ಸ್ಪಂದನಾ ಅಗಲಿ ಒಂದು ವರ್ಷ; ತನ್ನ ಬಾಳಿನ ಚಿನ್ನವನ್ನು ನೆನೆದ ಚಿನ್ನಾರಿ ಮುತ್ತನ ಬದುಕು ಈಗ ಹೇಗಿದೆ?
ಸರಿಯಾಗಿ ಇಂದಿಗೆ ಒಂದು ವರ್ಷದ ಹಿಂದೆ. ಎಲ್ಲವೂ ಸರಿಯಾಗಿತ್ತು. ಸ್ಪಂದನಾ ತನ್ನ ಸ್ನೇಹಿತೆಯರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆಂದು ಹೋಗಿದ್ದರು. ವಿಜಯ್ ರಾಘವೇಂದ್ರ ಬೆಂಗಳೂರಿನಲ್ಲಿಯೇ ಉಳಿದಿದ್ದರು. ಆದರೆ ರಾತ್ರಿ ಬಂದ ಕರೆ ವಿಜಯ್ ರಾಘವೇಂದ್ರ ಅವರನ್ನು ದಿಘ್ಭ್ರಮೆಗೊಳಿಸಿತ್ತು. ಸ್ಪಂದನಾ ಉಸಿರು ನಿಲ್ಲಿಸಿದ ಸುದ್ದಿಯದು.
ಬೆಳಗ್ಗೆಯಾದ ಕೂಡಲೇ ಎಲ್ಲಾ ಮಾಧ್ಯಮದಲ್ಲೂ ಅದೇ ಸುದ್ದಿ. ಆತ್ಮೀಯರಿಗೆ ಶಾಕ್, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು. ಕೇಳಿದ ಸುದ್ದಿ ಎಲ್ಲಾ ಸುಳ್ಳಾಗಲೆಂದೇ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ವಿಧಿಗೆ ಸ್ಪಂದನಾ ತುಂಬಾ ಇಷ್ಟವಾಗಿ ಬಿಟ್ಡಿದ್ದರು ಅನ್ಸುತ್ತೆ. ಯಾರ ಪ್ರಾರ್ಥನೆಗೂ ಕಿಕೊಡದೆ ಕರೆದುಕೊಂಡು ಹೋಗಿತ್ತು.

ಹೆಂಡತಿಯ ಸ್ಥಿತಿ ಅರಿತ ವಿಜಯ್ ರಾಘವೇಂದ್ರ ರಾತ್ರೋ ರಾತ್ರಿ ಬ್ಯಾಂಕಾಕ್‌ಗೆ ಪಯಣ ಬೆಳೆಸಿದ್ದರು. ಅತ್ತ ಹೆಂಡತಿ ಇನ್ನಿಲ್ಲ ಎಂಬ ನೋವಿನಲ್ಲಿ ಒಂಟಿ ಪಯಣ, ಇತ್ತ ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿ ಮಗ, ಮನೆಯವರು. ಅಂದು ಅವರನ್ನು ನೋಡುವ ಧೈರ್ಯ ಯಾರಿಗೂ ಬರಲಿಲ್ಲ. ಮನೆಯ ಬಳಿ ಬಂದವರ ಮುಖದಲ್ಲೆಲ್ಲಾ ಮೌನ ಆವರಿಸಿತ್ತು.
ಬ್ಯಾಂಕಾಕ್‌ನಲ್ಲಿ ಹಾರ್ಟ್ ಅಟ್ಯಾಕ್
ಸ್ಪಂದನಾ ಇನ್ನಿಲ್ಲ ಎಂದು ಗೊತ್ತಾಗುತ್ತಿದ್ದಂತೆ ವಿಜಯ್ ವಿದೇಶಕ್ಕೆ ಪಯಣ ಬೆಳೆಸಿದ್ದರು. ವಿದೇಶದಿಂದ ಮೃತದೇಹ ತರುವುದಕ್ಕೆ ಎರಡು ದಿನ ಸಮಯ ಬೇಕಾಯಿತು. ಮಂಗಳವಾರ ಆಗಸ್ಟ್ 8ರಂದು ಬೆಂಗಳೂರಿಗೆ ಸ್ಪಂದನಾ ಮೃತದೇಹ ಬಂದಿತ್ತು. ಬ್ಯಾಂಕಾಕ್‌ನಿಂದ ಹೆಂಡತಿಯ ಮೃತದೇಹದ ಜೊತೆಗೆ ಪಯಣ ಮಾಡಿದ್ದ ರಾಘು, ಸೋತು ಹೋಗಿದ್ದರು. ಮೌನಕ್ಕೆ ಜಾರಿದ್ದರು.
