ಸದಾಶಿವನಗರದಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ ರಿಯಲ್ ಸ್ಟಾರ್: ಕತ್ರಿಗುಪ್ಪೆ ನಿವಾಸದ ಕಥೆಯೇನು?
ನಟ ಉಪೇಂದ್ರ ನಗರದ ಪ್ರತಿಷ್ಠಿತ ಬಡವಣೆಯಾದ ಸದಾಶಿವನಗರ ಭಾಗದಲ್ಲಿ ಹೊಸ ಬಂಗಲೆ ಖರೀದಿಸಿದ್ದಾರೆ. ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ನೇರವೇರಿದೆ. ಉಪೇಂದ್ರ ಮನೆ ಅಂದಾಕ್ಷಣ ಎಲ್ಲರಿಗೂ ನೆನಪಾಗುತ್ತಿದ್ದದ್ದು ಕತ್ರಿಗುಪ್ಪೆ ನಿವಾಸ. ದಶಕಗಳ ಹಿಂದೆ ಬಹಳ ಆಸೆಪಟ್ಟು ಉಪ್ಪಿ ಈ ಗೂಡನ್ನು ಕಟ್ಟಿಕೊಂಡಿದ್ದರು. ಇದೀಗ ಫ್ಯಾಮಿಲಿ ಸದಾಶಿವನಗರದ ಮನೆಗೆ ಶಿಫ್ಟ್ ಆಗುತ್ತಿದ್ದಾರೆ.
ನಾಲ್ಕೈದು ವರ್ಷಗಳ ಹಿಂದೆ ಉಪ್ಪಿ ಕತ್ರಿಗುಪ್ಪೆ ನಿವಾಸ ಬಿಟ್ಟು ರುಪ್ಪೀಸ್ ರೆಸಾರ್ಟ್‌ಗೆ ಶಿಫ್ಟ್ ಆಗುವ ಬಗ್ಗೆ ಆಲೋಚಿಸಿದ್ದರು. ಆದರೆ ಕೊನೆಗೆ ಇದೀಗ ಸದಾಶಿವ ನಗರದಲ್ಲಿ ಹೊಸ ಮನೆ ಖರೀದಿಸಿ ಅಲ್ಲಿಗೆ ಹೋಗುತ್ತಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೀರೋ ಆಗಿ ಬ್ಯುಸಿಯಾಗಿದ್ದ ಸಮಯದಲ್ಲೇ ಉಪೇಂದ್ರ ಕತ್ರಿಗುಪ್ಪೆ ಮನೆ ಕಟ್ಟಿಸಿದ್ದರು. ಪ್ರತಿ ವರ್ಷ ಅಭಿಮಾನಿಗಳು ಹುಟ್ಟುಹಬ್ಬದ ದಿನ ಈ ಮನೆಯಲ್ಲೇ ನೆಚ್ಚಿನ ನಟನನ್ನು ಭೇಟಿ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬ, ಕೆಲ ಸಿನಿಮಾಗಳ ಸುದ್ದಿಗೋಷ್ಠಿ ಕೂಡ ಇದೇ ಮನೆ ಮುಂದೆ ನಡೀತಿತ್ತು.

ಬಹಳ ದಿನಗಳಿಂದ ಹೊಸ ಮನೆ ಖರೀದಿಸುವ ಲೆಕ್ಕಾಚಾರದಲ್ಲಿ ಉಪೇಂದ್ರ ಇದ್ದರು. ಕಾಮನ್ ಫ್ರೆಂಡ್ ಮೂಲಕ ಸದಾಶಿವ ನಗರದಲ್ಲಿ ಬಂಗಲೆ ಮಾರಾಟಕ್ಕಿರುವುದು ಗೊತ್ತಾಗಿದೆ. ಕೂಡಲೇ ದಂಪತಿ ಹೋಗಿ ನೋಡಿದ್ದಾರೆ. ಕಾರ್ನರ್ ಸೈಟ್ ಮನೆ. ನೋಡಿದ ಕೂಡಲೇ ಇಷ್ಟವಾಗಿದೆ. ನಂತರ ವ್ಯವಹಾರ ಕುದುರಿಸಿದ್ದಾರೆ. ಮನೆ ವಾಸ್ತು ಪ್ರಕಾರ ಕೂಡ ಇದೆಯಂತೆ. ಈ ಬಗ್ಗೆ ಉಪೇಂದ್ರ ಆಪ್ತ ನಿರ್ದೇಶಕ ಮುರಳಿ ಮೋಹನ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಸ್ಯಾಂಕಿ ಟ್ಯಾಂಕ್‌ಗೆ ಹತ್ತಿರದಲ್ಲೇ ಉಪೇಂದ್ರ ಹೊಸ ಬಂಗಲೆ ಇರುವುದು ವಿಶೇಷ. ಮೊನ್ನೆ ಶನಿವಾರ ಒಳ್ಳೆ ದಿನ ಎನ್ನುವ ಕಾರಣಕ್ಕೆ ಸಿಂಪಲ್ ಆಗಿ ಪೂಜೆ ನೆರವೇರಿಸಿ ಹೊಸ ಮನೆಗೆ ಅಡಿ ಇಟ್ಟಿದ್ದಾರೆ.

