ಕನ್ನಡಪರ ಹೋರಾಟಗಾರರನ್ನು ಕೆಣಕಿದ್ರಾ ನಟ ವಸಿಷ್ಠ ಸಿಂಹ? ಅಷ್ಟಕ್ಕೂ ಏನಾಯ್ತು?
ಸೋಶಿಯಲ್ ಮೀಡಿಯಾದಲ್ಲಿ ನಟ ವಸಿಷ್ಠ ಸಿಂಹ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಅವರು ಮಾಡಿದ್ದ ಒಂದು ಟ್ವೀಟ್. ಕೂಡಲೇ ಅದನ್ನು ಅದನ್ನು ಡಿಲೀಟ್ ಮಾಡಿ ಸ್ಪಷ್ಟನೆ ಕೊಡಲು ಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಕೆಲವರು ವಸಿಷ್ಠ ಸಿಂಹ ವಿರುದ್ಧ ಕೆಂಡ ಕಾರುತ್ತಿದ್ದಾರೆ.
'ಕಾಂತಾರ- 1' ಸಿನಿಮಾ ಬಾಯ್ಕಾಟ್ ಮಾಡ್ತೀವಿ ಎಂದು ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಗಳು ಹೇಳಿದ್ದರು. ಕರ್ನಾಟಕದಲ್ಲಿ 'OG' ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಹೀಗೆ ಬೇಸರ ವ್ಯಕ್ತಪಡಿಸಿದ್ದರು. ಹೈದರಾಬಾದ್‌ನಲ್ಲಿ ರಿಷಬ್ ಶೆಟ್ಟಿ ತೆಲುಗು ಮಾತನಾಡಲಿಲ್ಲ ಎಂದು ಕ್ಯಾತೆ ತೆಗೆದಿದ್ದರು. ಬಳಿಕ ಸ್ವತಃ ಪವನ್ ಕಲ್ಯಾಣ್ ಇದಕ್ಕೆ ಇತಿಶ್ರೀ ಹಾಡಿದ್ದರು.

ಕರ್ನಾಟಕದಲ್ಲಿ 'OG' ಸಿನಿಮಾ ಪ್ರದರ್ಶನದ ವೇಳೆ ಡಿಜೆ ಹಾಕಿ ಸಂಭ್ರಮಿಸಲು ಅಭಿಮಾನಿಗಳು ಯತ್ನಿಸಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ತೆಲುಗು ಚಿತ್ರ ಪ್ರದರ್ಶನಕ್ಕೆ ಬಿಡುತ್ತಿಲ್ಲ ಎಂದು ತಪ್ಪಾಗಿ ಬಿಂಬಿಸಲಾಗಿತ್ತು. ಇದೇ ವಿಚಾರವಾಗಿ ಪವನ್ ಮಾತನಾಡಿ ಯಾರೋ ಕೆಲವರು ಮಾಡಿದ್ದಕ್ಕೆ ಕಲೆಗೆ ಸಮಸ್ಯೆ ಆಗಬಾರದು. ಅದಕ್ಕೆ ಆಂಧ್ರದಲ್ಲಿ 'ಕಾಂತಾರ- 1' ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಲು ಅವಕಾಶ ಮಾಡಿಕೊಟ್ಟೆವು ಎಂದಿದ್ದರು.
