ನೋವಿನಲ್ಲಿ ಸಂಭ್ರಮ ಬೇಡ: ನಟ ವಿನೋದ್ ಪ್ರಭಾಕರ್!
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ತಿಂಗಳುಗಳು ಉರುಳುತ್ತಲಿವೆ. ಆದರೆ ಅವರು ಇಲ್ಲ ಎನ್ನುವ ನೋವನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಅಪ್ಪು ಜೊತೆಗೆ ಒಡನಾಟ ಇದ್ದ ಸಿನಿಮಾ ಮಂದಿ ಆ ನೋವನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ ಆಗಿಲ್ಲ.
ಅಪ್ಪು ಇಲ್ಲವಾದ ಮೇಲೆ ಸಾಕಷ್ಟು ಅನಿವಾರ್ಯ ಬದಲಾವಣೆಗಳು ಚಿತ್ರರಂಗದಲ್ಲಿ ಆಗುತ್ತಿವೆ. ಸಿನಿಮಾ ಅಂದರೇನೆ ಒಂದು ಸಂಭ್ರಮ. ಆದರೆ ಅಪ್ಪುಗಾಗಿ ಅಂತಹ ಎಷ್ಟೋ ಸಂಭ್ರಮಗಳನ್ನು ಯಾರು ಆಚರಿಸಿಲ್ಲ. ಯಾಕೆಂದರೆ ಅಪ್ಪು ಅಷ್ಟರ ಮಟ್ಟಿಗೆ ಎಲ್ಲರ ಮನಸ್ಸನ್ನು ಹೊಕ್ಕಿದ್ದಾರೆ.
ಇದೀಗ ನಟ ವಿನೋದ್ ಪ್ರಭಾಕರ್ ಕೂಡ ತಮ್ಮ ಹುಟ್ಟು ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಈ ಬಾರಿ ಹುಟ್ಟು ಹಬ್ಬದ ಸಂಭ್ರಮ ಬೇಡ ಎಂದು ಮನವಿ ಮಾಡಿದ್ದಾರೆ.

ನಟ ವಿನೋದ್ ಪ್ರಭಾಕರ್‌ಗೆ ಹುಟ್ಟು ಹಬ್ಬ ಸಂಭ್ರಮ!
ಶುಕ್ರವಾರ (ಡಿಸೆಂಬರ್ 3) ನಟ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ. ಸಿನಿಮಾ ತಾರೆಯ ಹುಟ್ಟು ಹಬ್ಬ ಅಂದರೆ ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ತಮ್ಮ ನೆಚ್ಚಿನ ತಾರೆಯನ್ನು ಭೇಟಿ ಮಾಡಲು ಅವರ ಅಭಿಮಾನಿಗಳಿಗೆ ಅದೊಂದು ಅವಕಾಶ ಆಗಿರುತ್ತದೆ. ಅಂತೆಯೇ ನಟ ವಿನೋದ್ ಪ್ರಭಾಕರ್ ಕೂಡ ತಮ್ಮ ಹುಟ್ಟು ಹಬ್ಬವನ್ನು ಪ್ರತೀ ಬಾರಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ.

ಅಪ್ಪು ಅಗಲಿಕೆ ನೋವಿನಲ್ಲಿ ಹುಟ್ಟು ಹಬ್ಬದ ಸಂಭ್ರಮಕ್ಕೆ ಬ್ರೇಕ್!
ವಿನೋದ್ ಪ್ರಭಾಕರ್ ಕೂಡ ಅಭಿಮಾನಿಗಳು ತಂದ ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಮಾಡಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅವರು ಹುಟ್ಟು ಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ.
ನಟ ವಿನೋದ್ ಪ್ರಭಾಕರ್ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗ ಇದೆ. ಹಾಗಾಗಿ ಪ್ರತಿವರ್ಷ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾದ ಸಂಭ್ರಮಾಚರಣೆ ಇರುತ್ತೆ. ಅಭಿಮಾನಿಗಳು ಮನೆಯ ಬಳಿ ಬಂದು ಅವರಿಗೆ ಶುಭಕೋರಿ, ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.

ಅಭಿಮಾನಿಗಳಲ್ಲಿ ವಿನೋದ್ ಪ್ರಭಾಕರ್ ಮನವಿ!
ಈ ಬಾರಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಬೇಡ ಎಂದು ವಿನೋದ್ ಪ್ರಭಾಕರ್ ತಮ್ಮ ಅಭಿಮಾನಿಗಳಲ್ಲಿ ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿಕೊಂಡಿದ್ದಾರೆ.
"ಜೈ ಕರ್ನಾಟಕ. ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ ನೋವಿನಿಂದ ಹೊರಬರಲು ಬಹಳ ಸಮಯ ಬೇಕು. ಅವರು ಅಷ್ಟು ಸುಲಭವಾಗಿ ಮರೆಯುವಂತಹ ವ್ಯಕ್ತಿ ಅಲ್ಲ. ಇಡೀ ಕನ್ನಡ ಜನತೆ ಹಾಗೂ ನಮ್ಮ ಚಿತ್ರರಂಗವು ದುಃಖದಲ್ಲಿರುವ ಈ ಸಮಯದಲ್ಲಿ, ನನ್ನ ಹುಟ್ಟು ಹಬ್ಬವನ್ನು ಈ ಶುಕ್ರವಾರ ಅಂದರೆ 3-12-2021ರಂದು ಆಚರಿಸಿಕೊಳ್ಳಲು ಮನಸ್ಸಾಗುತ್ತಿಲ್ಲ. ದಯವಿಟ್ಟು ನನ್ನ ಸ್ನೇಹಿತರು, ಅಭಿಮಾನಿಗಳು ಸಹಕರಿಸಬೇಕು ಮತ್ತು ನಿಮ್ಮ ಪ್ರೀತಿಯೊಂದಿದ್ದರೆ ಅಷ್ಟೇ ಸಾಕು. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ" ಎಂದು ತಮ್ಮ ಪೋಸ್ಟ್‌ನಲ್ಲಿ ವಿನೋನ್ ಪ್ರಭಾಕರ್ ಬರೆದುಕೊಂಡಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ವಿನೋದ್ ಪ್ರಭಾಕರ್ ಬ್ಯುಸಿ!
ನಟ ವಿನೋದ್ ಪ್ರಭಾಕರ್ ಕೊನೆಯದಾಗಿ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ರಾಬರ್ಟ್ ಬಳಿಕ ವಿನೋದ್ ಪ್ರಭಾಕರ್ ಅವರ ಸಿನಿಮಾಗಳ ಮೇಲಿನ ಹೆಚ್ಚಾಗಿದೆ. ಲಂಕಾಸುರ ಸೇರಿದಂತೆ, ಹಲವು ಚಿತ್ರಗಳಲ್ಲಿ ವಿನೋದ್ ಪ್ರಭಾಕರ್ ಬ್ಯುಸಿ ಇದ್ದು, ಚಿತ್ರಗಳ ರಿಲೀಸ್‌ಗಾಗಿ ಎದುರು ನೋಡುತ್ತಲಿದ್ದಾರೆ.


Click it and Unblock the Notifications