ಉಪೇಂದ್ರ ಆಪ್ತ ಮುರಳಿ ಮೋಹನ್ ಮಾತನಾಡಿ "2002 -03ರ ಸಮಯದಲ್ಲಿ ಉಪೇಂದ್ರ ಕತ್ರಿಗುಪ್ಪೆ ಮನೆ ಕಟ್ಟಿಸಿದ್ದರು. ತಮಗೆ ಬೇಕಾದಂತೆ ಇಷ್ಟಪಟ್ಟು ಮನೆಯನ್ನು ತಿದ್ದಿ ತೀಡಿದ್ದರು. ಇದೀಗ ಸದಾಶಿವ ನಗರದಲ್ಲಿ ಮನೆ ಖರೀದಿಸಿದ್ದಾರೆ. ಇನ್ನು ರಿನೋವೇಷನ್ ಕೆಲಸಗಳು, ಪೇಂಟಿಂಗ್ ಕೆಲಸಗಳು ನಡೀತಿದೆ. ಇನ್ನು ಫ್ಯಾಮಿಲಿ ಶಿಫ್ಟ್ ಆಗಿಲ್ಲ. ಇತ್ತೀಚೆಗೆ ಪೂಜೆ ನೆರವೇರಿಸಲಾಗಿದೆ. ಸದಾಶಿವ ನಗರದ ಏರಿಯಾದಲ್ಲಿ ಪ್ರಾಪರ್ಟಿ ಎಷ್ಟು ಕಾಸ್ಟ್ಲಿ ಅಂತ ಗೊತ್ತು. ಹಾಗಾಗಿ ಭಾರೀ ಮೊತ್ತಕ್ಕೆ ಮನೆ ಖರೀದಿಸಿರಬಹುದು. ಎಷ್ಟು ಅಂತ ಗೊತ್ತಿಲ್ಲ" ಎಂದಿದ್ದಾರೆ.

ಉಪೇಂದ್ರ ಫ್ಯಾಮಿಲಿ ಸದಾಶಿವ ನಗರದ ಮನೆಗೆ ಶಿಫ್ಟ್ ಆದರೆ ಕತ್ರಿಗುಪ್ಪೆ ಮನೆಯ ಕಥೆಯೇನು? ಅದನ್ನು ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆ ಮನೆಯನ್ನು ಪ್ರಜಾಕೀಯ ಕಛೇರಿ ಮಾಡಿಕೊಳ್ಳುತ್ತಾರಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಮುರಳಿ ಮೋಹನ್ ಮಾತನಾಡಿ "ಆ ಮನೆ ಫ್ಯಾಮಿಲಿ ವಾಸಕ್ಕಂತ ಕಟ್ಟಿಸಿರುವುದು. ಅದನ್ನು ಕಛೇರಿ ಮಾಡುವುದು ಕಷ್ಟ. ಆದರೆ ಉಪೇಂದ್ರ ಎರಡೂ ಕಡೆ ಓಡಾಡುತ್ತಾರೆ. ಅದನ್ನು ಮಾರುವ ಬಗ್ಗೆಯೂ ಸದ್ಯ ಗೊತ್ತಿಲ್ಲ" ಎಂದು ತಿಳಿಸಿದ್ದಾರೆ.
ಹಿರಿಯ ನಟಿ ಸಹೋಜಾ ದೇವಿ, ಸಹೋದರ ಸುಧೀಂದ್ರ ಕುಟುಂಬ, ಸಂಗೀತ ನಿರ್ದೇಶಕ ಗುರಕಿರಣ್ ಕುಟುಂಬ ಸೇರಿದಂತೆ ಹಲವರು ಉಪೇಂದ್ರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇನ್ನು ಉಪೇಂದ್ರ ಸಿನಿಮಾ ಹಾಗೂ ಪ್ರಜಾಕೀಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪ್ರಜಾಕೀಯದ ಅಭ್ಯರ್ಥಿಗಳನ್ನು ಕಣಕ್ಕಿಸುವ ಕೆಲಸಗಳು ನಡೀತಿದೆ. ಇಂದು ಫ್ಯಾಮಿಲಿ (ಏಪ್ರಿಲ್ 19) ಉಪ್ಪಿ ಮಗಳು ಐಶ್ವರ್ಯಳ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.


Click it and Unblock the Notifications











