ರಂಗಕರ್ಮಿ ಹಾಗೂ ನಟ ಏಣಗಿ ನಟರಾಜ್ ಕಾಲವಶ

ಏಣಗಿ ನಟರಾಜ್ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಬಹುತೇಕ ಚಿತ್ರಗಳು ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. ಇದಿಷ್ಟೇ ಅಲ್ಲದೆ ಕಿರುತೆರೆಯಲ್ಲೂ ಏಣಗಿ ನಟರಾಜ್ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು.
ಒಂದು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಶ್ರೇಯಸ್ಸು ನಟರಾಜ್ ಅವರಿಗೆ ಸಲ್ಲುತ್ತದೆ. ನೀನಾಸಂ ರಂಗಶಾಲೆಯಲ್ಲಿ ತರಬೇತಿ ಪಡೆದಿದ್ದ ನಟರಾಜ್ ಅವರಿಗೆ ಅಭಿನಯ ಕಲೆ ರಕ್ತಗತವಾಗಿತ್ತು. ತನ್ನದೇ ಆದ ವಿಶಿಷ್ಟ ಶೈಲಿಯಿಂದ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ನೀನಾಸಂ ತಿರುಗಾಟದ ನಾಟಕಗಳ ಮೂಲಕ ತಾನೊಬ್ಬ ಸಶಕ್ತ ನಟ ಎಂಬುದನ್ನು ನಿರೂಪಿಸಿದ್ದರು. ತದ್ರೂಪಿ (ಪ್ರಸನ್ನ ನಿರ್ದೇಶನ), ಬಿರುದಂತೆಂಬರ ಗಂಡ (ಜಂಬೆ ನಿರ್ದೇಶನ), ಕಂಬಾರರ ಸಾಂಬಶಿವ ಪ್ರಹಸನ ಹಾಗೂ ಸಂಕೇತ್ ತಂಡದ ನಾ ತುಕಾರಾಂ ಅಲ್ಲ ನಾಟಕಗಳು ನಟರಾಜ್ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತವೆ.
ಮತ್ತೆ ಮುಂಗಾರು, ಅವ್ವ, ಅಭಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಏಣಗಿ ನಟರಾಜ್ ಅಭಿನಯಿಸಿದ್ದಾರೆ. ಕಲೆಯಲ್ಲೇ ಉಸಿರಾಡಿದ ನಟರಾಜ್ ನಿಧನಕ್ಕೆ ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್)


Click it and Unblock the Notifications











