ಹ್ಯಾಪಿ ಬರ್ತಡೇ ಅಣ್ಣ: ಕ್ರೇಜಿ ಸ್ಟಾರ್‌ಗೆ ಕಿಚ್ಚನ ಪ್ರೀತಿಯ ವಿಶ್
ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ಅವರಿಗೆ ಇಂದು (ಮೇ 30) ಹುಟ್ಟುಹಬ್ಬದ ಸಂಭ್ರಮ. 60ನೇ ವಸಂತಕ್ಕೆ ಕಾಲಿಟ್ಟ ರವಿಚಂದ್ರನ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.
ಕೊರೊನಾ ಲಾಕ್ ಡೌನ್‌ನಿಂದ ಕ್ರೇಜಿ ಸ್ಟಾರ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ರವಿಚಂದ್ರನ್ ತನ್ನ ದೊಡ್ಡ ಮಗ ಎಂದೇ ಹೇಳುವ ಕಿಚ್ಚ ಸುದೀಪ್ ಕನಸುಗಾರನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ರವಿಚಂದ್ರನ್ ಅವರ ಕುರಿತು ಅಪಾರ ಗೌರವ ಮತ್ತು ಪ್ರೀತಿ ಇರಿಸಿಕೊಂಡ ನಟರಲ್ಲಿ ಕಿಚ್ಚ ಸುದೀಪ್ ಒಬ್ಬರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ರವಿಚಂದ್ರನ್ ಹೇಳುವ ಮಾತಿಗೆ ಒಲ್ಲೆ ಎನ್ನದೆ ಗೌರವದಿಂದ ಪಾಲಿಸುವಷ್ಟು ಸುದೀಪ್ ಅವರಲ್ಲಿ ಅಭಿಮಾನವಿದೆ. ಈ ಪ್ರೀತಿ ತೆರೆಯ ಮೇಲೆಯೂ ವ್ಯಕ್ತವಾಗಿತ್ತು. 'ಮಾಣಿಕ್ಯ' ಚಿತ್ರದಲ್ಲಿ ತಂದೆ-ಮಗನ ಪ್ರೀತಿಯ ಸನ್ನಿವೇಶಗಳು ಎಂಥವರ ಕಣ್ಣಲ್ಲೂ ನೀರು ತರಿಸುವಂತಿದ್ದವು. ಇಬ್ಬರೂ ನೈಜ ತಂದೆ ಮಕ್ಕಳೇನೋ ಎನ್ನುವಷ್ಟು ಅವರ ಅಭಿನಯವಿತ್ತು.

'ಹುಟ್ಟುಹಬ್ಬದ ಶುಭಾಶಯಗಳು ಅಣ್ಣ. ಸಂತೋಷವಾಗಿರಿ' ಎಂದು ಟ್ವೀಟ್ ಮಾಡಿದ್ದಾರೆ. ಸುದೀಪ್ ಮತ್ತು ರವಿಚಂದ್ರನ್ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಅಪೂರ್ವ ಚಿತ್ರದಲ್ಲಿ ಕಿಚ್ಚ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸದ್ಯ ರಿಲೀಸ್‌ಗೆ ರೆಡಿಯಾಗಿರುವ ರವಿ ಬೋಪಣ್ಣ ಚಿತ್ರದಲ್ಲೂ ಸುದೀಪ್ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.
ಇಂದು ಹುಟ್ಟುಹಬ್ಬದ ಪ್ರಯುಕ್ತ ರವಿಚಂದ್ರನ್ 3 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಗಾಡ್, 60 ಮತ್ತು ಬ್ಯಾಡ್ ಬಾಯ್ ಸಿನಿಮಾಗಳ ಬಗ್ಗೆ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಇನ್ನೂ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ದೃಶ್ಯಂ-2ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