ಪತ್ನಿಯನ್ನು ನೆನೆದ ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ನಡುವೆ ಅದೆಷ್ಟು ಲವ್ ಇತ್ತು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಪ್ರೀತಿಸಿ ಮದುವೆಯಾದಾಗಿನಿಂದಲೂ ಈ ಜೋಡಿ ಅಷ್ಟೇ ಕ್ಯೂಟ್ ಆಗಿ, ಮಾದರಿಯಾಗಿ ಲೈಫ್ ಲೀಡ್ ಮಾಡಿದ್ದರು. ತನ್ನ ಹೆಂಡತಿಯನ್ನು ಚಿನ್ನಾ ಅಂತಾನೇ ಕರೆಯುತ್ತಿದ್ದರು ರಾಘು. ಈ ದಂಪತಿಗೆ ಶೌರ್ಯ ಎಂಬ ಮುದ್ದಾದ ಮಗನಿದ್ದಾನೆ. ಇನ್ನು ಚಿಕ್ಕವನು. ಮನೆ ನೋಡಿಕೊಳ್ಳುತ್ತಿದ್ದರು, ಬಿಸಿನೆಸ್ ಕಡೆಗೂ ಬೆಂಬಲ ನೀಡುತ್ತಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
ದಿಢೀರನೇ ಸ್ಪಂದನಾ ಹೋದಾಗ ರಾಘುಗೆ ಏನು ಮಾಡಬೇಕೆಂಬುದೇ ತಿಳಯದಂತಾಗಿ ಬಿಟ್ಟಿದ್ದರು. ಇಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ, 'ಚಿನ್ನ ಮೌನದಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು' ಎಂದು ಬರೆದಿದ್ದಾರೆ. 'ಐ ಲವ್ ಯು ಚಿನ್ನ' ಎಂದು ಸ್ಟೋರಿಯಲ್ಲಿ ಹಾಕಿದ್ದಾರೆ.
ವಿಜಯ್ ರಾಘವೇಂದ್ರ ಈ ದಿನ ಮರೆಯುವುದಕ್ಕೆ ಸಾಧ್ಯವಿಲ್ಲ. ಅಷ್ಟು ಪ್ರೀತಿ ಮಾಡುತ್ತಿದ್ದ ಹೆಂಡತಿಯನ್ನು ಕಳೆದುಕೊಂಡು ಬದುಕುವುದು ಸುಲಭವಲ್ಲ. ಹೀಗಾಗಿ ಕಮೆಂಟ್ ಮಾಡುವ ಮೂಲಕ ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವಾನ ಹೇಳುತ್ತಿದ್ದಾರೆ, ಸಮಾಧಾನ ಮಾಡುತ್ತಿದ್ದಾರೆ.
ಡಿಕೆಡಿಯಲ್ಲಿ ವಿಜಯ್ ರಾಘವೇಂದ್ರ
ರಾಘು ಮನೆಯಲ್ಲಿ ಮೂರೇ ಜನ ಗಂಡ, ಹೆಂಡತಿ, ಮಗ ಸುಖ ಸಂಸಾರ ನಡೆಸುತ್ತಿದ್ದರು. ದಿಢೀರನೆ ಅಮ್ಮ ಇಲ್ಲವಾದಾಗ ಆ ಮಗುವಿನ ಸ್ಥಿತಿ ಹೇಗಾಗಬೇಡ. ಸದಾ ಹೆಂಡತಿಯನ್ನು ಮುದ್ದಾಡುತ್ತಾ, ಕಾಲೆಳೆಯುತ್ತಾ, ಬೆಸ್ಟ್ ಕಪಲ್ ಆಗಿದ್ದರು ರಾಘು ಮತ್ತು ಸ್ಪಂದನಾ. ಸ್ಪಂದನಾ ನಿಧನರಾದ ಮೇಲೆ ರಾಘು ಮಾತಾಡುವುದಕ್ಕೇನೆ ಸಮಯ ತೆಗೆದುಕೊಂಡರು. ಕೆಲವು ತಿಂಗಳ ಬಳಿಕ ವಾಸ್ತವ ಅರ್ಥ ಮಾಡಿಕೊಂಡು, ಕೆಲಸದ ಕಡೆ ಗಮನ ಹರಿಸಿದರು.
ನಿಧಾನವಾಗಿ ರಾಘು ಸಿನಿಮಾ ಕೆಲಸಗಳ ಕಡೆ ಮುಖ ಮಾಡಿದರು. ಆಗಾಗ್ಗೆ ಪತ್ನಿಯನ್ನು ನೆನೆದು ಪೋಸ್ಟ್ ಮಾಡುತ್ತಿದ್ದರು. ಇದೀಗ ಮತ್ತೆ ಡಿಕೆಡಿ ವೇದಿಕೆಗೆ ಬಂದಿದ್ದಾರೆ. ಸದ್ಯ ಎಲ್ಲರ ಜೊತೆಗೂಡಿ, ನಕ್ಕು ನಲಿಯುವ ಮೂಲಕ ಕೊಂಚ ಆ ನೋವನ್ನ ಮರೆಯುತ್ತಿದ್ದಾರೆ. ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಈ ವರ್ಷ ಬಂದ 'ಕೇಸ್ ಆಫ್ ಕೊಂಡಾಣ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.


Click it and Unblock the Notifications