ಪವನ್ ಮಾತನಾಡಿದ್ದ ವೀಡಿಯೋವನ್ನು ಸನಾತನ ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಕನ್ನಡಪರ ಹೋರಾಟಗಾರರನ್ನು ವ್ಯಂಗ್ಯ ಮಾಡಿ ಕ್ಯಾಪ್ಷನ್ ಕೊಟ್ಟಿದ್ದರು. ಇದನ್ನು ವಸಿಷ್ಠ ಸಿಂಹ ಹಂಚಿಕೊಂಡು "ರೆಡ್ ಹಾರ್ಟ್ ಸಿಂಬಲ್" ಎಮೋಜಿ ಹಾಕಿದ್ದರು. ಅಂದರೆ ಕನ್ನಡಪರ ಹೋರಾಟಗಾರರನ್ನು ಅವಹೇಳನಕಾರಿಯಾಗಿ ಕರೆದು ಮಾಡಿದ್ದ ಟ್ವೀಟ್ ಅನ್ನು ಶೇರ್ ಮಾಡಿ ಬೆಂಬಲಿಸಿದ್ದರು. ಇದು ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ. ವಸಿಷ್ಠ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೂಡಲೇ ವಸಿಷ್ಠ ಸಿಂಹ ಆ ಟ್ವೀಟ್ ಡಿಲೀಟ್ ಮಾಡಿ ಸ್ಪಷ್ಟನೆ ಕೊಡಲು ಪ್ರಯತ್ನಿಸಿದ್ದಾರೆ. "ಇದು ನಾ ಹಂಚಿಕೊಳ್ಳ ಬಯಸಿದ ವಿಷಯ.. ಇದು ಆಕ್ಚುಲಿ ಚೆನ್ನಾಗಿರೋದು, ಸಮಾಜಕ್ಕೆ ಬೇಕಿರೋದು. ಹ್ಯಾಟ್ಸಪ್ ಪವನ್ ಕಲ್ಯಾಣ್ ಸರ್, ಸಿದ್ಧಾಂತಗಳ ಹೇರಣೆಯಲ್ಲಿ ನಿರತರಾಗಿ ನೊಂದು ಬೆಂದು ಬಳಲುತ್ತಿರುವ ಜೀವಗಳಿಗೆ ಮತ್ತು ಮರೆಯಲ್ಲಿ ಕೂತು ಬೊಬ್ಬಿರಿಯುವ ಕಾಮೆಂಟ್ ಶೂರರಿಗೆ ಒಳಿತಾಗಲೆಂದು ಪ್ರಾರ್ಥನೆ, ಅವರಿಗೆಂದೇ ಈ ಪೋಸ್ಟ್ ಸಮರ್ಪಣೆ" ಎಂದು ಬರೆದು ಪವನ್ ಕಲ್ಯಾಣ್ ಮಾತನಾಡಿದ್ದ ವೀಡಿಯೋ ಶೇರ್ ಮಾಡಿದ್ದಾರೆ.
ವಸಿಷ್ಠ ಸಿಂಹ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿಲ್ಲ. "ನೀನು ಈ ವೀಡಿಯೋ ಹಂಚಿಕೊಂಡು ಮೊದಲೇ ಈ ರೀತಿ ಪೋಸ್ಟ್ ಮಾಡಿದ್ದರೆ ಯಾರು ಕೇಳುತ್ತಿರಲಿಲ್ಲ. ಯಾವುದೋ ಪೇಜ್‌ನಲ್ಲಿ ಕನ್ನಡಪರ ಹೋರಾಟಗಾರರ ಬಗ್ಗೆ ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದನ್ನು ಬೆಂಬಲಿಸಿದ್ದು ತಪ್ಪು. ಈಗ ಸ್ಪಷ್ಟನೆ ಕೊಟ್ಟು ಏನು ಪ್ರಯೋಜನ?" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಜನ ವಸಿಷ್ಠ ಸಿಂಹ ಪರ ಮಾತನಾಡುತ್ತಿದ್ದಾರೆ.
ಇತ್ತೀಚೆಗೆ ಪರಭಾಷೆ ಸಿನಿಮಾಗಳಲ್ಲಿ ಕೂಡ ವಸಿಷ್ಠ ಸಿಂಹ ಹೆಚ್ಚು ನಟಿಸುತ್ತಿದ್ದಾರೆ. ಒಳ್ಳೆ ಒಳ್ಳೆ ಪಾತ್ರಗಳು ಅರಸಿ ಬರ್ತಿವೆ. ತಮಿಳು, ತೆಲುಗು ಬಳಿಕ ಈಗ ಒಂದು ಮಲಯಾಳಂ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್ ಜೊತೆ 'ರಾಮ್' ಎಂಬ ಚಿತ್ರದಲ್ಲಿ ತೆರೆಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











