ಗೌರವ ಡಾಕ್ಟರೇಟ್ ಒಲ್ಲೆ ಎಂದ ಸುದೀಪ್; ತುಮಕೂರು ವಿವಿ ಬಳಿ ಕಿಚ್ಚನ ಮನವಿ ಏನು?
ನಟ, ನಿರ್ಮಾಪಕ, ನಿರೂಪಕ ಕಿಚ್ಚ ಸುದೀಪ್ ತುಮಕೂರು ವಿಶ್ವ ವಿದ್ಯಾಲಯ ನೀಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ ನಿರಾಕರಿಸಿದ್ದಾರೆ. 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಇದನ್ನೆಲ್ಲಾ ಪುರಸ್ಕರಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ವಿವಿ ನಿರ್ಧರಿಸಿತ್ತು.
ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಸುದೀಪ್ ಗಮನಕ್ಕೆ ತರಲಾಗಿತ್ತು. ಆದರೆ ವಿವಿ ನಿರ್ಧಾರಕ್ಕೆ ನಟ ಸುದೀಪ್ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇದನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. "ಸಮಾಜದಲ್ಲಿ ಸೇವೆ ಸಲ್ಲಿಸಿರುವ ನನಗಿಂತ ಹಿರಿಯರು ಹಲವರು ಇದ್ದಾರೆ. ಅವರಿಗೆ ಈ ಗೌರವ ನೀಡಿ" ಎಂದು ಸುದೀಪ್ ಮನವಿ ಮಾಡಿದ್ದಾರೆ.

ನಾಳೆ (ಆಗಸ್ಟ್ 7)ತುಮಕೂರು ವಿಶ್ವ ವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪದವಿ ಸಮಾರಂಭ ನಡೆಯುತ್ತಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಕೈಗಾರಿಕೋದ್ಯಮಿ ಎಚ್. ಜಿ.ಚಂದ್ರಶೇಖರ್, ಜಲಕ್ರೀಡಾ ಸಾಹಸಿಗ ಹಾಗೂ ಸಾಮಾಜಿಕ ಕಾರ್ಯಕರ್ತ ಸಿ. ಎಸ್ ನಾಗಾನಂದನ ಸ್ವಾಮಿ ಮತ್ತು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ. ಜೊತೆಗೆ 36 ಪಿಹೆಚ್‌ಡಿ, 1758 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ.
ನಟ ಸುದೀಪ್ ಮನರಂಜನೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಡಾಕ್ಟರೇಟ್ ಗೌರವ ನೀಡಲು ವಿವಿ ನಿರ್ಧರಿಸಿತ್ತು. ಆದರೆ ಆಪ್ತರ ಮೂಲಕ ಇದನ್ನು ಸುದೀಪ್ ನಿರಾಕರಿಸಿ ತಮ್ಮ ಮನವಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ವಿವಿ ಕುಲಪತಿ ಪ್ರೊ. ವೆಂಕಟೇಶ್ವರುಲು ಮಾಹಿತಿ ನೀಡಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
'ವಿಕ್ರಾಂತ್ ರೋಣ' ಸಿನಿಮಾ ತೆರೆಕಂಡು 2 ವರ್ಷ ಪೂರೈಸಿದೆ. ಆದರೆ ಮತ್ತೆ ಸುದೀಪ್ ಪ್ರೇಕ್ಷಕರ ಮುಂದೆ ಬರಲಿದೆ. 'ಮ್ಯಾಕ್ಸ್' ಸಿನಿಮಾ ಟೀಸರ್‌ಗಳು ಈಗಾಗಲೇ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಅಕ್ಟೋಬರ್ ವೇಳೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಶೀಘ್ರದಲ್ಲೇ ಸುದೀಪ್ ನಟನೆಯ ಮತ್ತೆರಡು ಸಿನಿಮಾಗಳು ಸೆಟ್ಟೇರಲಿದೆ. ತಮಿಳು ನಿರ್ದೇಶಕ ಚೇರನ್ ಸಾರಥ್ಯದಲ್ಲಿ ಒಂದು ಸಿನಿಮಾ ಮೂಡಿ ಬರಲಿದೆ. ಮತ್ತೊಂದು ಕಡೆ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ಚಿತ್ರೀಕರಣ ನಡೆಸಲಿವೆ.


Click it and Unblock the Notifications











