುದು ನನಗೆ ಅತೀವ ಇಷ್ಟ. ಆದರೆ ಈಗ ಸಮಯ ಸೂಕ್ತವಲ್ಲ. ಆದರೆ ಆ ಸಮಯ ಬೇಗ ಬರುತ್ತದೆ. ಆಗ ನಾವೆಲ್ಲರೂ ಒಟ್ಟಿಗೆ ಸೇರೋಣ' ಎಂದಿದ್ದಾರೆ ಸುದೀಪ್.

ಬೆಂಬಲವಾಗಿದ್ದಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ
ಇಷ್ಟು ವರ್ಷ ನನಗೆ ಬೆಂಬಲವಾಗಿದ್ದಿದ್ದಕ್ಕೆ ಧನ್ಯವಾದಗಳು, ನಾನು ನಿಮ್ಮ ನಿರೀಕ್ಷೆಗೆ ತಕ್ಕ ಮನರಂಜನೆ ನೀಡದೇ ಇದ್ದಾಗಲೂ ನೀವು ಬೆನ್ನೆಲುಬಾಗಿ ನಿಂತಿದ್ದೀರಿ. ಮುಂದಕ್ಕೂ ನಿಮ್ಮ ಮನರಂಜಿಸುತ್ತಲೇ ಇರುತ್ತೇನೆ. ನಿನ್ನ ನಿರೀಕ್ಷಿಯನ್ನು ತಲುಪುತ್ತೇನೆ. ಸಾಧ್ಯವಾದರೆ ನೀವಿರುವ ಸ್ಥಳಗಳಲ್ಲಿಯೇ ಕೆಲವರಿಗೆ ಸಹಾಯ ಮಾಡಿ ಎಂದು ಸುದೀಪ್ ಕರೆ ನೀಡಿದ್ದಾರೆ.


Click it and Unblock the Notifications











