ವಿವಾಹ ವಾರ್ಷಿಕೋತ್ಸವದ ದಿನವೇ ಸಿಂಹ-ಪ್ರಿಯ ಮನೆಗೆ ಹೊಸ ಅತಿಥಿ ಆಗಮನ
ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ವಾರ್ಷಿಕೋತ್ಸವದ ದಿನವೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಕೆಲ ದಿನಗಳ ಹಿಂದೆ ಹರಿಪ್ರಿಯ ಗರ್ಭಿಣಿ ಆಗಿರುವ ವಿಚಾರ ಹಂಚಿಕೊಂಡಿದ್ದರು.
ಇತ್ತೀಚೆಗೆ ಹರಿಪ್ರಿಯಾ ಸೀಮಂತಶಾಸ್ತ್ರ ಕೂಡ ನಡೆದಿತ್ತು. ಬೇಬಿ ಬಂಪ್ ಫೋಟೊಶೂಟ್‌ಗಳನ್ನು ಮಾಡಿ ದಂಪತಿ ಹಂಚಿಕೊಂಡಿದ್ದರು. ಇತ್ತೀಚೆಗೆ ಇಬ್ಬರೂ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿ ಪ್ರವಾಸ ಕೈಗೊಂಡು ಹ್ಯಾಪಿ ಟೈಂ ಸ್ಪೆಂಡ್ ಮಾಡುತ್ತಿದ್ದರು. ಇದೀಗ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

ತಾಯಿ, ಮಗು ಆರೋಗ್ಯವಾಗಿದ್ದಾರೆ. ಸ್ವತಃ ನಟ ವಸಿಷ್ಠ ಸಿಂಹ ಈ ಸಿಹಿ ಸುದ್ದಿ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಜನವರಿ 26, 2023ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆ ನಡೆದಿತ್ತು. ಬಳಿಕ ಜನವರಿ 28ರಂದು ರಿಸೆಪ್ಷನ್ ನಡೆದಿತ್ತು. ಇನ್ನು ತಮ್ಮಿಬ್ಬರ ಪ್ರೀತಿ ಬಗ್ಗೆ ಇಬ್ಬರೂ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.
ಮೊದಲಿಗೆ ಸ್ನೇಹಿತರಾಗಿದ್ದೆವು. ಒಂದು ಸಿನಿಮಾದಲ್ಲಿ ಕೂಡ ಒಟ್ಟಿಗೆ ಕೆಲಸ ಮಾಡಿದ್ದೆವು. ಎರಡು ಕುಟುಂಬಗಳಾಗಿ ಬೆರೆಯುತ್ತಿದ್ದೆವು. ಪರಸ್ಪರ ಒಬ್ಬರ ಕಾಲು ಮತ್ತೊಬ್ಬರ ಎಳೆಯುತ್ತಾ ಖುಷಿಯಾಗಿ ಇದ್ದೆವು. ಹರಿಪ್ರಿಯಾ ಚೆನ್ನಾಗಿ ಚಿತ್ರಕಲೆ ಬಿಡಿಸುತ್ತಾರೆ. ಅದು ನನಗೆ ಇಷ್ಟ. ಬಳಿಕ ಎರಡು ಘಟನೆಗಳು ನಡೆಯಿತು. ಅದು ಬಹಳ ವೈಯಕ್ತಿಕ. ಆ ಎರಡು ಘಟನೆಗಳ ಸಮಯದಲ್ಲಿ ಗೆಳತಿಯಾಗಿ ಹರಿಪ್ರಿಯಾ ಜೊತೆಗೆ ನಿಂತಿದ್ದರು. ಕೊನೆಗೆ ನಾನೇ ಪ್ರಪೋಸ್ ಮಾಡಿದ್ದೆ ಎಂದು ವಸಿಷ್ಠ ಸಿಂಹ ಹೇಳಿಕೊಂಡಿದ್ದರು.
ಮಾನಸಿಕವಾಗಿ ಆ ಸಮಯದಲ್ಲಿ ನಾನು ಕೂಡ ಬಿಕ್ಕಟ್ಟಿನಲ್ಲಿದ್ದೆ. ಆಗ ವಸಿಷ್ಠ ನನ್ನ ಬೆಂಬಲ ನಿಂತಿದ್ದರು. ಆ ಪರಸ್ಪರ ಗೌರವಕ್ಕೆ ಒಂದು ಹೆಸರು ಕೊಡಬೇಕು ಅಂದಾಗ ಅದು ಪ್ರೀತಿ ಆಯಿತು. ಅವರು ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದರು. ನಾನು ತಂದೆಯನ್ನು ಕಳೆದುಕೊಂಡಿದ್ದೆ. ನಮ್ಮ ತಂದೆಯಲ್ಲಿದ್ದ ಗುಣಗಳು ವಸಿಷ್ಠ ಅವರಲ್ಲಿ ಕಂಡೆ ಎಂದು ಹರಿಪ್ರಿಯಾ ಹೇಳಿದ್ದರು.
ಹರಿಪ್ರಿಯಾ ಅವರ ತಂದೆಯ ಶ್ರಾದ್ಧ ಕಾರ್ಯಕ್ರಮದ ದಿನವೇ, ನೀವು ಮಾತನಾಡಬೇಡಿ, ನಾನು ಏನೋ ಹೇಳಬೇಕು ಎಂದು ನನ್ನ ಮನಸ್ಸಿನಲ್ಲಿ ಇದ್ದಿದ್ದನ್ನೆಲ್ಲಾ ಹೇಳಿಬಿಟ್ಟೆ. ನಾನೇ ಪ್ರಪೋಸ್ ಮಾಡಿದ್ದೆ ಎಂದು ವಸಿಷ್ಠ ಹೇಳಿದ್ದರು. ಆ ಸಮಯದಲ್ಲಿ ನನಗೂ ಇಷ್ಟ ಇತ್ತು. ತಂದೆ ಬಿಟ್ಟು ಹೋಗಿದ್ದ ದಿನ ನಮ್ಮ ತಂದೆಯೇ ವಸಿಷ್ಠ ಅವರನ್ನು ನನಗೆ ಕೊಟ್ಟರು ಅನ್ನಿಸಿತು ಎಂದು ಹರಿಪ್ರಿಯಾ ಕೂಡ ಹೇಳಿಕೊಂಡಿದ್ದರು.


Click it and Unblock the Notifications











