ಮೂರ್ಖರ ದಿನದಂದು ಕೊನೆಗೂ ಸೀಕ್ರೆಟ್ ಲಿಂಕ್ ಹಂಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲಿಂಕ್ ವಿಚಾರ ಪದೆ ಪದೇ ಎಳೆದು ತರುತ್ತಿದ್ದಾರೆ. 15 ದಿನಗಳ ಹಿಂದೆ "ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ, ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ" ಎಂದು ಕುತೂಹಲ ಮೂಡಿಸಿದ್ದರು.
ಉಪೇಂದ್ರ ಯಾವ ಲಿಂಕ್ ಪೋಸ್ಟ್ ಮಾಡ್ತಾರಪ್ಪಾ? ಅದನ್ನು ಯಾಕೆ ಯಾರಿಗೂ ಶೇರ್ ಮಾಡಬಾರದು ಎಂದು ಅಭಿಮಾನಿಗಳು ತಲೆಗೆ ಹುಳಬಿಟ್ಟುಕೊಂಡಿದ್ದರು. ಬಳಿಕ ಹೇಳಿದಂತೆ ಲಿಂಕ್ ಪೋಸ್ಟ್ ಮಾಡಿದ್ರು. ಏನಪ್ಪಾ ಅದು ಎಂದು ಕ್ಲಿಕ್ ಮಾಡಿ ನೋಡದವರಿಗೆ ಅಚ್ಚರಿ ಕಾದಿತ್ತು. ಗ್ಯಾಸ್ ಸಿಲಿಂಡರ್ ಫೋಟೊ ಹಾಕಿ ಅದರ ಲಿಂಕ್ ಶೇರ್ ಮಾಡಿದ್ದರು.

"ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ .. ಅದಕ್ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ. ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ? ಹಾಗೆ ನಾನ್ ಮುಂದೆ ಹಾಕೋ ಲಿಂಕ್‌ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ..( ಯಾವಾಗ ? ) ಕ್ಲಿಕ್ ಮಾಡ್ಬೇಡಿ.. ಕೇಳಲೂ ಬೇಡಿ ನಂಗ್ಯಾಕ್ ಈ ಟ್ರಬಲ್" ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು.
ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಅಭಾವ ಶುರುವಾಗಿದೆ. ಇದೇ ವಿಚಾರವನ್ನು ಪ್ರಸ್ತಾಪಿಸಿ ಉಪ್ಪಿ ಆ ರೀತಿ ಪೋಸ್ಟ್ ಮಾಡಿದ್ದರು. ಬುದ್ಧವಂತನ ಚಮಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಆದರೂ ಇದೆಲ್ಲಾ ಹಳೇದಾಯ್ತು. ಅಖಾಡಕ್ಕೆ ಇಳಿಬೇಕು ಸಾರ್ ಎಂದು ಉಪ್ಪಿಗೆ ಸಲಹೆ ನೀಡಿದ್ದರು.
ಎರಡು ದಿನಗಳ ಹಿಂದೆ ಮತ್ತೆ ಲಿಂಕ್ ಪೋಸ್ಟ್ ಮಾಡುವುದಾಗಿ ಉಪ್ಪಿ ಹೇಳಿದ್ದರು. "ಏಪ್ರಿಲ್ 1, ಈ ದಿನ ನಿಜವಾಗಿಯೂ ನಿಮ್ಮೊಂದಿಗೆ ಸರಿಯಾದ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ ..... (ಇದು ಮೂರ್ಖರ ದಿನ ಎಂದು ಕನ್ಫ್ಯೂಸ್ ಆಗಬೇಡಿ )" ಎಂದು ಅಚ್ಚರಿ ಮೂಡಿಸಿದ್ದರು. ಆ ದಿನ ಬಂದಿದೆ. ಉಪ್ಪಿ ಹೇಳಿದಂತೆ ಲಿಂಕ್ ಶೇರ್ ಮಾಡಿದ್ದಾರೆ. ಅದು 'ಪ್ರಜಾಕೀಯ' ಆಪ್ ಲಿಂಕ್.. "ಸ್ವತಂತ್ರರಿಗೆ ಮಾತ್ರ" ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕು ಅಂದ್ರೆ ಪ್ರಜಾಕೀಯ ಬೆಂಬಲಿಸಿ ಜೊತೆಗೆ ನಿಲ್ಲಿ ಎಂದು ಈ ಮೂಲಕ ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದಾರೆ.
8 ವರ್ಷಗಳ ಹಿಂದೆ ನಟ ಉಪೇಂದ್ರ ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಭಾರೀ ಸುದ್ದಿ ಆಗಿತ್ತು. ಆದರೆ ರಾಜಕೀಯ ಬೇಡ ಪ್ರಜಾಕೀಯ ಬೇಕು ಎಂದು ರಿಯಲ್ ಸ್ಟಾರ್ ವಾದಿಸಿದ್ದರು. 2018ರಲ್ಲಿ ನಟ ಉಪೇಂದ್ರ 'ಉತ್ತಮ ಪ್ರಜಾಕೀಯ ಪಕ್ಷ' ಸ್ಥಾಪಿಸಿದ್ದರು. ಇಲ್ಲಿ ಪ್ರಜೆಗಳೇ ಪ್ರಭುಗಳು. ರಾಜಕೀಯ ಬೇಡವೇ ಬೇಡ ಎಂದಿದ್ದರು. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ, ಮತ್ತು ಶಿಕ್ಷಣ-ಆರೋಗ್ಯಕ್ಕೆ ಆದ್ಯತೆ ನೀಡುವ ಜನಮುಖಿ ವ್ಯವಸ್ಥೆ ಬೇಕು ಎಂದರು.
ಹಣವಿಲ್ಲದೇ ಜನರನ್ನು ತಲುಪಿ ಚುನಾಯಿತರಾಗಿ ಜನಸೇವೆ ಮಾಡಬೇಕು ಎಂದರು. ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ ಉಪೇಂದ್ರ ಮಾತ್ರ ಚುನಾವಣೆಗೆ ನಿಲ್ಲಲೇ ಇಲ್ಲ. ನೀವು ಸಕ್ರಿಯ ರಾಜಕಾರಣಕ್ಕೆ ಬನ್ನಿ, ಚುನಾವಣೆಗೆ ಸ್ಪರ್ಧಿಸಿ ಎಂದು ಅಭಿಮಾನಿಗಳು ಮನವಿ ಮಾಡುತ್ತಲೇ ಇದ್ದಾರೆ. ಉಪ್ಪಿ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. '45' ಬಳಿಕ 'ಭಾರ್ಗವ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











